ADVERTISEMENT

ಅಣ್ಣಾಗಿರಿ ಸ್ಫೂರ್ತಿಯಲ್ಲಿ ಸಾಯಿಗಿರಿ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2011, 19:30 IST
Last Updated 15 ಸೆಪ್ಟೆಂಬರ್ 2011, 19:30 IST

ಕಣ್ಣೀರಿನ ಕೋಡಿ ಹರಿಸುವ ಚಿತ್ರಗಳಿಗೆ ಹೆಸರುವಾಸಿಯಾದ ನಿರ್ದೇಶಕ ಓಂ ಸಾಯಿಪ್ರಕಾಶ್ ಭ್ರಷ್ಟಾಚಾರದ ವಿರುದ್ಧ ದನಿ ಎತ್ತಿದ್ದಾರೆ. ಈ ರೀತಿ ದನಿ ಎತ್ತಲು ತಮಗೆ ಅಣ್ಣಾ ಹಜಾರೆ ಅವರೇ ಸ್ಫೂರ್ತಿ ಎಂದೂ ಅವರು ಹೇಳಿಕೊಂಡಿದ್ದಾರೆ. ಆ ಸ್ಫೂರ್ತಿಯ ಫಲವೇ `ಭ್ರಷ್ಟಾಚಾರ~ ಎಂಬ ಚಿತ್ರ. 

ಭ್ರಷ್ಟಾಚಾರ ವಿರೋಧಿ ಅಲೆ ಭುಗಿಲೆದ್ದಿರುವ ಈ ಕಾಲಘಟ್ಟದಲ್ಲಿ ಅದನ್ನೇ ವಸ್ತುವನ್ನಾಗಿಟ್ಟುಕೊಂಡು ಸಿನಿಮಾ ಮಾಡಲು ಹೊರಟಿರುವ ಚಿತ್ರತಂಡ ಮುಹೂರ್ತದ ಬಳಿಕ ಮಾಡಹೊರಟಿರುವ ಚಿತ್ರದ ಬಗ್ಗೆ ಮಾತುಗಳನ್ನು ಹಂಚಿಕೊಂಡಿತು.

ಈ ಚಿತ್ರದಲ್ಲಿ ಉಪವಾಸ ಸತ್ಯಾಗ್ರಹವಿಲ್ಲ. ಚಳವಳಿಯೂ ಇಲ್ಲ. ಅಹಿಂಸಾ ಮಾರ್ಗವೂ ಇದಲ್ಲ. ಸಂಪೂರ್ಣ ಹಿಂಸೆಯೂ ಇಲ್ಲ. ಚಿತ್ರಕ್ಕೆ ಸ್ಫೂರ್ತಿಯಾಗಿರುವ `ಅಣ್ಣಾಗಿರಿ~ಯ ಅಂಶಗಳು ಕಾಣಿಸುವುದೇ ಇಲ್ಲ. ಇಲ್ಲಿ ಭ್ರಷ್ಟಾಚಾರದ ವಿರುದ್ಧ ಹೋರಾಡುವ ನಾಯಕ ಹೊಡೆದಾಟವನ್ನೂ ಮಾಡುತ್ತಾನೆ. ಹೆದರಿಸಿ ಬೆದರಿಸಿ ಭ್ರಷ್ಟಾಚಾರಿಯನ್ನೇ ಮುಂದಿಟ್ಟುಕೊಂಡು ಭ್ರಷ್ಟಾಚಾರಿಗಳನ್ನು ಸರಿದಾರಿಗೆ ತರುತ್ತಾನೆ.
 
ಇದು ರಾಜಕೀಯ ಭ್ರಷ್ಟಾಚಾರಕ್ಕೆ ಮಾತ್ರ ಸಂಬಂಧಿಸಿದ ಕಥೆ. ನಾಯಕ ವಾಸ್ತವದಲ್ಲಿ ಅಸಾಧ್ಯವೆನಿಸುವ ಭ್ರಷ್ಟಾಚಾರವನ್ನು ಕೇವಲ ಮನಪರಿವರ್ತನೆ ಮೂಲಕ ನಿರ್ಮೂಲನೆ ಮಾಡಿ ತಾರ್ಕಿಕ ಅಂತ್ಯ ಕಾಣಿಸುತ್ತಾನೆ-  ಕಥೆಯ ಎಳೆಯನ್ನು ಸಾಯಿಪ್ರಕಾಶ್ ಬಿಚ್ಚಿಟ್ಟಿದ್ದು ಹೀಗೆ.

ಮಾತು ಮಾತಿನಲ್ಲೂ ಅಣ್ಣಾ ಹಜಾರೆಯನ್ನು ಪ್ರಸ್ತಾಪಿಸುತ್ತಿದ್ದ ಅವರು ಇದು ಪ್ರಜೆಗಳು ಮತ್ತು ಸರ್ಕಾರದ ನಡುವಿನ ಹೋರಾಟ ಎಂಬ ಕೊಸರನ್ನೂ ಹಾಕಿದರು.

ಹಾಲಿವುಡ್ ಚಿತ್ರಗಳ ಪತ್ತೇದಾರಿ ಪಾತ್ರದ ಗೆಟಪ್‌ನಲ್ಲಿದ್ದ ನಾಯಕನಟ ಕಿಶೋರ್ ಹೋರಾಟಕ್ಕಿಳಿಯಲು ಸಿದ್ಧರಾದವರಂತೆ ಕುಳಿತಿದ್ದರು. `ಇದು ವಿಭಿನ್ನ ಕಥೆಯ ಚಿತ್ರ. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯುವಂತೆ ಭ್ರಷ್ಟನೊಬ್ಬನ ಮೂಲಕವೇ ಭ್ರಷ್ಟಾಚಾರವನ್ನು ತೊಲಗಿಸುವುದು ತಮ್ಮ ಪಾತ್ರ ಎಂದು ಹೇಳಿದರು.
 
ರಾಜಕೀಯ ವ್ಯವಸ್ಥೆಯನ್ನು ಬದಲಿಸುವ, ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನವಿದು~ ಎಂದರು. ಚಿತ್ರದಲ್ಲಿ ನಟಿಸುವಂತೆ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರನ್ನು ಕಮರ್ ಕೋರಿದ್ದರಂತೆ. ಆದರೆ ಅವರು ಚಿತ್ರರಂಗದಿಂದ ನಾನು ದೂರವೇ ಇರುತ್ತೇನೆಂದು ಹೇಳಿ ಚಿತ್ರತಂಡಕ್ಕೆ ಶುಭ ಹಾರೈಸಿದರಂತೆ.

ನಾಯಕಿಯಾಗಿ ಭಾವನಾ ರಾವ್ ನಟಿಸಲಿದ್ದಾರೆ. ಅಪರೂಪಕ್ಕೆನ್ನುವಂತೆ ಆದಿ ಲೋಕೇಶ್ ಒಳ್ಳೆಯ ವ್ಯಕ್ತಿತ್ವದ ಪಾತ್ರ ಮಾಡುತ್ತಿದ್ದಾರೆ. ಚಿತ್ರದಲ್ಲಿ ಅವರು ಪೊಲೀಸ್ ದಿರಿಸಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಪ್ರಚಲಿತ ಸನ್ನಿವೇಶಗಳನ್ನು ಚಿತ್ರಕ್ಕನುಗುಣವಾಗಿ ಬದಲಿಸಲಾಗಿದೆ. ಈ ಚಿತ್ರದಲ್ಲಿ ಬೇರೆ ಯಾವ ಚಿತ್ರದ ಛಾಯೆ ಕಾಣಿಸುವುದಿಲ್ಲ ಎಂದು ನಿರ್ಮಾಪಕ ಕಮರ್ ಸ್ಪಷ್ಟಪಡಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.