ADVERTISEMENT

ಅಭಿನಯ ಪರಿಪೂರ್ಣತೆ ಅಸಾಧ್ಯ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2012, 19:30 IST
Last Updated 21 ಆಗಸ್ಟ್ 2012, 19:30 IST
ಅಭಿನಯ ಪರಿಪೂರ್ಣತೆ ಅಸಾಧ್ಯ
ಅಭಿನಯ ಪರಿಪೂರ್ಣತೆ ಅಸಾಧ್ಯ   

`ನಟನೆಯಲ್ಲಿ ಪರಿಪೂರ್ಣತೆ ಇಲ್ಲ ಎಂಬುದನ್ನು ನಂಬಿದವನು ನಾನು. ಕಲೆ, ಸಂಗೀತ ಅಥವಾ ಬರವಣಿಗೆಯಲ್ಲಿ ವ್ಯಕ್ತಿ ಪರಿಪೂರ್ಣನಾಗಲು ಸಾಧ್ಯ. ಆದರೆ ಅಭಿನಯದಲ್ಲಲ್ಲ. ಅದು ಸಾಧ್ಯವಾದ ದಿನ ಆತನ ಕ್ರಿಯಾಶೀಲತೆಯೇ ಕೊನೆಗೊಳ್ಳುತ್ತದೆ. ಅಂದಹಾಗೆ, ನಟನೆಯನ್ನು ಅಳೆಯಲು ಯಾವುದೇ ಮಾನದಂಡವಿಲ್ಲ. ನೀವು ನಿಮ್ಮ ಅಭಿನಯದಿಂದ ಇನ್ನೊಬ್ಬರ ಮನಸ್ಸನ್ನು ಮುಟ್ಟಿದಿರೆಂದರೆ, ನೀವು ಒಳ್ಳೆಯ ನಟ. ಇಲ್ಲವಾದಲ್ಲಿ ಅದು ನಟನೆಯಲ್ಲ~- ಇದು ನಟ ನಾಸಿರುದ್ದೀನ್ ಶಾ ಅಭಿನಯ ಕಲೆಯ ಕುರಿತು ಮಂಡಿಸಿದ ವಾದ.

ಅವರ ಮಾತುಗಳಲ್ಲೇ ಅವರ ಚಿಂತನೆ ಎಂಥದೆಂಬುದು ಅಡಕವಾಗಿದೆ. ಕೇಳಿಸಿಕೊಳ್ಳಿ...

`ನನಗೆ ಎಲ್ಲಾ ಗೊತ್ತು ಎಂದು ಯಾವತ್ತೂ ಅನ್ನಿಸಿಲ್ಲ. ನಟನೆ ಒಂದು ವ್ಯವಹಾರ ಎಂಬುದನ್ನು ಅತಿ ಚಿಕ್ಕ ವಯಸ್ಸಿಗೇ ಅರಿತುಕೊಂಡವನು ನಾನು. ಒಂದು ವ್ಯವಹಾರವನ್ನು ಕರಗತಮಾಡಿಕೊಳ್ಳಲು ಜೀವನವಿಡೀ ಕಲಿಯುತ್ತಲೇ ಇರಬೇಕು, ನಾನು ಈಗಲೂ ಅದನ್ನೇ ಮಾಡುತ್ತಿದ್ದೇನೆ. ವೇದಿಕೆ ಮೇಲಾಗಲೀ ಅಥವಾ ಕ್ಯಾಮೆರಾ ಮುಂದಾಗಲೀ ನಟನೆ ಸ್ವಾಭಾವಿಕ ಎನಿಸಬೇಕು. ಅಭಿನಯ ಎನ್ನುವುದು ಎಂದಿಗೂ ಕರಗದ ಸಂತಸ ಎಂದು ತಿಳಿದುಕೊಂಡರೆ ನಟನೆಯ ಆಳ ಹರಹು ನಿಮಗೆ ಗೋಚರಿಸುತ್ತದೆ.

ADVERTISEMENT

ಪೀಟರ್ ಬ್ರೂಕ್ ಅವರ ವ್ಯಾಖ್ಯಾನವೇ ನನ್ನ ನಟನಾ ಸಾಮರ್ಥ್ಯಕ್ಕೆ ಸ್ಫೂರ್ತಿ. ದಿನದಿಂದ ದಿನಕ್ಕೆ ಒಬ್ಬ ನಟ ಹೇಗೆ ತನ್ನ ಅಭಿನಯದ ಗುಣಮಟ್ಟವನ್ನು ಉತ್ತಮಪಡಿಸಿಕೊಳ್ಳಬೇಕು ಎಂಬುದನ್ನು ಈತ ತಿಳಿಸಿಕೊಟ್ಟಿದ್ದಾನೆ. ನೀವು ಒಂದು ಪಾತ್ರದ ರೂವಾರಿಯಾಗಿದ್ದೀರ ಎಂದಾದರೆ, ಆ ಪಾತ್ರದ ವ್ಯಕ್ತಿತ್ವದ ಬಗ್ಗೆ ನಿಮಗೆ ಸಂಪೂರ್ಣ ಗ್ರಹಿಕೆ ಇರಬೇಕು. ಇದೇ ತಂತ್ರವನ್ನೇ ನಾನೂ ಅಳವಡಿಸಿಕೊಂಡಿದ್ದು. ಇದು ನನಗೆ ಹಲವು ಅವಕಾಶವನ್ನು ತಂದೊಡ್ಡಿತು~.

ನಾಸಿರುದ್ದೀನ್ ಶಾ ಈಗ ಸೋಲೊಮಾನ್ ಅಹಿಶೋರ್ಸ್‌ರ `ಜಾನ್ ಡೇ~ ಚಿತ್ರದ ಅಭಿನಯದಲ್ಲಿ ತೊಡಗಿಕೊಂಡಿದ್ದಾರೆ. ರಣದೀಪ್ ಹೂಡಾ ಕೂಡ ಚಿತ್ರದಲ್ಲಿ ನಟಿಸಿದ್ದಾರೆ. ಇತ್ತೀಚೆಗಷ್ಟೆ ಪಾಕಿಸ್ತಾನಿ ಚಿತ್ರ `ಜಿಂದಾ ಬಾಗ್~ ಮುಗಿಸ್ದ್ದಿದಾರೆ. `ನಾನು ಮತ್ತೆ ಪಾಕ್‌ಗೆ ಹೋಗಿ ಕೆಲಸ ಮಾಡಬೇಕೆಂದಿದ್ದೇನೆ. ಆದರೆ ಈ ಇಬ್ಬರು ಯುವ ನಿರ್ದೇಶಕರ ಶ್ರಮ ನನ್ನ ಹೃದಯ ಮುಟ್ಟಿದೆ. ಅದಕ್ಕೆಂದೇ ನಾನು ಇಲ್ಲಿದ್ದೇನೆ, ಈ ಸಿನಿಮಾದಲ್ಲಿ ಕೆನಡಾ ಮತ್ತು ದುಬೈಗೆ ಅಕ್ರಮವಾಗಿ ವಲಸೆ ಹೋಗುವ ಇಬ್ಬರು ನಿರುದ್ಯೋಗಿ ಯುವಕರಿಗೆ ಸಹಾಯ ಮಾಡುವ ಏಜೆಂಟ್ ಪಾತ್ರವನ್ನು ನಿರ್ವಹಿಸುತ್ತಿದ್ದೇನೆ. ನನ್ನದು ಅತ್ಯಂತ ಸ್ವಾರಸ್ಯಕರ ಪಾತ್ರ. ಈ ರೀತಿಯ ಟ್ವಿಸ್ಟ್ ಪಾತ್ರವನ್ನು ನಾನು ತುಂಬಾ ಪ್ರೀತಿಸುತ್ತೇನೆ~ ಅಂತಾರೆ ನಾಸಿರುದ್ದೀನ್.

`ಮರಾಠಿ, ಗುಜರಾತಿ ಮತ್ತು ಹಿಂದಿಯಲ್ಲಿ ಅತ್ಯಂತ ಹೆಚ್ಚಿನ ಸಾಮರ್ಥ್ಯ ಉಳ್ಳವರನ್ನು ಕಂಡಿದ್ದೇನೆ. ನನಗೆ ಯುವಜನರಲ್ಲಿ ನಂಬಿಕೆಯಿದೆ, ಅವರು ಆಗಿನ ಕಾಲದಲ್ಲಿದ್ದಂತೆ ಕ್ಯಾಮೆರಾ ಎದುರಿಸಲು ಹೆದರುವುದಿಲ್ಲ. ಹುಟ್ಟಿನಿಂದಲೇ ಫೋಟೊ ತೆಗೆಸಿಕೊಂಡ ಇವರಿಗೆ ನಟನೆ ಬಗ್ಗೆ ಹೇಳಿಕೊಡುವ ಅಗತ್ಯವಿಲ್ಲ~- ಇದು ದೇಶದಲ್ಲಿ ಸಿನಿಮಾ ರಂಗ ಹೇಗಿದೆ ಎಂಬ ಪ್ರಶ್ನೆಗೆ ಅವರು ಕೊಟ್ಟ ಭಿನ್ನ ಉತ್ತರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.