ADVERTISEMENT

ಅಮಿತಾಭ್-ಜಯಾ ಜೋಡಿಗೆ 40ರ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 4 ಜೂನ್ 2013, 19:59 IST
Last Updated 4 ಜೂನ್ 2013, 19:59 IST
ಅಮಿತಾಭ್-ಜಯಾ ಜೋಡಿಗೆ 40ರ ಸಂಭ್ರಮ
ಅಮಿತಾಭ್-ಜಯಾ ಜೋಡಿಗೆ 40ರ ಸಂಭ್ರಮ   

`ಝಂಜೀರ್' ಚಿತ್ರದಲ್ಲಿ ಜೋಡಿಯಾಗಿ ನಟಿಸುವ ಮೂಲಕ ಪರದೆ ಮೇಲೆ ಮಾತ್ರವಲ್ಲದೆ ನಿಜಜೀವನದಲ್ಲೂ ಅಮಿತಾಭ್ ಬಚ್ಚನ್ ಹಾಗೂ ಜಯಾ ಬಾಧುರಿ ಜೋಡಿಯಾಗಿ ಯಶಸ್ವಿಯಾಗಿದ್ದಾರೆ. ಲಂಬೂಜಿಗೆ ಜೋಡಿಯಾದ ನೀಳವೇಣಿ ಜಯಾ ಬಾಧುರಿ ತಮ್ಮ ವೈವಾಹಿಕ ಜೀವನದ 40ರ ವಾರ್ಷಿಕೋತ್ಸವವನ್ನು ಜೂನ್ 3ರಂದು ಆಚರಿಸಿಕೊಂಡರು.

ಅಭಿಮಾನ್, ಚುಪ್ಕೇ ಚುಪ್ಕೇ, ಶೋಲೆ ಹಾಗೂ ಝಂಜೀರ್ ಚಿತ್ರದಲ್ಲಿ ಜೋಡಿಯಾಗಿ ನಟಿಸಿದ ಇವರು ಅಲ್ಪ ಕಾಲ ಪ್ರೇಮಿಸಿ ಸರಳ ವಿವಾಹದೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. `ಅಂದು ನನ್ನ ಪೋಷಕರನ್ನು, ಕೆಲವೇ ಕೆಲವು ಸ್ನೇಹಿತರನ್ನು ಹಾಗೂ ಮಾಧ್ಯಮಗಳ ಆಪ್ತ ವಲಯವನ್ನು ಮಲಬಾರ್ ಬೆಟ್ಟಕ್ಕೆ ಕರೆದುಕೊಂಡು ಹೋದೆ. ಯಾವುದೇ ಝಗಮಗಿಸುವ ದೀಪವಿಲ್ಲದೆ, ಡೋಲು, ತುರಾಯಿಗಳಿಲ್ಲದೆ ಸರಳವಾಗಿ ಮದುವೆಯಾದೆ' ಎಂದು 70ರ ಹರೆಯದ ಅಮಿತಾಭ್ ತಮ್ಮ ಬ್ಲಾಗ್‌ನಲ್ಲಿ ಬರೆದುಕೊಂಡಿದ್ದಾರೆ.

`ಝಂಜೀರ್' ಸಿನಿಮಾ ಗೆದ್ದರೆ ಮದುವೆಯಾಗಬೇಕೆಂದು ನಾವು ನಿರ್ಧರಿಸಿದ್ದೆವು. ಅದರಿಂದಾಗಿ ಇಂದು ನಮ್ಮ ಇಬ್ಬರು ಮಕ್ಕಳು, ಮೂವರು ಮೊಮ್ಮಕ್ಕಳು, ಅಳಿಯ, ಸೊಸೆ, ನಮ್ಮ ಸಂಬಂಧಿಗಳು ಎಲ್ಲರೂ ಚೆನ್ನಾಗಿದ್ದೇವೆ' ಎಂದು ಅಮಿತಾಭ್ ಬರೆದುಕೊಂಡಿದ್ದಾರೆ.

ಅಮಿತಾಭ್ ಹಾಗೂ ಜಯಾ ಬಚ್ಚನ್ ಅವರಿಗೆ ಶ್ವೇತಾ ಹಾಗೂ ಅಭಿಷೇಕ್ ಇಬ್ಬರು ಮಕ್ಕಳು. ಮಗಳು ಶ್ವೇತಾ ಅವರು 1997ರಲ್ಲಿ ವ್ಯಾಪಾರಿ ನಿಖಿಲ್ ನಂದಾ ಅವರ ಕೈಹಿಡಿದರು. ಅವರಿಗೆ ಅಗಸತ್ಯ ಹಾಗೂ ನವ್ಯಾ ನವೇಲಿ ಎಂಬ ಇಬ್ಬರು ಮಕ್ಕಳಿದ್ದಾರೆ. ಮಗ ಅಭಿಷೇಕ್ ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಅವರನ್ನು ವಿವಾಹವಾದರು. ಪುಟಾಣಿ ಆರಾಧ್ಯ ಈ ತುಂಬು ಕುಟುಂಬದ ನೆಚ್ಚಿನ ಕಣ್ಮಣಿ. 40ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಟ್ವಿಟ್ಟರ್, ಫೇಸ್‌ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣದ ಮೂಲಕ ಅಮಿತಾಭ್ ಅಭಿಮಾನಿಗಳು ಶುಭಾಶಯ ಹೇಳಿದ್ದಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.