ADVERTISEMENT

ಆತ್ಮಕಥೆಯ ತಾಲೀಮು

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2012, 19:30 IST
Last Updated 7 ಏಪ್ರಿಲ್ 2012, 19:30 IST
ಆತ್ಮಕಥೆಯ ತಾಲೀಮು
ಆತ್ಮಕಥೆಯ ತಾಲೀಮು   

ಪ್ರಿಯ ಪ್ರೇಕ್ಷಕರೇ,
ನನಗಾಗ ಇನ್ನೂ ಹದಿನಾರು ವರ್ಷ. ಡೇಟಿಂಗ್‌ನಲ್ಲಿದ್ದೆ. ಒಂದಿಷ್ಟು ದಿನಗಳು ಉರುಳಿದ್ದೇ ಅದು ನಿರರ್ಥಕ ಎನಿಸಿತು. ಮೆಚ್ಚಿದ ಹುಡುಗನ ಜೊತೆ ಕೆಲವೇ ವರ್ಷಗಳ ಹಿಂದೆ ದೀಪಾವಳಿ ಬೆಳಕು ಕಂಡಿದ್ದೆ. ಇಬ್ಬರೂ ಸೇರಿ ಸುರ್‌ಸುರ್ ಬತ್ತಿ ಹಚ್ಚಿ, ಬೆಳಕ ಕಾರಂಜಿ ಚೆಲ್ಲುವ ಮತಾಪುಗಳನ್ನು ನೋಡಿದ್ದೆವು. ಬದುಕು ಎಷ್ಟು ಸುಂದರ ಎನಿಸಿತು.
 
ಆಮೇಲೆ ಅವನು ಅಯೋಗ್ಯ ಅಂತ ಗೊತ್ತಾದಾಗ ಮತ್ತದೇ ಬೇಸರ. ಆದಿತ್ಯ ಪಂಚೋಲಿ ನನ್ನ ಸ್ನೇಹಿತೆಯ ಗಂಡ. ಅವರ ಮನೆಗೆ ಹೋಗಿ, ಬರುವುದು ಇದ್ದೇ ಇತ್ತು. ಸಮಾರಂಭಗಳಲ್ಲಿ ಆದಿತ್ಯ ಕೂತ ಕುರ್ಚಿಯ ಪಕ್ಕ ನಾನೂ ಕೂತು ಮಾತಾಡುತ್ತಾ ನಕ್ಕಿದ್ದೆ. ಅದನ್ನು ನೋಡಿದವರು ನಮ್ಮಿಬ್ಬರ ನಡುವೆ ಸಂಬಂಧವಿದೆ ಎಂದು ಇಲ್ಲಸಲ್ಲದ್ದನ್ನು ಹೇಳಿಬಿಟ್ಟರು.

ಸಿನಿಮಾಗಳಲ್ಲಿ ನೀವು ನನ್ನನ್ನು ನೋಡಿದ್ದೀರಿ. ನನ್ನ ಮಾದಕ ಕಣ್ಣುಗಳ ಸವಿಯುಂಡಿದ್ದೀರಿ. ಹೊಕ್ಕುಳಲ್ಲಿ ನಾನು ಸಿಗಿಸಿಕೊಂಡ ಆಭರಣ ನಿಮ್ಮನ್ನು ಕೆಣಕಿರಲೂಬಹುದು. ಮದ್ಯದ ಗ್ಲಾಸನ್ನು ಕೈಲಿ ಹಿಡಿದು ಅಷ್ಟೂ ಅಮಲನ್ನು ಕಣ್ಣಲ್ಲಿ ನಾನು ತುಳುಕಿಸಿದಾಗ ನಿಮಗೂ ಮತ್ತೇರಿರುವ ಸಾಧ್ಯತೆ ಇದೆ. ನನ್ನ ಅಧರಚುಂಬನ ಕಂಡು ಬೆವೆತವರು ಕೂಡ ನಿಮ್ಮಲ್ಲಿ ಇರಬಹುದು.
 
ನನ್ನ ಗುಂಗುರುಕೂದಲು ಕಂಡು ಅಂತೆಯೇ ತಮ್ಮ ಕೂದಲನ್ನು ಗುಂಗುರಾಗಿಸಿಕೊಳ್ಳಲು ಹೊರಟ ಹುಡುಗಿಯರ ಬಗೆಗೂ ಕೇಳಿದ್ದೇನೆ. ಇಷ್ಟೆಲ್ಲಾ ಇರುವ ನನ್ನೊಳಗೆ ನೀವು ಕಾಣದ ವ್ಯಕ್ತಿತ್ವವೊಂದಿದೆ. ಅದನ್ನು ತೆರೆಮೇಲೆ ಖಂಡಿತ ಕಂಡಿರಲಾರಿರಿ.

ನನ್ನ ಮೊದಲ ಸಿನಿಮಾ `ಗ್ಯಾಂಗ್‌ಸ್ಟರ್~. ಅದಕ್ಕೂ ಮುಂಚೆ ಎರಡು ಸ್ಕ್ರಿಪ್ಟ್‌ಗಳನ್ನು ನಾನು ರಿಜೆಕ್ಟ್ ಮಾಡಿದ್ದೆ. ಆಗದ್ದನ್ನು ತಿರಸ್ಕರಿಸುವುದು ನನ್ನ ಜಾಯಮಾನ. ಬದುಕಿನ ಪ್ರತಿ ವಿಷಯದಲ್ಲೂ ನಾನು ಚೂಸಿ. ಇದನ್ನು ಕಂಡು ಅನೇಕರು ನನ್ನನ್ನು ಬೈಯ್ದಿದ್ದಾರೆ. ಬುದ್ಧಿಹೇಳಿದ್ದಾರೆ. ಯಾರೋ ಯಾಕೆ, ನನ್ನ ಅಪ್ಪ-ಅಮ್ಮನೇ ನನ್ನದು ಉದ್ಧಟತನ ಎಂದೆಲ್ಲಾ ರೇಗಿದ್ದಾರೆ.
 
ಆದರೆ, ನಾನು ಮಾಡುತ್ತಿರುವುದು ಸರಿಯೆಂಬ ಅರಿವು ನನಗಿದೆ. ಯಾರೋ ನಿರ್ಮಾಪಕ ನನ್ನುದ್ದಕ್ಕೂ ಹಣ ಸುರಿದು, ಬಿಕಿನಿ ಹಾಕಿಕೊಂಡು ಮುಂಬೈನ ಕಡಲತಟದಲ್ಲಿ ಸರಿರಾತ್ರಿ ನಡೆದಾಡು ಬಾ ಎಂದು ಬುಲಾವು ಕೊಟ್ಟರೆ ನಾನು ಹೋಗಲಾರೆ. ಅಂಥವನ ಕಪಾಳಕ್ಕೆ ಬಾರಿಸಿ, ಮೊದಲು ಒಳ್ಳೆಯ ಸ್ಕ್ರಿಪ್ಟ್ ತಗೊಂಡು ಬಾ ಎನ್ನುವವಳು ನಾನು.

ಶೂಟಿಂಗ್‌ನಲ್ಲೂ ನನ್ನದು ಅತಿರೇಕ ಎಂದು ಟೀಕಿಸಿದವರಿದ್ದಾರೆ. ನಿರ್ದೇಶಕನಲ್ಲದೆ ಬೇರೆ ಯಾರಾದರೂ ಬಂದು ಹೀಗೆ ನಟಿಸು, ಹಾಗೆ ನಟಿಸು ಎಂದು ಪಾಠ ಹೇಳತೊಡಗಿದರೆ ನಾನು ಕೇಳುವುದಿಲ್ಲ. ಟೀ ತಂದುಕೊಡುವವನು ಅದನ್ನಷ್ಟೇ ಮಾಡಬೇಕು. ಲೈಟ್ ಬಾಯ್ ತನ್ನ ಕೆಲಸದಲ್ಲಿ ಮಗ್ನನಾಗಿರಬೇಕು. ಸಂಭಾಷಣೆ ತಿದ್ದುವವನಷ್ಟೇ ಬರವಣಿಗೆಯ ಬಗ್ಗೆ ತಲೆಕೆಡಿಸಿಕೊಳ್ಳಬೇಕು.

ಸಂಗೀತ ಸರಿಯಿಲ್ಲ ಎಂದು ಸೆಟ್‌ನಲ್ಲಿ ಅಡುಗೆ ಮಾಡುವವನು ಹೇಳಿದರೆ ಅದಕ್ಕೆ ತಲೆಕೆಡಿಸಿಕೊಳ್ಳಬಾರದು. ಯಾರ‌್ಯಾರು ಯಾವ್ಯಾವ ಕೆಲಸ ಮಾಡಬೇಕೋ ಅದನ್ನಷ್ಟೇ ಶ್ರದ್ಧೆಯಿಂದ ಮಾಡಬೇಕು ಎಂಬುದು ನನ್ನ ಪಾಲಿಸಿ. ನಾನೂ ಅಷ್ಟೆ, ಅಭಿನಯ ಬಿಟ್ಟು ಬೇರಾವ ವಿಷಯದ ಬಗೆಗೂ ತಲೆಕೆಡಿಸಿಕೊಳ್ಳುವುದಿಲ್ಲ.

ಕೆಲವು ಸ್ಟಾರ್‌ಗಳು (ಸಂಜಯ್ ದತ್, ಅಜಯ್ ದೇವಗನ್) ಕೂಡ ಕಡ್ಡಿ ಗೀರಿದಂಥ ನನ್ನ ವ್ಯಕ್ತಿತ್ವ ನೋಡಿ ದಂಗಾಗಿದ್ದಾರೆ. ಸ್ಟಾರ್ ನಿರ್ದೇಶಕರು (ಮಹೇಶ್ ಭಟ್, ಡೇವಿಡ್ ಧವನ್) ನನ್ನ ನಿರ್ದಾಕ್ಷಿಣ್ಯ ಧೋರಣೆಗೆ ಶಹಬ್ಬಾಸ್‌ಗಿರಿ ಕೊಟ್ಟಿದ್ದಾರೆ. ಅಭಿನಯವನ್ನು ಆರಾಧಿಸುತ್ತಾ, ಮೈಮರೆತವಳಂತೆ ನಟಿಸಿದ ನನಗೆ ಒಂದು ರಾಷ್ಟ್ರ ಪ್ರಶಸ್ತಿ ಬಂದಾಗ ಕೈಯಲ್ಲಿ ಇನ್ನೊಂದು ಚಿತ್ರ ಇರಲೇ ಇಲ್ಲ. ಯಾಕೆಂದರೆ, ಐದು ಆಫರ್‌ಗಳನ್ನು ಆ ಕಾಲದಲ್ಲಿ ತಿರಸ್ಕರಿಸಿದ್ದೆ. ಕಸದಲ್ಲಿ ರಸ ಆರಿಸುವುದೆಂದರೆ ತಮಾಷೆಯ ಮಾತಲ್ಲ.

ಬದುಕಿನಲ್ಲಿ ನಾನು ರ‌್ಯಾಂಪ್ ಹತ್ತಿದಾಗ ನನಗೆ ನನ್ನೂರಿನ ಎಷ್ಟೋ ಓಣಿಗಳ ಪರಿಚಯವಿರಲಿಲ್ಲ. ಎಲ್ಲರೂ ತಮ್ಮ ಪಾಡಿಗೆ ತಾವು ಕಾಲೇಜು ಓದಿನಲ್ಲಿ ತೊಡಗಿ, ಇಷ್ಟಬಂದ ಸಿನಿಮಾ ನೋಡಿಕೊಂಡು ಸುಖವಾಗಿದ್ದಾಗ ಅದೇ ವಯಸ್ಸಿನ ನಾನು ನಟನಾಲೋಕಕ್ಕೆ ಕಾಲಿಟ್ಟಾಗಿತ್ತು. ಮೊದಮೊದಲು ನನ್ನದು ಸಾಧನೆ ಅಂದುಕೊಂಡೆ.

ಆಮೇಲೆ ಏನೋ ಕಳಕೊಂಡೆನಲ್ಲ ಎಂದು ದುಃಖಿಸಿದೆ. ಅಪಾತ್ರರನ್ನು ನಂಬಿದೆ. ಅಪರೂಪಕ್ಕೆ ಕೆಟ್ಟ ಸಿನಿಮಾ ಕೂಡ ಒಪ್ಪಿಕೊಂಡೆ. ಜನರನ್ನು ನಿಭಾಯಿಸುವುದನ್ನು ತಡವಾಗಿ ಕಲಿತೆ. ನನ್ನ ಸೌಂದರ್ಯಕ್ಕೆ ತಕ್ಕಷ್ಟು ಮದವನ್ನು ಮುದ್ದಿಸುತ್ತಲೇ ಬಂದೆ. ಚುಂಬನದ ಸುಖ ಕಂಡೆ. ಬಂಧನದ ಕಷ್ಟ ಉಂಡೆ. ಅಪ್ಪ-ಅಮ್ಮನನ್ನು ತಿರಸ್ಕರಿಸಿದೆ. ಹಣವನ್ನು ಮೋಹಿಸಿದೆ. ಅದೇ ಅಪ್ಪ- ಅಮ್ಮ ಬೇಕು ಎನ್ನಿಸಿದಾಗ ಕರೆದು ಮುದ್ದಾಡಿದೆ. ಅವರು ಅತ್ತಾಗ ನನಗೆ ಕಣ್ಣೀರೇ ಬರಲಿಲ್ಲ.

ಮತ್ತೆ ನಾನು ಒಂಟಿ ಎಂದು ಅನೇಕ ಸಲ ಅನ್ನಿಸುತ್ತದೆ. ಆಮೇಲೆ ನನಗ್ಯಾರ ಹಂಗೂ ಇಲ್ಲ ಎಂಬ ಹಮ್ಮೂ ಮೂಡುತ್ತದೆ. ಟೆರೇಸಿನ ಮೇಲೆ ಗಾಳಿಗೊಡ್ಡಿಕೊಂಡು ಈಜಿಚೇರಿನ ಮೇಲೆ ಮಲಗಿದಾಗ ಸೇವಕಿ ನನ್ನಿಷ್ಟದ ಪೇಯದ ಲೋಟ ಕೈಗಿಡುತ್ತಾಳೆ. ನಾನೇ ಮಹಾರಾಣಿ ಎನ್ನಿಸಿದ ಮರುಕ್ಷಣವೇ ಒಂಟಿತನ ಕಾಡುತ್ತದೆ. ಕಣ್ಣಲ್ಲಿ ನೀರು ತಂತಾನೇ ಮೆಲ್ಲಗೆ ಹರಿಯತೊಡಗುತ್ತದೆ. ಇವೆಲ್ಲಾ, ಸಿನಿಮಾ ಮಾತ್ರ ನೋಡುವ ನಿಮಗೆ ಹೇಗೆ ಗೊತ್ತಾದೀತು?

ಇಂತಿ ನಿಮ್ಮ ನಟಿ
ಕಂಗನಾ ರನೌತ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.