ADVERTISEMENT

ಇರುವುದೆಲ್ಲವ ಬಿಟ್ಟು...

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2012, 19:30 IST
Last Updated 1 ಮಾರ್ಚ್ 2012, 19:30 IST

ಮನುಷ್ಯನ ಸ್ವಾರ್ಥ, ವಾತ್ಸಲ್ಯ, ಲೋಭ, ಸುಳ್ಳು, ಪಾಪಪ್ರಜ್ಞೆ ಮಂತಾದವುಗಳನ್ನು ಸಂಸಾರವೊಂದರಲ್ಲಿ ನಡೆಯುವ ಘಟನೆಗಳಲ್ಲಿ ಹೆಣೆದು, ಅತಿರೇಕವಿಲ್ಲದೆ ಸಾಮಾನ್ಯರ ಬದುಕನ್ನು ಅನಾವರಣಗೊಳಿಸುವುದು `ಎ ಸೆಪರೇಷನ್~ ಚಿತ್ರದ ವಿಶೇಷ. ನಮ್ಮ ಸುತ್ತಮುತ್ತಲಿನ ಪಟ್ಟಣವಾಸಿಗಳ, ಯಾವುದೇ ಮಧ್ಯಮ ವರ್ಗದ ಕುಟುಂಬದಲ್ಲಿ ನಡೆಯುವ ಘಟನೆಗಳಂತೆ ಕಾಣಿಸುವಷ್ಟರ ಮಟ್ಟಿಗೆ ಕಥಾ ಹಂದರ ಸಮಕಾಲೀನವಾಗಿದೆ.

ತನ್ನ ಪತಿ ಗಂಡ ನಡೆರ್ನ್‌ ಮತ್ತು ಹನ್ನೊಂದು ವರ್ಷದ ಮಗಳು ಟೆರ್ಮೆ ಜೊತೆ ವಿದೇಶಕ್ಕೆ ಹೋಗಿ ಸುಖವಾಗಿ ಬಾಳುವ ಆಸೆ ಸಿಮಿನ್ನಳದು. ಆದರೆ ನಡೆರ್ನ್‌ನ ತಂದೆಯ ಆರೋಗ್ಯ ಸರಿಯಾಗಿಲ್ಲ. ಆ ಕಾರಣದಿಂದಾಗಿ ಆತ ಹೆಂಡತಿಯ ಮಾತಿಗೆ ಒಪ್ಪುವುದಿಲ್ಲ. ಇದರಿಂದಾಗಿ ಕೋಪಗೊಳ್ಳುವ ಸಿಮಿನ್ ವಿವಾಹ ವಿಚ್ಛೇದ್ಞಕ್ಕೆ ಪ್ರಯತ್ನಿಸುತ್ತಾಳೆ. ತೀರ ಸರಳವೆಂದು ತೋರುವ ಈ ಕಥೆಯನ್ನು ಸಹಜತೆಗೆ ಕೊಂಚವೂ ಓರೆಕೋರೆಯಾಗದ ಹಾಗೆ ಕುತೂಹಲವನ್ನು ಚಿತ್ರದುದ್ದಕ್ಕೂ ಕಾಪಾಡಿಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಚಿತ್ರಕಥೆಯ ಬಂಧ ಮತ್ತು ನಿರೂಪಣಾ ವಿಧಾನ ಪರಿಣಾಮಕಾರಿಯಾಗಿದೆ. 

ಚಿತ್ರದ ತಯಾರಿಕೆಯ ಹಿಂದೆ ಕೆಲಸ ಮಾಡಿರುವ ಪ್ರಮುಖರ ಹೆಸರುಗಳನ್ನು ತೋರಿಸುವಾಗ ವಿವಾಹ ವಿಚ್ಛೇದನಕ್ಕೆ ಸಂಬಂಧಿಸಿದಂತೆ ನಡೆರ್ನ್‌ - ಸಿಮಿನ್ ಕೋರ್ಟಿನಲ್ಲಿ ವಾದಿಸುವುದನ್ನು ಚಲಿಸದ ಕ್ಯಾಮೆರಾ ಸೆರೆ ಹಿಡಿಯುತ್ತಿರುತ್ತದೆ. ಇದು ಚಿತ್ರ ನೋಡುವ ಪ್ರೇಕ್ಷಕ ಸಮೂಹವೇ ನ್ಯಾಯಾಧೀಶರೆಂದು ಬಿಂಬಿಸುವ ಬಗೆ.

ಔಪಚಾರಿಕತೆಯ ಸೋಂಕಿಲ್ಲದೆ ನಡೆಯುವ ಈ ಬಗೆಯನ್ನು ಇರಾನಿನ ಇನ್ನೊಬ್ಬ ಪ್ರಸಿದ್ಧ ನಿರ್ದೇಶಕ ಅಬ್ಬಾಸ್ ಕಿಯರೋತ್ಸಮಿಯ `ಕ್ಲೋಸ್-ಅಪ್~ನಲ್ಲಿಯೂ ಕಾಣಬಹುದು. ನ್ಯಾಯಾಲಯದ ದೃಶ್ಯದ ಮೂಲಕವೇ `ಸೆಪರೇಷನ್~ ಆರಂಭಗೊಳ್ಳುತ್ತದೆ. ಅಪ್ಪನ ಮರೆವಿನ ಕಾಯಿಲೆಯ ಕಾರಣ ಪರದೇಶಕ್ಕೆ ಬರಲು ಒಪ್ಪದ ನಡೆರ್ನ್‌ಗೆ, `ನೀವು ಮಗನೆನ್ನುವುದೂ ಅವರಿಗೆ ಗೊತ್ತಿಲ್ಲ~ ಎಂದು ಹೆಂಡತಿ ಹೇಳುತ್ತಾಳೆ. ಈ ಮಾತಿನ ಹಿಂದಿನ ಆಲೋಚನೆ ಮಾವನ ಬಗ್ಗೆ ಇರುವ ಆಕೆಯ ನಿರ್ಲಕ್ಷ್ಯ ಮತ್ತು ಅಮಾನವೀಯ ಧೋರಣೆಯ ಸ್ವಾರ್ಥ ಕಾಣಿಸುತ್ತದೆ. ಆದರೆ, ತನ್ನ ಗಂಡ-ಮಗಳೊಂದಿಗೆ ಪ್ರತ್ಯೇಕವಾಗಿ ಉನ್ನತ ಮಟ್ಟದ ಸುಖ ಜೀವನ ಬಯಸುವ ಅವಳ ಅಪೇಕ್ಷೆ ಮಧ್ಯಮ ವರ್ಗದ ಯಾವ ಹೆಣ್ಣಿನಲ್ಲಿಯೂ ಉಂಟಾಗದೆ ಇರುವಂತಹದ್ದೇನೂ ಅಲ್ಲ. `ನೀವು ಮಗನೆನ್ನುವುದೂ ಅವರಿಗೆ ಗೊತ್ತಿಲ್ಲ~ ಎಂದು ಹೆಂಡತಿ ಹೇಳಿದರೆ, `ಆದರೆ ಅವರು ನನ್ನ ಅಪ್ಪ ಅನ್ನುವುದು ನನಗೆ ಗೊತ್ತು~ ಎಂದು ನಡೆರ್ನ್‌ ಹೇಳುತ್ತಾನೆ. ಹೀಗೆ, ಸಂಬಂಧಗಳ ಜಿಜ್ಞಾಸೆಯಲ್ಲಿ ತೊಡಗುವ ಸಿನಿಮಾ ಮಾನವೀಯತೆಯ ಆಯಾಮಗಳ ಶೋಧನೆಗೆ ಮುಂದಾಗುತ್ತದೆ.

ಸಿಮಿನ್ ಜೊತೆ ಟೆರ್ಮೆ ಪರದೇಶಕ್ಕೆ ಹೊರಡಲು ಅಪ್ಪನ ಒಪ್ಪಿಗೆ ಬೇಕೆನ್ನುವ ನ್ಯಾಯಾಧೀಶರ ಮಾತು ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸುತ್ತದೆ. ವಿಚ್ಛೇದನ ಪಡೆದಾದರೂ ಹನ್ನೊಂದು ವರ್ಷದ ಮಗಳೊಂದಿಗೆ ಪರದೇಶಕ್ಕೆ ಹೋಗಬೇಕೆನ್ನುವ ಸಿಮಿನ್‌ಳ ಅಪೇಕ್ಷೆಗೆ ಕಡಿವಾಣ ಬೀಳುತ್ತದೆ. ಅನಂತರ ಗಂಡ-ಹೆಂಡಿರು ರಿಜಿಸ್ಟರಿನಲ್ಲಿ ಬರೆಯಲು ಏಳುತ್ತಾರೆ. ಕಾರ್ಡುಗಳು ಇಲ್ಲಿಗೆ ಮುಗಿದು ಚಿತ್ರ ಮುಂದುವರೆಯುತ್ತದೆ..  

ಕೋರ್ಟಿನಿಂದ ಮನೆಗೆ ದೃಶ್ಯ ಬದಲಾಗುತ್ತದೆ. ನಡೆರ್ನ್‌ ಮತ್ತು ಟೆರ್ಮೆಯರನ್ನು ಬಿಟ್ಟು ಸಿಮಿನ್ ತನ್ನ ತವರಿಗೆ ಹೋಗಲು ಸಿದ್ಧಳಾಗುತ್ತಿದ್ದಾಳೆ. ಇಲ್ಲಿ ಸಿಮಿನ್ ಮತ್ತು ನಡೆರ್ನ್‌ ಅವರನ್ನು ಒಳಗೊಂಡ ಚಿತ್ರದ ಪ್ರತಿಮೆಗಳು ಚಲಿಸುವ ರೀತಿ ಹಾಗೂ ಶೀಘ್ರ ಗತಿಯ ಸಂಕಲನ ಒಟ್ಟಾರೆ ಚಿತ್ರ ನಮಗೆ ಒದಗುವ ಬಗೆಯನ್ನು ಸ್ಪಷ್ಟವಾಗಿ ಅನುಭವಕ್ಕೆ ತರುತ್ತದೆ. ನಡೆರ್ನ್‌ ತನ್ನ ತಂದೆಯನ್ನು ನೋಡಿಕೊಳ್ಳಲು ಸರೆ ಬಯಾತ್ ಎನ್ನುವವಳನ್ನು ನೇಮಿಸುತ್ತಾನೆ.

ಮನೆಯಲ್ಲಿ ನೆಡರ್ನ್‌ನ ತಂದೆಯನ್ನು ಬಿಟ್ಟರೆ ಇನ್ನು ಯಾರೂ ಇರುವುದಿಲ್ಲ ಹಾಗೂ ಆತನನ್ನು ನೋಡಿಕೊಳ್ಳುವ ಬಯಾತ್ ಬಸುರಿ ಎನ್ನುವ ಸಂಗತಿಯ ಜೊತೆಗೆ ಟೆರ್ಮೆಗೆ ಪರೀಕ್ಷೆಯ ದಿನಗಳು, ಸಿಮಿನ್ನಳ  ಮಾಸ್ತರಿಕೆ, ನಡೆರ್ನ್‌ ಬ್ಯಾಂಕ್‌ನಲ್ಲಿ ಕೆಲಸ ಮಾಡುವುದು- ಇವೆಲ್ಲವೂ ಎಲ್ಲರಿಗೂ ಸಮಯದ ಅಭಾವ ಎನ್ನುವುದನ್ನು ಸೂಚಿಸುತ್ತವೆ. ಚಿತ್ರದ ನಿದೇಶಕರು ಮುಖ್ಯ ಮತ್ತು ಪೋಷಕ ಪಾತ್ರಗಳನ್ನು ಒಂದು ನಿರ್ಧಾರಿತ ಪರಿಸ್ಥಿತಿಯಲ್ಲಿ ನಮಗೆ ಪರಿಚಯಿಸುವ ಕಾರ್ಯವನ್ನು ಸಹಜ ಮತ್ತು ಪಾತ್ರಗಳ ದಿನನಿತ್ಯದ ನಡವಳಿಕೆಯಲ್ಲಿ ಯಶಸ್ವಿಯಾಗಿ ನಿರ್ವಹಿಸುತ್ತಾರೆ. ಇವೆಲ್ಲದರಿಂದ ಗುಣ, ಅವಗುಣಗಳು ತುಂಬಿದ ಸಾಮಾನ್ಯ ಮನುಷ್ಯರಿರುವ ಪ್ರಚಲಿತ ರೀತಿಗನುಸಾರವಾಗಿ ಪಾತ್ರಗಳು ಹಾಗೂ ಸನ್ನಿವೇಶಗಳನ್ನು ಚಿತ್ರ ಒಳಗೊಂಡಿರುವುದರಿಂದ ಹೆಚ್ಚು ಹತ್ತಿರವೆನಿಸುತ್ತದೆ. ಸಂಕೀರ್ಣ, ಸೋಗು ಇತ್ಯಾದಿಗಳ ಸೋಂಕಿಲ್ಲದೆ ಸಂವಹನ ಸಲೀಸಾಗುತ್ತದೆ. 

ಇಷ್ಟಾದ ಮೇಲೆ ಈಗ ಚಿತ್ರದ ತಿರುವಿಗೆ, ವೇದಿಕೆ ಸಜ್ಜು. ಉಟ್ಟಿದ್ದ ಬಟ್ಟೆಯಲ್ಲೇ ಉಚ್ಚೆ ಹೊಯ್ದುಕೊಂಡದ್ದನ್ನು ಹೆಂಗಸಾದ ತಾನು ತೊಳೆದು ಶುಚಿಗೊಳಿಸಬಹುದೇ ಇಲ್ಲವೇ ಎನ್ನುವುದು ಇಸ್ಲಾಮ್ ಧರ್ಮಕ್ಕೆ ಸಂಬಂಧಿಸಿದ ವಿಷಯವೆಂದು ಹೇಳುವ ಸರೆ ಬಯಾತ್, ಅದರ ಬಗ್ಗೆ ತಿಳಿದವರಿಂದ ಮಾಹಿತಿ ಪಡೆಯುತ್ತಾಳೆ. ಮಲಗಿಯೇ ಇರುವ ನಡೆರ್ನ್‌ ತಂದೆಯನ್ನು ಏಳದ ಹಾಗೆ  ಕಟ್ಟಿ ಹಾಕಿ, ಡಾಕ್ಟರನ್ನು ಕಾಣುವುದಕ್ಕೆ ಮನೆಯಿಂದ ಹೊರಗೆ ಹೋಗುತ್ತಾಳೆ. ಅದೇ ಸಮಯದಲ್ಲಿ ಟೆರ್ಮೆಯೊಂದಿಗೆ ಮನೆಗೆ ಬರುವ ನಡೆರ್ನ್‌ ಮಂಚದಿಂದ ಕೆಳಗೆ ಬಿದ್ದಿದ್ದ ತಂದೆಯನ್ನು ಕಂಡು ತೀವ್ರ ಉದ್ವೇಗಕ್ಕೆ ಒಳಗಾಗುತ್ತಾನೆ. ಇದನ್ನು ಹೇಗೋ ನಿಭಾಯಿಸುವಷ್ಟರಲ್ಲಿ, ತನ್ನ ಗಂಡನಿಗೆ ಗೊತ್ತಿಲ್ಲದಂತೆ ಮಾಡುತ್ತಿರುವ ಈ ಕೆಲಸಕ್ಕೆ ಇನ್ನುಮುಂದೆ ಬರಲಿಕ್ಕಾಗುವುದಿಲ್ಲ ಎಂದು ಬಯಾತ್ ಹೇಳುತ್ತಾಳೆ.

ಮುಂದಿನದು ನಾಟಕೀಯ ಪ್ರಸಂಗ. ಆವೇಗಕ್ಕೊಳಗಾಗುವ ನಡೆರ್ನ್‌ ಬಯಾತ್‌ಳನ್ನು ದೂಡುತ್ತಾನೆ. ಕೆಳಬಿದ್ದ ಆಕೆಗೆ ಗರ್ಭಪಾತವಾಗುತ್ತದೆ.  ಈ ಘಟ್ಟದಲ್ಲಿ ವಿಚ್ಛೇದನ ಪ್ರಕರಣ ಹಿನ್ನೆಲೆಗೆ ಸರಿದು ಹೋಗಿ ಬಯಾತ್‌ಳ ಪ್ರಸಂಗ ಪ್ರಾಧಾನ್ಯತೆ ಪಡೆಯುತ್ತದೆ. ಸರೆ ಬಯಾತ್‌ಳ ಗಂಡ ನಡೆರ್ನ್‌ ಮೇಲೆ ತನ್ನ ಮಗುವಿನ ಸಾವಿನ ಆರೋಪ ಹೊರಿಸಿ ಅವನಿಗೆ  ಶಿಕ್ಷೆ ವಿಧಿಸಬೇಕೆಂದು ಕೋರ್ಟಿನ ಮೊರೆ ಹೋಗುತ್ತಾನೆ. ಈ ಸಮಸ್ಯೆಗೆ ಉತ್ತರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಿಮಿನ್ ತನ್ನ ಗಂಡನಿಗೆ ನೆರವಾಗುತ್ತಾಳೆ. ನಡೆರ್ನ್‌ ಮೇಲೆ ಹೊರಿಸಲಾದ ಆರೋಪದಿಂದ ಮುಕ್ತಗೊಳ್ಳಲು ಸರೆ ಬಯಾತ್ ದಂಪತಿಗೆ ಪರಿಹಾರ ರೂಪವಾಗಿ ದುಡ್ಡು ತೆಗೆದುಕೊಳ್ಳುವುದಕ್ಕೆ ಒಪ್ಪಿಸುವುದರಲ್ಲಿ ಆಕೆ ಯಶಸ್ವಿಯಾಗುತ್ತಾಳೆ.

ಇದೊಂದು ಬಗೆಯ ಲೋಭ ಎಂಬ ತಿರುವು ಪಡೆಯುವುದು ನಡೆರ್ನ್‌ ಮನೆಗೆ ಕೆಲಸಕ್ಕೆ ಬರುವ ಹಿಂದಿನ ದಿನವೇ ಸರೆ ಬಯಾತ್ ಅಪಘಾತಕ್ಕೆ ಒಳಗಾಗಿರುವುದು. ದುಡ್ಡು ತೆಗೆದುಕೊಳ್ಳಬೇಕಾದ ಸಮಯದಲ್ಲಿ ಸರೆ ಬಯಾತ್ ಪಾಪ ಪ್ರಜ್ಞೆ ಅನುಭವಿಸುತ್ತಾಳೆ.
ಸಿಮೆನ್ -ನಡೆರ್ನ್‌ರ ವಿಚ್ಛೇದನದ ಸಮಸ್ಯೆ ಮತ್ತೆ ನ್ಯಾಯಾಧೀಶರೆದುರು ಬರುತ್ತದೆ. ಟೆರ್ಮೆಯ ನಿರ್ಣಾಯಕ ಸ್ವರೂಪದ ಹೇಳಿಕೆಗೆ ಕಾಯುತ್ತ ದಂಪತಿ ಕೋರ್ಟ್ ರೂಮಿನ ಹೊರಗಿರುತ್ತಾರೆ. ಹಾಗೆ ನೋಡಿದರೆ ಟೆರ್ಮೆ ತನ್ನ ತಂದೆ -ತಾಯಿಯರ ವಿಚ್ಛೇದನವಾದರೆ  ಯಾರ ಬಳಿ ಇರುವುದೆಂದು ಮೊದಲಿನಿಂದಲೂ ನಿರ್ಣಯಿಸದಿರುವುದೇ ಸಂಸಾರದ ಬಂಧ ಒಡೆಯದಿರಲು ಕಾರಣ. ಈ ಅಂಶದ ಬಗ್ಗೆ ನಮಗೆ ಚಿತ್ರದಲ್ಲಿ ಸಾಕಷ್ಟು ಕುರುಹುಗಳು ಸಿಗುತ್ತವೆ. ಕೋರ್ಟಿನಿಂದಲೇ ಪ್ರಾರಂಭವಾಗಿ ಕೋರ್ಟಿನಲ್ಲಿಯೇ ಸಿನಿಮಾ ಕೊನೆಗೊಳ್ಳುತ್ತದೆ.

ತೃತೀಯ ಜಗತ್ತಿನ ದೇಶಗಳ ನಗರ ವಾಸಿಗಳಿಗೆ ಹೆಚ್ಚಾಗಿ ಅನ್ವಯಿಸುವ ಕಥನವನ್ನು, ಒಂದು ಸಾಮಾನ್ಯ ಕುಟುಂಬವೊಂದರ ಮೂಲಕ ನಿರ್ದೇಶಕರು ನಿರೂಪಿಸಿರುವುದು ಗಮನಾರ್ಹವಾಗಿದೆ. ಬರ್ಲಿನ್ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದ ನಡೆರ್ನ್‌ ಪಾತ್ರದ ಪೇಮೆನ್ ಮೋದಿ ಅವರ ಅಭಿನಯದ ಜೊತೆಗೆ, ಇತರ ಕಲಾವಿದರ ಅಭಿನಯವೂ ಚಿತ್ರವನ್ನು ಕಳೆಗಟ್ಟಿಸಿದೆ. ಸಂಕಲನ, ಛಾಯಾಗ್ರಹಣ, ಹಿನ್ನೆಲೆ ಸಂಗೀತ ಮುಂತಾದವು ನಿರ್ದೇಶಕರ ಬೆಂಬಲಕ್ಕೆ ಒದಗಿ `ಎ ಸೆಪರೇಷನ್~ ಒಳ್ಳೆಯ ಅನುಭವವಾಗಿ ನೋಡುಗರನ್ನು ಕಾಡುತ್ತದೆ. 
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.