ADVERTISEMENT

ಇಹದೊಡನೆ ಪರ ಬೆರೆತು...

​ಪ್ರಜಾವಾಣಿ ವಾರ್ತೆ
Published 21 ಜೂನ್ 2012, 19:30 IST
Last Updated 21 ಜೂನ್ 2012, 19:30 IST

ತಾಯಿ ಚೌಡೇಶ್ವರಿ ದೇವಿಯ ಪ್ರೇರೇಪಣೆಯೇ `ಶ್ರೀ ಚೌಡೇಶ್ವರಿ ದೇವಿ ಮಹಾತ್ಮೆ~ ಚಿತ್ರ ನಿರ್ಮಾಣಕ್ಕೆ ಕಾರಣ ಎಂದರು ನಿರ್ದೇಶಕ ಮ.ರಾಮಣ್ಣ.

ರೋಜಾ ಅವರನ್ನು ಚೌಡೇಶ್ವರಿಯಾಗಿ ಬಿಂಬಿಸಲು ಕೂಡ `ತಾಯಿ~ ಪ್ರೇರಣೆಯೇ ಕಾರಣವಂತೆ! ಚಿತ್ರ ನಿರ್ಮಿಸಬೇಕು ಎಂದು ದೇವಿಯ ಅಪ್ಪಣೆ ಕೇಳಿದಾಗ ಆಕೆ ಮೊದಲು ನನ್ನ ಚಿತ್ರ ಮಾಡು ಆಮೇಲೆ ಮಿಕ್ಕಿದ್ದು ಎಂದಳಂತೆ. ಸರಿ ಚಿತ್ರ ನಿರ್ಮಿಸಲು ಅವರಿಗೆ ಹತ್ತು ವರ್ಷ ಹಿಡಿಯಿತು. ಒಂದಿಡೀ ದಶಕ ದೇವಿಯ ಮೂಲ ಕುರಿತು ಅಧ್ಯಯನ ಮಾಡಿದ್ದರು.

ಹಾಡುಗಳ ಧ್ವನಿಮುದ್ರಿಕೆ ಬಿಡುಗಡೆ ಮಾಡಿದ ನಟ ಶ್ರೀನಗರ ಕಿಟ್ಟಿ `ಚೌಡೇಶ್ವರಿ ಮಹಿಮೆ ಅರಿಯಲು ಬಯಸುವವರಿಗೆ ಚಿತ್ರ ಸಹಕಾರಿಯಾಗಲಿದೆ. ದೇವರ ಕುರಿತ ಚಿತ್ರಗಳು ಕಡಿಮೆಯಾಗುತ್ತಿರುವ ಈ ದಿನಗಳಲ್ಲಿ `ಚೌಡೇಶ್ವರಿ~ ಗೆಲ್ಲಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. 

 ಅಂದಹಾಗೆ ಕತೆಯ ಎಳೆ ಭಕ್ತಿಪ್ರಧಾನವಾಗಿದ್ದರೂ ಪ್ರೀತಿ ಹೊಡೆದಾಟ ಎಲ್ಲವೂ ಇದೆ ಎಂಬುದನ್ನು ಚಿತ್ರದ ಪೋಸ್ಟರ್‌ಗಳು ಸಾರುತ್ತಿದ್ದವು. `ಕೆಡುಕು ಬಯಸಿದವರಿಗೆ ಏನಾಗುತ್ತದೆ ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ. ಚಿತ್ರ ಎಲ್ಲರನ್ನೂ ತಲುಪಬೇಕು ಎಂಬ ನಿಟ್ಟಿನಲ್ಲಿ ಪ್ರೇಮದ ಎಳೆಯನ್ನೂ ಬೆರೆಸಲಾಗಿದೆ~ ಎಂದರು ನಿರ್ದೇಶಕರು.

ಚಿತ್ರಕ್ಕೆ ಸಂಗೀತ ನೀಡಿರುವುದು `ದೇವಿ ಸ್ಪೆಷಲಿಸ್ಟ್~ ಲಕ್ಷ್ಮೀ ನಾರಾಯಣ ಗೂಚಿ. ಒಟ್ಟು 21 ಹಾಡುಗಳಿರುವ ಚಿತ್ರದಲ್ಲಿ ನಾಲ್ಕು ಕಂದಪದ್ಯಗಳಿವೆ. ಭಕ್ತಿಗೀತೆಗಳಿಗೆ ಹೆಚ್ಚು ಒತ್ತು ನೀಡಲಾಗಿದೆ. ಗೂಚಿ ಕೆಲವು ಗೀತೆಗಳನ್ನು ಸ್ವತಃ ಹಾಡಿ ತೋರಿಸಿದರು.

ಚಿತ್ರಕ್ಕೆ ಈಗ ಡಿಎಎಸ್ ಹಾಗೂ ಗ್ರಾಫಿಕ್ ಅಳವಡಿಕೆ ಕಾರ್ಯ ಮಾತ್ರ ಬಾಕಿ ಉಳಿದಿದೆ. ಕನ್ನಡದಲ್ಲಿ ಮಾತ್ರ ಚಿತ್ರ ಮೂಡಿಬರುತ್ತಿದ್ದು ಮುಂದಿನ ದಿನಗಳಲ್ಲಿ ಬೇರೆ ಭಾಷೆಗಳಲ್ಲಿ ತಯಾರಿಸಲು ನಿರ್ಧರಿಸಲಾಗಿದೆ.
 
ಭವ್ಯಶ್ರೀ ರೈ, ರಮೇಶ್ ಪಂಡಿತ್, ರೇಖಾದಾಸ್ ಸೇರಿದಂತೆ ಸುಮಾರು 78 ಕಲಾವಿದರ ಬೃಹತ್ ತಾರಾಗಣ ಇರುವ ಚಿತ್ರಕ್ಕೆ ಗಿರೀಶ್ ಕುಮಾರ್ ಹಾಗೂ ನವ್ಯಾ ನಾಯಕ ನಾಯಕಿಯರು.ಕೃಪಾನಿಧಿ ಸ್ವಾಮೀಜಿ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.