ಎಂದಿನಂತೆ ರೇಷ್ಮೆ ಸೀರೆಯುಟ್ಟು, ಕೈತುಂಬ ಬಳೆ ತೊಟ್ಟು, ಕಾಸಗಲ ಕುಂಕುಮ ಇಟ್ಟುಕೊಂಡು ಬಂದಿದ್ದರು ಗಾಯಕಿ ಉಷಾ ಉತ್ತುಪ್. ಆದರೆ ಅವರ ಮುಡಿ ತುಂಬಾ ಇರುತ್ತಿದ್ದ ಮಲ್ಲಿಗೆ ನಾಪತ್ತೆಯಾಗಿತ್ತು.
ಅದನ್ನು ಬಹಳ ಆಸ್ಥೆಯಿಂದ ಪ್ರಶ್ನಿಸಿದ ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್ ಅವರಿಗೆ ಉಷಾ, ಇಂದು ಅಭಿಮಾನಿಯೊಬ್ಬರು ಇಷ್ಟಪಟ್ಟು ಕೇಳಿದ್ದಕ್ಕೆ ಮಲ್ಲಿಗೆ ಹೂ ಕೊಟ್ಟುಬಿಟ್ಟೆ ಎಂದು ಹೇಳಿ ದೊಡ್ಡ ನಗೆ ನಕ್ಕರು.
ಅದು `ಪರಿ~ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ. ಅಂದು ಕಾರ್ಯಕ್ರಮಕ್ಕೆ ಕಳೆ ನೀಡಿದ ಉಷಾ ಉತ್ತುಪ್ ಬಾಯ್ತುಂಬಾ ಮಾತನಾಡಿದರು. ಜೊತೆಗೆ ಹಾಡಿದರು. ಎಲ್ಲರನ್ನೂ ಕುಣಿಸಿದರು.
ಸಂಗೀತ ಪ್ರೇಮಿಗಳಿಗಾಗಿ ನಲವತ್ತೆರಡು ವರ್ಷಗಳಿಂದ ನಿರಂತವಾಗಿ ಹಾಡುತ್ತಿರುವುದಾಗಿ ಹೇಳಿದ ಉಷಾ ಉತ್ತುಪ್ ವೇದಿಕೆ ಏರಿದಾಕ್ಷಣ ಹಾಡಿದ ಹಾಡು `ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು...~. ನಂತರ `ದಮ್ ಮಾರೊ ದಮ್..~. ಸುಧೀರ್ ಅತ್ತಾವರ್, ಸಂಗೀತ ನಿರ್ದೇಶಕ ವೀರ್ ಸಮರ್ಥ, ಹರ್ಷಿಕಾ ಪೂಣಚ್ಚ, ನಾಗಕಿರಣ್ ಉಷಾ ಹಾಡುಗಳಿಗೆ ಹೆಜ್ಜೆ ಹಾಕಿದರು.
ಸುಧೀರ್ ಅತ್ತಾವರ್ ತಮ್ಮ ವಿದೇಶಿ ಗೆಳೆಯರ ಬೆಂಬಲದಿಂದ ರೂಪಿಸಿರುವ ಸಿನಿಮಾ `ಪರಿ~. ಚಿತ್ರೀಕರಣ ಮುಗಿಸಿರುವ ಅವರು ಅಂದು ಹಿರಿಯರನ್ನು ಸನ್ಮಾನಿಸುವ ಹುಮ್ಮಸ್ಸಿನಲ್ಲಿದ್ದರು.
ಹಿರಿಯ ನಿರ್ದೇಶಕ ಗೀತಪ್ರಿಯ ಮತ್ತು ಸಂಗೀತ ನಿರ್ದೇಶಕ ರಾಜನ್ ಅವರನ್ನು ಸನ್ಮಾನಿಸಿದ ಸುಧೀರ್ ಅತ್ತಾವರ್ ತಂಡ ಅವರ ಹಾರೈಕೆ ಪಡೆಯಿತು.
ನಂತರ ಮಾತನಾಡಿದ ಹಿರಿಯ ನಿರ್ದೇಶಕ ಭಗವಾನ್ ಚಿತ್ರದ ಹಾಡುಗಳು ಚಿತ್ರದ ಗುಣಮಟ್ಟವನ್ನು ಪ್ರತಿಬಿಂಬಿಸುವಂತಿವೆ. ಇಂಥ ಇಂಪಾದ ಹಾಡುಗಳ ಅಗತ್ಯ ಇಂದಿನ ಚಿತ್ರರಂಗಕ್ಕೆ ಇದೆ ಎಂದು ಹೇಳಿ ಖುಷಿಪಟ್ಟರು.
ಚಿತ್ರದ ನಾಯಕಿ ನಿವೇದಿತಾ ದಾವಣಗೆರೆಯಲ್ಲಿ ತಾವೆಲ್ಲಾ ಚಿತ್ರೀಕರಣದಲ್ಲಿ ತೊಡಗಿದ್ದ ಮನೆಯಲ್ಲಿ ಮಗುವೊಂದು ಜನಿಸಿತು. ಅದಕ್ಕೆ `ಪರಿ~ ಎಂದು ಹೆಸರಿಡಲಾಯಿತು ಎಂದು ನೆನಪಿಸಿಕೊಂಡರು.
ನಾಯಕ ರಾಕೇಶ್‌ಗೆ ಹಿರಿಯರೊಂದಿಗೆ ಕೆಲಸ ಮಾಡಿದ್ದು ಸಂತಸ ತಂದಿದೆ. ಖಳನಾಯಕ ನಾಗಕಿರಣ್ ತಮ್ಮ ಪಾತ್ರಕ್ಕೆ ರಂಗಭೂಮಿ ನಿರ್ದೇಶಕ ಸುರೇಶ್ ಅನಗಳ್ಳಿ ಅವರಿಂದ ತರಬೇತಿ ಪಡೆದಿದ್ದಾಗಿ ಹೇಳಿಕೊಂಡರು.
ಕೊನೆಯಲ್ಲಿ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸೀಡಿ ಬಿಡುಗಡೆ ಮಾಡಿ ಶುಭ ಕೋರಿದರು.ನಿರ್ಮಾಪಕರಾದ ದಿವಿಜಾ. ಕೆ, ಮೋಗನ್ ಬಾಬು, ನಿತ್ಯಾನಂದ, ಎಂ.ಎಸ್. ಗೌಡ, ರಾಮಕೃಷ್ಣ ಭಟ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.