ADVERTISEMENT

ಒಲವಿನ ನಗರಿಯೊಳು...

​ಪ್ರಜಾವಾಣಿ ವಾರ್ತೆ
Published 13 ಜೂನ್ 2013, 19:59 IST
Last Updated 13 ಜೂನ್ 2013, 19:59 IST
ಅರ್ಜುನ್ 		            ಸಿ. ಸಂಪತ್‌ಕುಮಾರ್	              ಜಾನಕಿರಾಂ
ಅರ್ಜುನ್ ಸಿ. ಸಂಪತ್‌ಕುಮಾರ್ ಜಾನಕಿರಾಂ   

ಚಿತ್ರರಂಗದ ಹಿರಿಯ ಕಿರಿಯರ ಸಂಗಮದಂತಿತ್ತು `ಪ್ರೇಮ್ ನಗರ್' ಧ್ವನಿಮುದ್ರಿಕೆ ಬಿಡುಗಡೆ ಸಮಾರಂಭ. ಅತ್ತ ಹಲವು ಉತ್ತಮ ಚಿತ್ರಗಳನ್ನು ನೀಡಿದ ನಿರ್ದೇಶಕ ಜಾನಕಿರಾಂ. ಇತ್ತ `ಪ್ರೇಮ್‌ನಗರ್' ಕೈಯಲ್ಲಿ ಹಿಡಿದು ನಿರ್ದೇಶಕ ಹುದ್ದೆಗೇರುವ ಹಂಬಲದ ಸಿ. ಸಂಪತ್‌ಕುಮಾರ್...

ಚಿತ್ರಕ್ಕೆ ಸೆನ್ಸಾರ್ ಮಂಡಳಿಯ ಅನುಮತಿ ದೊರೆತು ಆರು ತಿಂಗಳೇ ಕಳೆದಿದ್ದವು. ಆದರೂ `ಪ್ರೇಮ್ ನಗರ್' ಗಾಂಧಿನಗರದತ್ತ ಸುಳಿದಿರಲಿಲ್ಲ. ನಿರ್ದೇಶಕರ ಅನಾರೋಗ್ಯ ಇದಕ್ಕೆ ಕಾರಣವಂತೆ. ಎರಡು ಚಿತ್ರಗಳ ನಿರ್ಮಾಣಕ್ಕೆ ಮುಂದಾಗಿ ಕೈ ಸುಟ್ಟುಕೊಂಡ ಸಂಪತ್‌ಕುಮಾರ್ `ಪ್ರೇಮ್‌ನಗರ್' ಕುರಿತು ಮೊದಮೊದಲು ಹೆಚ್ಚು ತೆರೆದುಕೊಳ್ಳಲಿಲ್ಲ.

ಕತೆ, ಚಿತ್ರಕತೆ, ನಿರ್ಮಾಣದ ನೊಗವನ್ನೂ ಎಳೆಯುತ್ತಿರುವ ಅವರು ಮತ್ತೊಮ್ಮೆ ಮಾತಿಗಿಳಿದಾಗ ತಾಂತ್ರಿಕ ವಿವರಗಳು ದೊರೆತವು. ಇಪ್ಪತ್ತೈದು ದಿನಗಳ ಕಾಲ ಚಿತ್ರೀಕರಣ ನಡೆದಿದೆ. ತಂಗಾಳಿ ನಾಗರಾಜ್ ಸಂಗೀತ ನಿರ್ದೇಶನದ ನಾಲ್ಕು ಹಾಡುಗಳಲ್ಲಿ ವಿಷಾದದ ಎಳೆಯಿರುವ ಗೀತೆಯೊಂದನ್ನು ಕೈ ಬಿಡಲಾಗಿದೆ. ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆದಿದೆ.

ಸಂಗೀತ ನಿರ್ದೇಶಕ ತಂಗಾಳಿ ನಾಗರಾಜ್ ಅವರಿಗೆ ಕೂಡ ಇದು ಮೊದಲ ಯತ್ನ. `ತಿಮ್ಮ' ಚಿತ್ರದಲ್ಲಿ ಸವಿಯಾಗಿ ಹಾಡಿದ್ದ ಅವರನ್ನು ಸಂಪತ್‌ಕುಮಾರ್ ಗುರುತಿಸಿದ್ದರು. `ಪ್ರೇಮ್‌ನಗರ್'ಗೆ ರಾಗ ಸಂಯೋಜಿಸುವಂತೆ ಕೋರಿದ್ದರು. ಈಗ ಅದು ಫಲ ನೀಡಿದೆ. ಹಾಡುಗಳು ಕತೆಗೆ ಪೂರಕವಾಗಿವೆ ಎನ್ನುತ್ತ ನಾಗರಾಜ್ ಪ್ರೇಕ್ಷಕರ ಹಾರೈಕೆ ಬಯಸಿದರು.

`ಮೆಂಟಲ್ ಮಂಜ', `ತಿಮ್ಮ' `ಮೂರನೇ ಕ್ಲಾಸ್ ಮಂಜ ಬಿಕಾಂ ಭಾಗ್ಯ' ಮುಂತಾದ ಚಿತ್ರಗಳಲ್ಲಿ ನಟಿಸಿರುವ ಅರ್ಜುನ್ ಚಿತ್ರದ ನಾಯಕ. ಇಲ್ಲಿ ಅವರು ಮೆಕಾನಿಕ್ ಹುಡುಗನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಶ್ರೀಮಂತ ಹುಡುಗಿ ಸಂಕಷ್ಟದಲ್ಲಿದ್ದಾಗ ಬದುಕಿನ ದಾರಿ ತೋರುವ ಯತ್ನ ಅವರದಂತೆ. ವಿತರಕ ಜ್ಞಾನೇಶ್ವರ್ ಐತಾಳ್, ಪೋಷಕ ಪಾತ್ರ ನಿರ್ವಹಿಸುತ್ತಿರುವ ನಟಿ ಸಂಗೀತಾ ಚಿತ್ರತಂಡಕ್ಕೆ ಶುಭ ಕೋರಿದರು. ನಾಯಕ ನಟಿ ವರ್ಷಾ ಸಮಾರಂಭದಲ್ಲಿ ಹಾಜರಿರಲಿಲ್ಲ.

ಉಪಗ್ರಹ ಹಕ್ಕಿಗೆ ಕಾಯಬೇಕಿಲ್ಲ...
ಹಿರಿಯ ನಿರ್ಮಾಪಕ ಜಾನಕಿರಾಂ ಆ ದಿನಗಳನ್ನು ನೆನೆದರು... ಆ ಕಾಲದಲ್ಲಿ ಉಪಗ್ರಹ ಪ್ರಸಾರ ಇರಲಿಲ್ಲ. ಆದರೂ ಉತ್ತಮ ಚಿತ್ರಗಳು ಬರುತ್ತಿದ್ದವು. ನಾನು ಹದಿನಾರು ಸಿನಿಮಾಗಳನ್ನು ಮಾಡಿದೆ. ಎರಡು ತೆಲುಗು ಸಿನಿಮಾಗಳನ್ನೂ ತಯಾರಿಸಿದೆ. `ಪೋಲಿ ಹುಡುಗ' ಚಿತ್ರಕ್ಕಾಗಿ ಆ ಕಾಲದಲ್ಲಿ ರವಿಚಂದ್ರನ್ ಅವರಿಗೆ ಆರು ಲಕ್ಷ ರೂಪಾಯಿ ಸಂಭಾವನೆ ನೀಡಿದ್ದೆ.

ADVERTISEMENT

ಈಗ ನನ್ನ ಹೊಸ ಚಿತ್ರ `ಸೆಂಟ್ರಲ್ ಜೈಲ್'ಗಾಗಿ `ಒಲವೇ ಮಂದಾರ' ಖ್ಯಾತಿಯ ಶ್ರೀಕಿ ಅವರಿಗೆ ಆರು ಲಕ್ಷ ರೂಪಾಯಿ ಸಂಭಾವನೆ ಕೊಟ್ಟಿದ್ದೇನೆ. ಕಾಲ ಬದಲಾಗಿದೆ. ಸ್ಯಾಟಲೈಟ್ ಹಕ್ಕಿಗಾಗಿ ಕಾಯುತ್ತ ಕೂರುವ ದಿನಗಳು ಈಗ ಇಲ್ಲ. ನನ್ನ `ಸೆಂಟ್ರಲ್ ಜೈಲ್' ಉಪಗ್ರಹ ಪ್ರಸಾರದ ನೆರವಿಲ್ಲದೆ ಬಿಡುಗಡೆಯಾಗುತ್ತಿದೆ. ಚಿತ್ರ ತೆರೆಗೆ ತರಲು ವಿತರಕ ಜ್ಞಾನೇಶ್ವರ್ ಐತಾಳ್ ಸಹಾಯ ಮಾಡುತ್ತಿದ್ದಾರೆ...

ನಿರ್ಮಾಪಕ ಮಾಣಿಕ್‌ಚಂದ್ ಕೂಡ ಈ ಮಾತುಗಳನ್ನು ಬೆಂಬಲಿಸಿದರು. ವಾಹಿನಿಗಳನ್ನು ನಂಬಿ ಈಗಾಗಲೇ 75ರಿಂದ 80 ಚಿತ್ರಗಳು ತೆರೆ ಕಂಡಿಲ್ಲ. ಒಳ್ಳೆಯ ಚಿತ್ರ ಎಂದಿಗೂ ಗೆಲ್ಲುತ್ತದೆ. ಉಪಗ್ರಹ ಹಕ್ಕೊಂದೇ ಅಂತಿಮವಲ್ಲ ಎಂಬರ್ಥದ ಮಾತುಗಳನ್ನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.