‘ಇವರು ಯಾರು?’
ಪೋಸ್ಟರ್‌ನಲ್ಲಿ ಕಾಣುತ್ತಿದ್ದ ಮಾದಕ ಯುವತಿಯತ್ತ ಬೆರಳು ತೋರಿಸಿ ಮುಗ್ಧರಂತೆ ಕೇಳಿದರು ರವಿಚಂದ್ರನ್.
ತಕ್ಷಣ ನಗೆಬುಗ್ಗೆ ಸ್ಫೋಟಿಸಿತು. ಅಲ್ಲಿದ್ದುದು ಸನ್ನಿ ಲಿಯೋನ್ ಚಿತ್ರ!
ಅವರು ಹಾಗೆ ಪ್ರಶ್ನಿಸಲು ಕಾರಣವಿಷ್ಟೇ: ದಿಢೀರೆಂದು ಒಬ್ಬೊಬ್ಬರೇ ತಾರೆಗಳು ‘ಲವ್ ಯೂ ಆಲಿಯಾ’ ಚಿತ್ರದ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸುದೀಪ್, ಭೂಮಿಕಾ ಚಾವ್ಲಾ, ನಿಕಿಶಾ ಪಟೇಲ್... ಹೀಗೆ. ಆ ಸಾಲಿನಲ್ಲಿ ಈಚೆಗಷ್ಟೇ ಸೇರಿರುವ ನಟಿ ಯಾರು ಎಂದು ತಿಳಿದುಕೊಳ್ಳಲು ರವಿಚಂದ್ರನ್ ಹಾಗೆ ಕೇಳಿದ್ದರು.
ಇಂದ್ರಜಿತ್ ಲಂಕೇಶ್ ನಿರ್ದೇಶನದ ‘...ಆಲಿಯಾ’ ಸಿನಿಮಾದ ಹಾಡುಗಳ ಸಿ.ಡಿ ಬಿಡುಗಡೆಗೆ ರವಿಚಂದ್ರನ್ ಬಂದಿದ್ದರು. ಅವರಿಗೆ ಅದರಲ್ಲಿ ವೈದ್ಯನ ಪಾತ್ರ. ‘ನನ್ನ ಚಿತ್ರದ ಸಿನಿಮಾ ಹಾಡುಗಳ ಬಿಡುಗಡೆ ನನ್ನಿಂದಲೇ ಆಗುತ್ತಿದೆ. ಆದರೆ ನನಗೆ ಒಂದೂ ಹಾಡು ಇದರಲ್ಲಿ ಇಲ್ವಲ್ಲ ಸಾರ್?’ ಎಂದು ಹುಸಿಕೋಪದಿಂದ ಸಂಗೀತ ನಿರ್ದೇಶಕ ಜೆಸ್ಸಿ ಗಿಫ್ಟ್ ಅವರನ್ನು ರವಿಚಂದ್ರನ್ ಪ್ರಶ್ನಿಸಿದರು.
ಈವರೆಗೆ ಮಾಡಿರದಂಥ ಪಾತ್ರವನ್ನು ರವಿಚಂದ್ರನ್ ‘ಲವ್ ಯೂ ಆಲಿಯಾ’ ಚಿತ್ರದಲ್ಲಿ ನಿರ್ವಹಿಸಿದ್ದಾರೆ. ಅದಕ್ಕೆ ರಾಜ್ಯ ಅಥವಾ ರಾಷ್ಟ್ರ ಪ್ರಶಸ್ತಿ ಸಿಕ್ಕರೂ ಅಚ್ಚರಿಯಿಲ್ಲ ಎಂದು ಇಂದ್ರಜಿತ್ ಶ್ಲಾಘಿಸಿದರು. ‘ರವಿ ಸಾರ್ ಇದ್ದಿದ್ದಕ್ಕೋ ಏನೋ, ಮುಹೂರ್ತದಿಂದ ಹಿಡಿದು ಈವರೆಗೆ ಒಂದೇ ಒಂದೂ ತೊಂದರೆ ಕಾಣಿಸಿಕೊಂಡಿಲ್ಲ’ ಎಂದರು. ರವಿಚಂದ್ರನ್ ಜತೆ ಕಾಣಿಸಿಕೊಂಡಿರುವ ಭೂಮಿಕಾ ಚಾವ್ಲಾ ಅವರಿಗೂ ಸವಾಲು ಹಾಕುವಂಥ ಪಾತ್ರ ಇದರಲ್ಲಿದೆಯಂತೆ. ‘ನಮ್ಮ ಚಿತ್ರ ಗೆದ್ದರೆ ಇಡೀ ಚಿತ್ರತಂಡಕ್ಕೆ ಆ ಕ್ರೆಡಿಟ್ ಸಲ್ಲುತ್ತದೆ; ಸೋತರೆ ಅದಕ್ಕೆ ನಾನೇ ಹೊಣೆ’ ಎಂದು ಇಂದ್ರಜಿತ್ ಘೋಷಿಸಿದರು.
ಪೂರ್ಣ ಪ್ರಮಾಣದಲ್ಲಿ ಕನ್ನಡದಲ್ಲಿ ತಾವು ಅಭಿನಯಿಸಿರುವ ಮೊದಲ ಸಿನಿಮಾ ಇದು ಎಂದ ಭೂಮಿಕಾ, ರವಿಚಂದ್ರನ್ ಹಾಗೂ ಇಂದ್ರಜಿತ್ ಜತೆ ಕೆಲಸ ಮಾಡುವುದು ಅದ್ಭುತ ಅನುಭವ ಕೊಡುತ್ತದೆ ಎಂದು ಬಣ್ಣಿಸಿದರು. ಸಣ್ಣ ಪಾತ್ರದಲ್ಲಿ ಬಂದು ಹೋಗುವ ನಿಕಿಷಾ ಪಟೇಲ್, ‘ಕಿರಿದಾದರೂ ಮಹತ್ವದ ಪಾತ್ರವಿದೆ’ ಎಂದರು. ಒಂದು ಸಿನಿಮಾಕ್ಕೆ ಐದಾರು ಸಾಹಿತಿಗಳು ಹಾಡು ಬರೆಯುತ್ತಿರುವ ಇಂದಿನ ದಿನಗಳಲ್ಲಿ, ಇಂದ್ರಜಿತ್ ಅವರು ತಮ್ಮಿಂದಲೇ ಎಲ್ಲ ಹಾಡು ಬರೆಸಿರುವುದಕ್ಕೆ ಕವಿರಾಜ್ ಕೃತಜ್ಞತೆ ಸಲ್ಲಿಸಿದರು.
‘ಆನಂದ್ ಆಡಿಯೋ’ದ ಶ್ಯಾಮ್, ನಟಿ ಶಕೀಲಾ, ಸಂಗೀತ ನಿರ್ದೇಶಕ ಜೆಸ್ಸಿ ಗಿಫ್ಟ್ ಮಾತನಾಡಿದರು. ಕಾರ್ಯಕಾರಿ ನಿರ್ಮಾಪಕ ಅನೂಪ್, ಸೃಜನ್ ಲೋಕೇಶ್ ಇತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.