ADVERTISEMENT

ಕನಸು ಆಕಾಶ; ಅಭಿರುಚಿ ಪಾತಾಳ!

​ಪ್ರಜಾವಾಣಿ ವಾರ್ತೆ
Published 6 ಜುಲೈ 2017, 19:30 IST
Last Updated 6 ಜುಲೈ 2017, 19:30 IST
ಅಶ್ವಿನಿ, ಯೋಗೇಶ್‌ ಮತ್ತು ಪ್ರಿಯಾಂಕಾ
ಅಶ್ವಿನಿ, ಯೋಗೇಶ್‌ ಮತ್ತು ಪ್ರಿಯಾಂಕಾ   

ಥೂ ಬಡ್ಡೆತ್ತದೆ

ಇದೇನು ಕಾರಣ ಹೇಳದೆ ಹೀಗೆಲ್ಲ ಬಾಯಿಗೆ ಬಂದಂಗೆ ಬೈತಿದಾರೆ ಎಂದು ಕೋಪಗೊಳ್ಳಬೇಡಿ. ಇದು ಇತ್ತೀಚೆಗೆ ಬಿಡುಗಡೆಯಾದ ಕನ್ನಡ ರ‍್ಯಾಪ್‌ ಸಾಂಗ್‌ ಒಂದರ ಹೆಸರು! ಇದನ್ನು ರೂಪಿಸಿರುವವರು ಯೋಗೇಶ್‌ ಕುಮಾರ್‌ ಜೆ. ಒಳ್ಳೆಯ ಅಭಿರುಚಿ ಇರುವ ಸಿನಿಮಾಗಳನ್ನು ನಿರ್ದೇಶಿಸಬೇಕು ಎಂಬ ಕನಸನ್ನಿಟ್ಟುಕೊಂಡು ಗಾಂಧಿನಗರದೆಡೆಗೆ ಆಸೆಗಣ್ಣಿನಿಂದ ನೋಡುತ್ತಿರುವ ಯೋಗೇಶ್‌ ಕುಮಾರ್‌, ಈ ಹಾಡು ತನ್ನ ಮುಂದಿನ ಹೆಜ್ಜೆಗೆ ಸಹಕಾರಿ ಆಗಲಿದೆ ಎಂಬ ನಂಬಿಕೆಯಲ್ಲಿದ್ದಾರೆ.

‘ಬಡ್ಡೆತ್ತದೆ’ ಹಾಡಿನ ಬಿಡುಗಡೆ ಕಾರ್ಯಕ್ರಮಕ್ಕೆ ಹೋದವರಿಗೆ ಒಮ್ಮೆ ಇದು ಇಂಗ್ಲಿಷ್‌ ಹಾಡೇ ಎಂಬ ಅನುಮಾನ ಮೂಡಿದ್ದು ನಿಜ. ಯಾಕೆಂದರೆ ವೇದಿಕೆಯ ಮೇಲೆ ಇರಿಸಲಾಗಿದ್ದ ಎರಡು ದೊಡ್ಡ ಬ್ಯಾನರ್‌ಗಳಲ್ಲಿ ಒಂದರಲ್ಲಿಯೂ ಒಂದೇ ಒಂದು ಕನ್ನಡ ಅಕ್ಷರವೂ ಇರಲಿಲ್ಲ! ಜತೆಗೆ ‘ಕನ್ನಡ ರಿಜೆಕ್ಟೆಡ್‌ ವಿಡಿಯೊ ಸಾಂಗ್‌’ ಎಂಬ ಮೊಹರೂ ಇತ್ತು. ಹಾಡನ್ನು ಬಿಡುಗಡೆ ಮಾಡಲು ಬಂದಿದ್ದ ಕಿರಿಕ್‌ ಕೀರ್ತಿ ಸಹ ಈ ಬಗ್ಗೆ ಸಣ್ಣ ಆಕ್ಷೇಪ ವ್ಯಕ್ತಪಡಿಸಿದರು.

ADVERTISEMENT

ನಂತರ ವಿಡಿಯೊ ಸಾಂಗ್‌ ಅನ್ನು ತೋರಿಸಲಾಯಿತು. ಯೋಗೀಶ್‌ ಅವರು ಮೊದಲು ವ್ಯಕ್ತಪಡಿಸಿದ್ದ ‘ಒಳ್ಳೆಯ ಅಭಿರುಚಿ’ಯ ಆಶಯಕ್ಕೂ ಈ ಹಾಡಿನ ಸಾಲಿಗೂ ತಾಳಮೇಳವೇ ಇರಲಿಲ್ಲ. ‘ಥೂ ನಿನ್ನ ಮುಖ ಮುಚ್ಚಾ, ಥೂ ನಿಂಗ್‌ ನಾಯಿ ಕಚ್ಚಾ, ಥೂ ನೀನೊಬ್ಬ ಲುಚ್ಚಾ’ ಹೀಗೆ ಸಾಗುವ ಹಾಡು ಆಶ್ಲೀಲತೆಯ ಗಡಿ ದಾಟಿ ‘ನಾನು ತುಂಬ ಡೀಸೆಂಟು ಮಾಡಲ್ಲ ನಿನ್‌ ಪ್ರೆಗ್ನೆಂಟು; ಯಾಕೆ ಅಂದ್ರೆ ನೀನು ಸನ್ನಿ ಲಿಯೋನ್‌ ಸ್ಟುಡೆಂಟು’ ಎಂಬೆಲ್ಲ ಸಾಲುಗಳು ಕಿವಿಗೆರಚಿದಾಗ ‘ಥೂ ಬಡ್ಡೆತ್ತವು’ ಎಂದು ಉಗಿಯುವ ಸರದಿ ವೀಕ್ಷಕರದಾಗಿತ್ತು.

ಹಾಡಿನ ಒಂದು ಕಡೆಯಲ್ಲಿ ಒಂದು ಶಬ್ದಕ್ಕೆ ಮ್ಯೂಟ್‌ ಮಾಡಲಾಗಿದೆ. ಈ ಬಗ್ಗೆ ಯೋಗೇಶ್‌ ಅವರನ್ನು ಕೇಳಿದಾಗ ಅವರು ಹೇಳಿದ್ದು ‘ಮೊದಲು ಲಹರಿಯಲ್ಲಿ ಬರೆದು ಹಾಡಿಬಿಟ್ಟೆವು. ನಂತರ ಕೇಳಿದಾಗ ಯಾಕೋ ಆ ಶಬ್ದ ಸರಿ ಇಲ್ಲ ಅನಿಸಿತು. ಅದಕ್ಕೆ ಮ್ಯೂಟ್‌ ಮಾಡಿದೆ’ ಎಂದರು.

ಅವರ ಮಾತಿಗೆ ಸಭೆಯಿಂದ ’ಹಾಗೆ ನೋಡಿದರೆ ಇಡೀ ಹಾಡೇ ಮ್ಯೂಟ್‌ ಮಾಡಬೇಕಾಗಿತ್ತು ಬಿಡಿ’ ಎಂಬ ಮಾತೂ ಕೇಳಿಬಂತು.

ಯೋಗೇಶ್‌ ಅವರ ಈ ಹಾಡಿನ ಕನಸಿಗೆ ಹಣ ಸುರಿದವರು ರಮೇಶ್‌ ಕುಮಾರ್‌ ಜೈನ್‌. ಬಡ್ಡೆತ್ತದೆ ಎಂಬುದನ್ನು ಬಡೆತಡೆ ಎಂದು ಉಚ್ಛರಿಸಿದ ಅವರು ‘ನನಗೆ ಈ ಹಾಡಿನ ಅರ್ಥ ಆಗಲಿಲ್ಲ. ಆದರೆ ಹೊಸ ಹುಡುಗ ಏನೋ ಹೊಸದನ್ನು ಮಾಡುತ್ತಿದ್ದಾನೆ. ಅವನಿಗೆ ಸಹಾಯ ಮಾಡಬೇಕು ಎಂಬ ಕಾರಣಕ್ಕೆ ಹಣ ಹೂಡಲು ಒಪ್ಪಿಕೊಂಡೆ’ ಎಂದು ಪ್ರಾಮಾಣಿಕವಾಗಿ ಹೇಳಿಕೊಂಡರು.

ಈ ಹಾಡಿನಲ್ಲಿ ಯೋಗೀಶ್‌ ಜತೆ ಅಶ್ವಿನಿ, ಪ್ರಿಯಾಂಕಾ, ಬಿಂದು ಎಂಬ ಮೂವರು ಹುಡುಗಿಯರು ಹೆಜ್ಜೆ ಹಾಕಿದ್ದಾರೆ. ಎಲ್ಲರೂ ‘ಈ ವಿಡಿಯೊ ಸಾಂಗ್‌ ಚಿತ್ರೀಕರಣದ ಅನುಭವ ಚೆನ್ನಾಗಿತ್ತು’ ಎಂಬ ಸಾಮಾನ್ಯ ಸಾಲಿನೊಂದಿಗೆ ಮಾತು ಮುಗಿಸಿದರು. ಇದರಲ್ಲಿನ ಹೆಣ್ಣುಮಕ್ಕಳಿಗೆ ಅವಹೇಳನ ಮಾಡುವಂಥ ಸಾಲುಗಳೂ ನಿಮಗೆ ಖುಷಿಕೊಟ್ಟಿವೆಯೇ ಎಂಬ ಪ್ರಶ್ನೆಗೆ ‘ಏನೋ ಹಾಡಿನ ಲಹರಿಯಲ್ಲಿ ಬಂದುಬಿಟ್ಟಿದೆ. ಆ ರೀತಿ ಇರಬಾರದಿತ್ತು. ಆದರೆ ಇಂದಿನ ಯುವಕರಿಗೆ ಅವೇ ಇಷ್ಟವಾಗುತ್ತದೆ’ ಎಂದು ತಡಬಡಾಯಿಸಿ ಉತ್ತರಿಸಿ ನುಣುಚಿಕೊಂಡರು.

ಸಿನಿಮಾ ನಿರ್ದೇಶನಕ್ಕೂ ಮುನ್ನ ತಮ್ಮ ಪ್ರತಿಭೆಯನ್ನು ಸಾಬೀತುಗೊಳಿಸಬೇಕು ಎಂಬ ಉದ್ದೇಶದಿಂದ ಯೋಗೇಶ್‌ ರೂಪಿಸಿರುವ ವಿಡಿಯೊ ಸಾಂಗ್‌ ನೋಡಿ ಹೊರಬರುವಾಗ ಎಲ್ಲರಿಗೂ ಮೊದಲ ಸಾಲು ‘ಥೂ ಬಡ್ಡೆತದೆ ಥೂ ಥೂ ಬಡ್ಡೆತದೆ..’ ಎಂಬುದನ್ನು ಹಾಡನ್ನು ಮಾಡಿದವರನ್ನು ಉದ್ದೇಶಿಸಿಯೇ ಉಗಿಯುತ್ತಿದ್ದಾರೆ ಎನಿಸಿದ್ದಂತೂ ಸುಳ್ಳಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.