ADVERTISEMENT

ಕಾಡಿನವೀರನ ಲವ್‌ಸ್ಟೋರಿ

​ಪ್ರಜಾವಾಣಿ ವಾರ್ತೆ
Published 27 ಜನವರಿ 2011, 18:30 IST
Last Updated 27 ಜನವರಿ 2011, 18:30 IST
ಕಾಡಿನವೀರನ ಲವ್‌ಸ್ಟೋರಿ
ಕಾಡಿನವೀರನ ಲವ್‌ಸ್ಟೋರಿ   

ಕಿರುತೆರೆಗೆ ಬಂದಿದ್ದ ಹಳ್ಳಿ ಹೈದ ಈಗ ಬೆಳ್ಳಿತೆರೆಗೆ! ಸುವರ್ಣ ವಾಹಿನಿಯ ‘ಹಳ್ಳಿ ಹೈದ ಪ್ಯಾಟೆಗೆ ಬಂದ’ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ರಾಜೇಶ್ ಈಗ ಸಿನಿಮಾ ಹೀರೊ! ಚಿತ್ರದ ಹೆಸರು ‘ಜಂಗಲ್ ಜಾಕಿ’. ರಿಯಾಲಿಟಿ ಶೋನಲ್ಲಿ ರಾಜೇಶ್‌ನನ್ನು ಜೊತೆಗಾತಿಯಾಗಿ ಮುನ್ನಡೆಸಿದ್ದ ಐಶ್ವರ್ಯ ಸಿನಿಮಾದಲ್ಲೂ ನಾಯಕಿ.

‘ಜಂಗಲ್ ಜಾಕಿ’ ಮೂಲಕ ರವಿ ಕಡೂರ್ ನಿರ್ದೇಶಕರ ಕ್ಯಾಪ್ ಅನ್ನು ಮೊದಲಸಲ ತೊಡುತ್ತಿದ್ದಾರೆ. ‘ಪ್ರೇಮ್‌ಕಹಾನಿ’ ಹಾಗೂ ‘ಮೈಲಾರಿ’ ಚಿತ್ರಗಳಲ್ಲಿ ಆರ್.ಚಂದ್ರು ಅವರಿಗೆ ಸಹಾಯಕರಾಗಿ ಕೆಲಸ ಮಾಡಿದ್ದ ರವಿ ಈಗ ಸ್ವತಂತ್ರ ನಿರ್ದೇಶನದ ಸವಾಲಿಗೆ ಮುಖಾಮುಖಿಯಾಗಿದ್ದಾರೆ. ಎನ್.ಸಿಂಧೂರ್ ಮತ್ತು ಎನ್.ಭಾರ್ಗವ ಚಿತ್ರದ ನಿರ್ಮಾಪಕರು.

ರವಿ ಕಡೂರ್‌ಗೆ ರಾಜೇಶ್‌ನ ಮುಗ್ಧತೆ ಇಷ್ಟವಾಗಿದೆಯಂತೆ. ಈ ಮುಗ್ಧತೆಯನ್ನೇ ನೆಚ್ಚಿಕೊಂಡು ಅವರು ಕಥೆ ಹೊಸೆದಿದ್ದಾರೆ. ಕಾಡಿನ ಪರಿಸರದ ಹುಡುಗನೊಬ್ಬನಿಗೆ ಸಿನಿಮಾ ಎಂದರೆ ಪ್ರೀತಿ. ಪುನೀತ್ ರಾಜಕುಮಾರ್ ಆರಾಧ್ಯದೈವ. ಇಂಥ ಹುಡುಗ ಹುಡುಗಿಯೊಬ್ಬಳ ಪ್ರೇಮದಲ್ಲಿ ಬೀಳುವುದು, ಪ್ರೇಮಪಯಣದಲ್ಲಿ ತವಕತಲ್ಲಣಗಳಿಗೆ ಈಡಾಗುವುದು ಸಿನಿಮಾದ ಕಥೆ. ಹೆಗ್ಗಡದೇವನಕೋಟೆ ಮತ್ತು ಸಕಲೇಶಪುರ ಪರಿಸರದಲ್ಲಿ ಚಿತ್ರೀಕರಣ ನಡೆಸಲು ನಿರ್ದೇಶಕರು ತಯಾರಿ ನಡೆಸಿದ್ದಾರೆ.

ನಿರ್ಮಾಪಕ ಸಿಂಧೂರ್ ಅವರಿಗೆ ನಿರ್ದೇಶಕರು ಹೇಳಿದ ಕಥೆ ಮೊದಲ ಸಿಟ್ಟಿಂಗ್‌ನಲ್ಲೇ ಸಿಕ್ಕಾಪಟ್ಟೆ ಇಷ್ಟವಾಗಿದೆ. ರಾಜೇಶ್ ಹೀರೊ ಆಗಿರುವುದು ಅವರಿಗೆ ರೋಮಾಂಚನ ಅನ್ನಿಸಿದೆ. ಬಹುದಿನಗಳಿಂದ ಕನ್ನಡ ಸಿನಿಮಾ ಒಂದನ್ನು ರೂಪಿಸುವ ಕನಸು ಕಾಣುತ್ತಿದ್ದ ಅವರು, ‘ಜಂಗಲ್ ಜಾಕಿ’ ಮೂಲಕ ನಿರ್ಮಾಪಕರಾಗುತ್ತಿದ್ದಾರೆ.

ರಾಜೇಶ್‌ಗೆ ಸಿನಿಮಾದಲ್ಲಿನ ಚೊಚ್ಚಿಲ ಅವಕಾಶ ಖುಷಿ ಕೊಟ್ಟಿದೆ. ಇದೊಂದೇ ಅಲ್ಲ, ಇನ್ನೂ ನಾಲ್ಕು ಅವಕಾಶ ಬಂದಿದ್ದವು ಎಂದು ಹೇಳುವಾಗ ರಾಜೇಶ್ ಕಣ್ಣುಗಳಲ್ಲಿ ಹೊಳಪು. ಆತನನ್ನು ರವಿ ಕಡೂರರ ಚಿತ್ರಕಥೆ ಮರುಳು ಮಾಡಿದೆಯಂತೆ.

ಕಿರುತೆರೆಯಲ್ಲಿ ಪಳಗಿರುವ ಐಶ್ವರ್ಯಾಳಿಗೆ ‘ಜಂಗಲ್ ಜಾಕಿ’ ಪಾತ್ರದ ನಿರ್ವಹಣೆ ಕಷ್ಟ ಅನ್ನಿಸಿಲ್ಲವಂತೆ. ಯಾಕೆಂದರೆ, ಚಿತ್ರದ ಪಾತ್ರಕ್ಕೂ ಅವರ ಸ್ವಭಾವಕ್ಕೂ ವಿಪರೀತ ಸಾಮ್ಯತೆಗಳಿವೆಯಂತೆ. ತನ್ನನ್ನೇ ತಾನು ಪಾತ್ರದಲ್ಲಿ ಕಾಣುತ್ತಿದ್ದಾಳೆ ಐಶ್ವರ್ಯಾ.

ಧರ್ಮತೇಜ ಎನ್ನುವವರು ಚಿತ್ರದಲ್ಲಿ ಖಳನಾಯಕನ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಸಂಗೀತ ವಿ.ಮನೋಹರ್ ಅವರದ್ದು. ಕಾಡಿನ ಸಂಸ್ಕೃತಿಯ ಸಂಗೀತವನ್ನು ಈಗಾಗಲೇ ಹಲವು ಚಿತ್ರಗಳಲ್ಲಿ ಸಂಯೋಜಿಸಿರುವ ಮನೋಹರ್, ಈಗ ಜಾಕಿಗಾಗಿ ಮತ್ತೆ ಪರಿಸರದ ಸ್ವರಗಳ ಮೊರೆ ಹೋಗುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.