ADVERTISEMENT

ಕೊನೆಗೂ ತ್ಯಾಗು...

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2011, 19:30 IST
Last Updated 17 ಮಾರ್ಚ್ 2011, 19:30 IST
ಕೊನೆಗೂ ತ್ಯಾಗು...
ಕೊನೆಗೂ ತ್ಯಾಗು...   

ಹಸಿವು, ಅನ್ಯಾಯ, ಅಕ್ರಮ, ಭ್ರಷ್ಟಾಚಾರ ಮುಂತಾದ ಸಾಮಾಜಿಕ ಮತ್ತು ರಾಜಕೀಯ ಅನಿಷ್ಟಗಳನ್ನು ತೆರೆಯ ಮೇಲೆ ತೋರಿಸುವ ಉದ್ದೇಶದಿಂದ ತಯಾರಾದ ಚಿತ್ರ ‘ತ್ಯಾಗು’ ಎಂಬುದು ನಿರ್ದೇಶಕ ಟೇಶೀ ವೆಂಕಟೇಶ್ ಅವರ ಅಭಿಪ್ರಾಯ. ಅವರು ಚಿತ್ರದ ನಿರ್ಮಾಪಕರೂ ಹೌದು. ನಾಯಕ ಬಾರ್ ಸಪ್ಲೈಯರ್. ಸಂದರ್ಭದ ಸುಳಿಗೆ ಸಿಲುಕಿ ಕೋಪದಿಂದ ತಪ್ಪು ಮಾಡಿ ಜೈಲು ಸೇರುವ ನಾಯಕ ನಂತರ ತನ್ನ ಕನಸುಗಳನ್ನು ಕಳೆದುಕೊಳ್ಳುತ್ತಾನೆ. ಭ್ರಷ್ಟರ ವಿರುದ್ಧ ಸಮರ ಸಾರುತ್ತಾನೆ. ಅದೇ ಚಿತ್ರದ ಸಾರಾಂಶ ಎನ್ನುತ್ತಾರೆ ವೆಂಕಟೇಶ್.

ಭ್ರಷ್ಟಾಚಾರ ನಿರ್ಮೂಲನೆಗೆ ಹಸಿರು ಕ್ರಾಂತಿಗಿಂತ ಕೆಂಪು ಕ್ರಾಂತಿಯ ಅಗತ್ಯ ಜಾಸ್ತಿ ಇದೆ ಎಂದು ನಂಬುವ ನಿರ್ದೇಶಕರು ಮೂಲ ಸೌಕರ್ಯ ಕಿತ್ತುಕೊಳ್ಳುವ ಶ್ರೀಮಂತರ ವಿರುದ್ಧದ ದನಿ ತಮ್ಮ ಚಿತ್ರದಲ್ಲಿದೆ ಎನ್ನುತ್ತಾರೆ. ಇಷ್ಟೆಲ್ಲಾ ಒಳ್ಳೆಯದನ್ನು ಹೇಳುತ್ತಿರುವ ತಮ್ಮ ಚಿತ್ರವನ್ನು ಬಿಡುಗಡೆ ಮಾಡಲು ಪಟ್ಟ ಪಾಡು ಅಷ್ಟಿಷ್ಟಲ್ಲ ಎನ್ನುವ ಅವರು ಅದರಲ್ಲಿ ತಮ್ಮ ತಪ್ಪುಗಳೂ ಇವೆ ಎನ್ನಲು ಮರೆಯುವುದಿಲ್ಲ.
 
‘ಸಾಕಷ್ಟು ನೋವು, ಒತ್ತಡ, ಸಮಸ್ಯೆ, ತೊಡಕಿನಿಂದ ಬೇಸರ ಬಂದು ಬಿಟ್ಟಿತ್ತು. ಅದನ್ನೆಲ್ಲಾ ಬದಿಗೊತ್ತಿ ಮುಂದಿನ ಹೆಜ್ಜೆ ಇಡುತ್ತಿದ್ದೇನೆ’ ಎಂದು ನೆಮ್ಮದಿಯ ನಿಟ್ಟುಸಿರಿಡುವ ವೆಂಕಟೇಶ್ ಚಿತ್ರವನ್ನು ಬಿಡುಗಡೆ ಮಾಡಲು ಸಜ್ಜಾಗಿದ್ದಾರೆ. ‘ಮೂರು ವರ್ಷದ ಹಿಂದೆ ಈ ಚಿತ್ರ ಆರಂಭವಾಗಿತ್ತು. ಸಾಕಷ್ಟು ಸಮಸ್ಯೆಗಳು ಅದಕ್ಕೆ ಎದುರಾಗಿ ಕೊನೆಗೂ ಚಿತ್ರೀಕರಣ ಮುಗಿಸಲಾಯಿತಾದರೂ ತಮ್ಮಂಥ ಬಡ ನಿರ್ಮಾಪಕರಿಗೆ ಉದ್ಯಮದಲ್ಲಿ ಯಾರೂ ಸಹಾಯ ಮಾಡಲಿಲ್ಲ’ ಎಂಬುದು ಟೇಶಿ ವೆಂಕಟೇಶ್ ಅಳಲು.

‘ತ್ಯಾಗು’ ಫಲಿತಾಂಶ ಏನೇ ಇರಲಿ ತಾವು ಕನ್ನಡ ಚಿತ್ರರಂಗದಲ್ಲಿಯೇ ನೆಲೆಯೂರುವುದಾಗಿ ಹೇಳುವ ವೆಂಕಟೇಶ್‌ಗೆ ಇನ್ನು ಮುಂದೆ ಸಂದೇಶ ಸಾರುವ ಚಿತ್ರಗಳನ್ನು ಕೊಡುವಾಸೆ ಇದೆ. ನಾಯಕ ದೀಪಕ್ ಅವರ ಮೂರನೇ ಚಿತ್ರ ಇದು. ಅವರು ಮಾತನಾಡಿ, ‘ವೆಂಕಟೇಶ್ ಅವರೊಂದಿಗೆ ಕೆಲಸ ಮಾಡಿದ್ದು ಸಂತಸ ಉಂಟು ಮಾಡಿದೆ. ಅವರು ಸೆಟ್‌ನಲ್ಲಿ ತುಂಬಾ ಗಂಭೀರವಾಗಿ ಇರುತ್ತಿದ್ದರು. ಉಳಿದ ಸಮಯದಲ್ಲಿ ನಗುನಗುತ್ತಾ ಮಾತನಾಡುತ್ತಿದ್ದರು. ಅವರ ಬಗ್ಗೆ ತಮಗೆ ಬಹುತೇಕರು ನೆಗೆಟಿವ್ ಅಂಶಗಳನ್ನು ಹೇಳಿದ್ದರು. ಆದರೆ ಅವರು ಹಾಗಲ್ಲ. ಮೂರು ವರ್ಷದ ಬಳಿಕ ನನ್ನ ಚಿತ್ರ ಹೊರಬರುತ್ತಿರುವುದು ಸಂತಸ ತಂದಿದೆ’ ಎಂದಷ್ಟೇ ಹೇಳಿ ಮಾತು ಮುಗಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.