ADVERTISEMENT

ಗಂಡ, ಮಕ್ಕಳು ಮೊದಲು...

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2013, 19:30 IST
Last Updated 22 ಡಿಸೆಂಬರ್ 2013, 19:30 IST

ಅದ್ಭುತ ನೃತ್ಯ ಲಾಲಿತ್ಯದಿಂದಲೇ ಹೆಸರಾದ ಮಾಧುರಿ ದೀಕ್ಷಿತ್‌ ತಮ್ಮ ಚಿತ್ರ ಬದುಕಿಗಿಂತ ವೈಯಕ್ತಿಕ ಬದುಕಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರಂತೆ. ಗಂಡ, ಮಕ್ಕಳು ಮೊದಲು; ಮಿಕ್ಕಿದ್ದೆಲ್ಲಾ ಆಮೇಲೆ ಎಂಬ ಸಿದ್ಧಾಂತ ಮಾಧುರಿಯದ್ದು. ಅಂದಹಾಗೆ, ಮಾಧುರಿ ಅಭಿನಯದ ‘ದೇಢ್‌ ಇಷ್ಕಿಯಾ’ ಚಿತ್ರ ಇನ್ನೇನು ತೆರೆಗೆ ಬರಲು ಸಿದ್ಧವಾಗಿದೆ.
 
ನೃತ್ಯಮೋಹಿಗಳ ಆರಾಧ್ಯ ದೈವವಾಗಿದ್ದ ಮಾಧುರಿ 1999ರಲ್ಲಿ ಡಾ.ಶ್ರೀರಾಂ ನೆನೆ ಅವರನ್ನು ಮದುವೆಯಾಗಿ ಅಮೆರಿಕಾಗೆ ಹಾರಿದ್ದರು. 2010ರವೆಗೂ ಅಲ್ಲೇ ನೆಲಸಿದ್ದ ಆಕೆ 2011ರಲ್ಲಿ  ಕುಟುಂಬ ಸಮೇತರಾಗಿ ಮುಂಬೈಗೆ ಬಂದು ನೆಲೆಸಿದರು. ‘ಮುಂಬೈನಲ್ಲಿರುವುದೇ ನನಗೆ ಹೆಚ್ಚು ಖುಷಿ. ವೈಯಕ್ತಿಕವಾಗಿ ನಾನು ಬೆಳೆದ ನಗರವಿದು. ಹಾಗಾಗಿ, ನನ್ನ ಮನಸ್ಸಿನಲ್ಲಿ ಯಾವಾಗಲೂ ಮುಂಬೈಗೆ ವಿಶೇಷ ಸ್ಥಾನ ಇರುತ್ತದೆೆ’ ಎನ್ನುತ್ತಾರೆ ಅವರು.

‘ಏನಿದ್ದರೂ ಕುಟುಂಬಕ್ಕೆ ನನ್ನ ಮೊದಲ ಆದ್ಯತೆ. ಒಂದು ವೇಳೆ ನನ್ನ ಮಗುವಿನ ಶಾಲೆಯಲ್ಲಿ ಯಾವುದಾದರೂ ಕಾರ್ಯಕ್ರಮವಿದ್ದರೆ ಉಳಿದೆಲ್ಲಾ ಕಾರ್ಯಕ್ರಮಗಳನ್ನು ಬದಿಗೊತ್ತಿ ನಾನು ಮೊದಲು ಆ ಕಾರ್ಯಕ್ರಮಕ್ಕೆ ಹಾಜರಿಯಾಗುತ್ತೇನೆ. ಆನಂತರವಷ್ಟೇ ನಿಗದಿತ ಸಮಾರಂಭಕ್ಕೆ ಹೋಗುತ್ತೇನೆ. ಸಮಯ ಹೊಂದಾಣಿಕೆ ಮಾಡಿಕೊಳ್ಳುವ ಕಲೆಯ ಮೇಲೆ ಎಲ್ಲವೂ ನಿಂತಿರುತ್ತದೆ ಎಂಬುದು ನನ್ನ ಭಾವನೆ. ಕೆಲಸ ಮಾಡುವ ಪ್ರತಿಯೊಬ್ಬ ಮಹಿಳೆಯೂ ಈ ಕಲೆಯನ್ನು ಕರಗತ ಮಾಡಿಕೊಂಡಿರಬೇಕು. ಅವರೆಲ್ಲರ ಮೊದಲ ಆದ್ಯತೆ ಕುಟುಂಬವೇ ಆಗಿರಬೇಕು’ ಎಂದು ಮಾತು ಸೇರಿಸುತ್ತಾರೆ ಅವರು.

ಅಂದಹಾಗೆ, ಮಾಧರಿ ಮಕ್ಕಳಾದ ಅರಿನ್‌ ಮತ್ತು ರಾಯನ್‌ ಭಾರತಕ್ಕೆ ಬರುವವರೆಗೆ, ಬೆಳ್ಳಿ ಪರದೆಯ ಮೇಲೆ  ಮಾಧುರಿ ಚಿತ್ರಗಳನ್ನು ನೋಡುವವರೆಗೂ ತನ್ನಮ್ಮ ಎಷ್ಟು ದೊಡ್ಡ ನಟಿ, ಆಕೆಗೆ ಎಷ್ಟು ಅಭಿಮಾನಿಗಳಿದ್ದಾರೆ ಎಂಬ ಬಗ್ಗೆ ತಿಳಿದಿರಲಿಲ್ಲವಂತೆ. ‘ನನ್ನನ್ನು ಮೊದಲಬಾರಿಗೆ ತೆರೆಯ ಮೇಲೆ ನೋಡಿದ ನನ್ನ ಮಕ್ಕಳು ಅಚ್ಚರಿಯಿಂದ ನನ್ನ ಬಳಿ ಓಡಿಬಂದು ‘ಅಮ್ಮಾ ನೀನು ಟೀವಿಯಲ್ಲಿ ಬರುತ್ತಿದ್ದೀಯಾ’ ಎಂದು ಖುಷಿಯಿಂದ ಮುಟ್ಟಿ ಹೇಳಿದ ಆ ಎರಡೂ ಮಕ್ಕಳ ಸ್ಪರ್ಶವನ್ನು ನಾನು ಈವರೆಗೂ ಮರೆತಿಲ್ಲ. ಈಗ ನನ್ನ ಮಕ್ಕಳಿಬ್ಬರಿಗೂ ನಾನು ನಟಿ ಎಂಬ ವಿಚಾರ ತಿಳಿದಿದೆ. ಎಲ್ಲವನ್ನೂ ಸಹಜವಾಗಿ ಸ್ವೀಕರಿಸುತ್ತಾರೆ’ ಎಂದು ಭಾವುಕರಾಗಿ ಹೇಳಿಕೊಳ್ಳುತ್ತಾರೆ ಮಾಧುರಿ.

ನಾಸಿರುದ್ದೀನ್‌ ಶಾ ಅವರ ಜತೆಗೆ ‘ದೇಢ್‌ ಇಷ್ಕಿಯಾ’ ಚಿತ್ರದಲ್ಲಿ ಕಾಣಿಸಿಕೊಂಡಿರುವ ಮಾಧುರಿಯನ್ನು ಕಣ್ತುಂಬಿಕೊಳ್ಳಲು ಅವರ ಅಭಿಮಾನಿಗಳು ಕಾಯುತ್ತಿದ್ದರೆ, ಇತ್ತ ಮಾಧುರಿ ಗಂಡ ನೆನೆ ಅವರು ಈ ಚಿತ್ರದ ಪ್ರೋಮೊ ಹಾಗೂ ಗೀತೆಗಳನ್ನು ತುಂಬ ಮೆಚ್ಚಿಕೊಂಡಿದ್ದಾರಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.