ADVERTISEMENT

ಗಣಪನ ಸಂಕಷ್ಟಕ್ಕೆ ಹಾಡುಗಳ ಸಾಂತ್ವನ

​ಪ್ರಜಾವಾಣಿ ವಾರ್ತೆ
Published 14 ಜೂನ್ 2018, 12:00 IST
Last Updated 14 ಜೂನ್ 2018, 12:00 IST

‘ಸಂಕಷ್ಟಕರ ಗಣಪ’ ಈ ಹೆಸರಿನಲ್ಲಿಯೇ ಏನೋ ವಿಶೇಷ ಇದೆ. ತುಂಬ ಬುದ್ದಿವಂತಿಕೆಯಿಂದ ಇಟ್ಟಿರುವ ಹೆಸರಿನಂತೆ ತೋರುತ್ತದೆ. ಹಾಗೆಯೇ ಸಿನಿಮಾ ಕೂಡ ಇರಬಹುದೆಂಬ ಕುತೂಹಲ ಹುಟ್ಟಿದೆ.

ಹೀಗೆ ಉದ್ಘರಿಸಿದ್ದು ಗುರುಕಿರಣ್. ಗಣಪನ ಹಾಡುಗಳನ್ನು ಬಿಡುಗಡೆ ಮಾಡಲು ಕಾರ್ಯಕ್ರಮಕ್ಕೆ ಬಂದಿದ್ದ ನಟ ಪುನೀತ್ ರಾಜ್‌ಕುಮಾರ್ ಅವರೂ ಈ ಭಿನ್ನ ಚಿತ್ರವನ್ನು ಪ್ರೇಕ್ಷಕನೂ ಮೆಚ್ಚುತ್ತಾನೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದರು.

‘ಹೊಸ ಹಾಡುಗಳ ಮೂಲಕ ಹೊಸ ಸಂಗೀತ ನಿರ್ದೇಶಕನ ಪರಿಚಯವಾಗುತ್ತಿದೆ. ಈಗ ಕನ್ನಡ ಚಿತ್ರರಂಗದಲ್ಲಿ ಪ್ರಯೋಗಾತ್ಮಕ ಚಿತ್ರಗಳಿಗೆ ಒಳ್ಳೆಯ ಬೇಡಿಕೆ ಇದೆ. ಗಣಪತಿಯ ಆಶೀರ್ವಾದದಿಂದ ಈ ಚಿತ್ರ ಗೆಲ್ಲಲಿ’ ಎಂದು ಹಾರೈಸಿದರು. ‘ಸಂಕಷ್ಟಕರ ಹೋಗಿ ಸಂಕಷ್ಟಹರ ಆಗಲಿ’ ಎಂದರು ಗುರುಕಿರಣ್. ಅವರೂ ಒಂದು ಹಾಡನ್ನು ಹಾಡಿರುವುದು ವಿಶೇಷ.

ADVERTISEMENT

ಸಂಗೀತ ನಿರ್ದೇಶಕ ರಿತ್ವಿಕ್ ಮುರಳೀಧರ ಈ ಕಾರ್ಯಕ್ರಮದ ಕೇಂದ್ರಬಿಂದುವಾಗಿದ್ದರು. ನಿಶ್ವಲ್‍ ದಂಬೆಕೋಡಿ, ಮದನ್ ಬೆಳ್ಳಿಸಾಲು ಮತ್ತು ನಿತಿನ್‍ ಜಯ್ ರಚಿಸಿರುವ ಐದು ಹಾಡುಗಳಿಗೆ ರಘುದೀಕ್ಷಿತ್, ಸಂಜಿತ್‍ ಹೆಗಡೆ, ರಕ್ಷಿತಾ ರಾವ್, ದೀಪಕ್‍ ದೊಡೆದ, ಇಶಾಸುಬಿ, ಮೆಹಬೂಬ್‍ಸಾಬ್, ಅನನ್ಯಾ ಭಟ್ ಧ್ವನಿಯಾಗಿದ್ದಾರೆ. ‘ಪಿಆರ್‌ಕೆ ಸಂಸ್ಥೆಯ ಮೂಲಕ ಸಿಡಿ ಹೊರಬರುತ್ತಿರುವುದು ಸಂತಸ ತಂದಿದೆ’ ಎಂದರು ನಿರ್ದೇಶಕ ಎಸ್. ಅರ್ಜುನ್‍ಕುಮಾರ್.

ಲಿಖಿತ್ ಶೆಟ್ಟಿ ಮತ್ತು ಶ್ರುತಿ ಗೊರಾಡಿಯಾ ಈ ಚಿತ್ರದಲ್ಲಿ ತೆರೆಯನ್ನು ಹಂಚಿಕೊಂಡಿದ್ದಾರೆ.  ರಾಜೇಶ್‍ಬಾಬು, ಫೈಜಾನ್‍ ಖಾನ್, ಬಿ.ಎಸ್. ಹೇಮಂತ್‍ ಕುಮಾರ್, ಪ್ರಮೋದ್‍ ನಿಂಬ್ಳಾಕರ್ ಮತ್ತು ಎ. ಚೆಲುವರಾಜ್‍ ನಾಯ್ಡು ಹಣ ಹೂಡಿದ್ದಾರೆ.

ಮುಂದಿನ ತಿಂಗಳೂ ಈ ಚಿತ್ರವನ್ನು ಬಿಡುಗಡೆ ಮಾಡುವ ತಯಾರಿಯಲ್ಲಿ ಚಿತ್ರತಂಡವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.