ADVERTISEMENT

‘ಚಿಟ್ಟೆ’ಯ ‘ತಟ್ಟೆ’ ಬಿಡುಗಡೆ!

​ಪ್ರಜಾವಾಣಿ ವಾರ್ತೆ
Published 31 ಮೇ 2018, 19:30 IST
Last Updated 31 ಮೇ 2018, 19:30 IST
ಹರ್ಷಿಕಾ ಪೂಣಚ್ಚ
ಹರ್ಷಿಕಾ ಪೂಣಚ್ಚ   

ಎಂ.ಎಲ್. ಪ್ರಸನ್ನ ಅವರು ತಾವು ಹಣ ಹೂಡಿಕೆ ಮಾಡಿ, ನಿರ್ದೇಶನ ಕೂಡ ಮಾಡಿರುವ ‘ಚಿಟ್ಟೆ’ ಸಿನಿಮಾದ ಹಾಡುಗಳ ಬಿಡುಗಡೆ ಕಾರ್ಯಕ್ರಮಕ್ಕೆ ಸಂಗೀತ ನಿರ್ದೇಶಕ ಹಂಸಲೇಖ ಮತ್ತು ನಟ ಗಣೇಶ್ ಅವರನ್ನು ಆಹ್ವಾನಿಸಿದ್ದರು.

ಚಾಮುಂಡೇಶ್ವರಿ ಸ್ಟುಡಿಯೊ ಹೊರಗೆ ಮಳೆ ಸುರಿಯುತ್ತಿತ್ತು. ಒಳಗಡೆ ಹಂಸಲೇಖ ಮತ್ತು ಗಣೇಶ್ ಅವರ ಮಾತುಗಳನ್ನು ಆಲಿಸಲು ಆಹ್ವಾನಿತರು ಸಿದ್ಧರಾಗಿದ್ದರು.

ಚಿತ್ರದ ಹಾಡುಗಳ ಸಿ.ಡಿ.ಯನ್ನು ಹಂಸಲೇಖ ಬಿಡುಗಡೆ ಮಾಡಿದರು. ಈ ಚಿತ್ರದಲ್ಲಿ ಒಟ್ಟು ಐದು ಹಾಡುಗಳಿವೆ. ಸಿ.ಡಿ. ಬಿಡುಗಡೆಗೆ ತಮ್ಮದೇ ಆದ ಪದಗಳನ್ನು ಟಂಕಿಸಿದ ಹಂಸಲೇಖ ‘ನಾನು ಈಗ ಚಿಟ್ಟೆ ಚಿತ್ರದ ತಟ್ಟೆ (ಸಿ.ಡಿ.) ಬಿಡುಗಡೆ ಮಾಡಿದ್ದೇನೆ’ ಎಂದು ಚಟಾಕಿ ಹಾರಿಸಿದರು.

ADVERTISEMENT

‘ಪ್ರಪಂಚದಲ್ಲಿ ಕೆಟ್ಟ ಚಿಟ್ಟೆ ಎಂಬುದು ಯಾವುದೂ ಇಲ್ಲ. ಚಿಟ್ಟೆ ಎನ್ನುವ ಜೀವಿ ಒಂದು ಕಲಾಕೃತಿಯಂತೆ ಕಾಣುತ್ತದೆ. ಹಾಗಾಗಿ, ಮಕ್ಕಳಿಗೆ ಚಿಟ್ಟೆ ಕಂಡರೆ ಬಹಳ ಇಷ್ಟ’ ಎಂದು ಈ ಚಿತ್ರದ ಬಗ್ಗೆಯೂ ಮೆಚ್ಚುಗೆ ಸೂಚಿಸಿದರು. ನಿರ್ದೇಶಕ ಪ್ರಸನ್ನ ಅವರು ವೃತ್ತಿಯಿಂದ ಎಂಜಿನಿಯರ್. ‘ಚಿತ್ರದ ಹಾಡುಗಳ ಸಾಹಿತ್ಯ ಚೆನ್ನಾಗಿದೆ’ ಎನ್ನುವ ಮಾತು ಹಂಸಲೇಖ ಅವರಿಂದ ಬಂತು.

ಚಿತ್ರದ ನಾಯಕಿ ಹರ್ಷಿಕಾ ಪೂಣಚ್ಚ ಮತ್ತು ನಾಯಕ ಯಶಸ್ ಸೂರ್ಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ ಹಂಸಲೇಖ, ‘ಹೀರೊ ಮತ್ತು ಹೀರೊಯಿನ್ ಕಂಡರೆ, ಇಬ್ಬರಿಗೂ ಕ್ರಷ್ ಇರುವಂತೆ ಕಾಣಿಸುತ್ತಿದೆ’ ಎಂದರು.

‘ನಾವು ಬೆಳೆದಿದ್ದು ಹಂಸಲೇಖ ಬರೆದ ಹಾಡುಗಳನ್ನು ಕೇಳಿ. ನಾವು ಇವತ್ತು ಚೆನ್ನಾಗಿ ಮಾತನಾಡುತ್ತಿರುವುದಕ್ಕೆ ಹಂಸಲೇಖ ಅವರು ತಮ್ಮ ಹಾಡುಗಳಲ್ಲಿ ಬಳಸಿದ ಪದಗಳು ಕಾರಣ’ ಎಂದರು ಗಣೇಶ್. ‘ಚಿಟ್ಟೆ ಕಲರ್‌ಫುಲ್ ಆಗಿ ಹಾರಲಿ’ ಎಂದು ಶುಭ ಹಾರೈಸಿದರು.

ದೀಪಿಕಾ ಅವರು ಈ ಚಿತ್ರದಲ್ಲಿ ಒಂದು ಪ್ರಮುಖ ಪಾತ್ರವನ್ನು ನಿಭಾಯಿಸಿದ್ದಾರೆ. ಅವರದ್ದು ಸಸ್ಪೆನ್ಸ್ ಇರುವ ಪಾತ್ರವಂತೆ. ಕೆಜೆಟನ್ ಡಯಾಸ್ ಅವರು ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ನಾಗೇಶ್ ಕಾರ್ತಿಕ್ ಅವರು ಖಳನಟನ ಪಾತ್ರ ನಿಭಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.