ADVERTISEMENT

ಚಿಣ್ಣರಿಗಾಗಿ ಬಾಲ್‌ಪೆನ್

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2012, 19:30 IST
Last Updated 15 ಮಾರ್ಚ್ 2012, 19:30 IST

ನಟ ಶ್ರೀನಗರ ಕಿಟ್ಟಿ ಮಕ್ಕಳ ಚಿತ್ರ ನಿರ್ಮಿಸುವ ಮೂಲಕ ನಿರ್ಮಾಪಕರಾಗಿದ್ದಾರೆ. ತಮ್ಮ ಮಗಳ ಹುಟ್ಟುಹಬ್ಬದಂದು ಮಕ್ಕಳ ಚಿತ್ರ ನಿರ್ಮಿಸುವ ತಮ್ಮ ಕನಸಿಗೆ ಚಾಲನೆ ನೀಡಿದ ಅವರು, ಚಿತ್ರಕ್ಕೆ ಬರವಣಿಗೆಯನ್ನು ಪ್ರತಿನಿಧಿಸುವ `ಬಾಲ್‌ಪೆನ್~ ಎನ್ನುವ ಹೆಸರನ್ನಿಟ್ಟಿದ್ದಾರೆ.

`ಬಾಲ್‌ಪೆನ್~ ಮಕ್ಕಳ ಚಿತ್ರ. ಈಗಾಗಲೇ ಚಿತ್ರೀಕರಣ ಮುಗಿದು ಪ್ರಥಮಪ್ರತಿ ಸಿದ್ಧವಾಗಿದೆ. ಚೆನ್ನೈನಲ್ಲಿ ಪ್ರದರ್ಶನವನ್ನೂ ಕಂಡಿದೆ. ಅಲ್ಲಿ ತಮ್ಮ ಚಿತ್ರ ಸಾಕಷ್ಟು ಮೆಚ್ಚುಗೆ ಪಡೆದುಕೊಂಡಿತು ಎಂದು ಚಿತ್ರತಂಡ ಹೇಳಿಕೊಂಡಿತು.

ಈ ಮೊದಲು `ಐಪಿಸಿ ಸೆಕ್ಷನ್ 500~ ಸಿನಿಮಾ ನಿರ್ದೇಶಿಸಿದ್ದ ಶಶಿಕಾಂತ್ ಈ ಚಿತ್ರದ ನಿರ್ದೇಶಕರು. ಅವರು ತಮ್ಮ ಚಿತ್ರಕ್ಕೆ ಸಿಗುತ್ತಿರುವ ಪ್ರತಿಕ್ರಿಯೆಯಿಂದ ಪುಳಕಿತರಾಗಿದ್ದರು.

`ಇದು ಕನ್ನಡದ ಮೊದಲ 5ಡಿ ಸಿನಿಮಾ. 5ಡಿ ತಂತ್ರಜ್ಞಾನ ಇರುವ ಕ್ಯಾಮೆರಾ ಬಳಸಿ ಚಿತ್ರೀಕರಿಸಿರುವೆ. ಇದಕ್ಕೆ ಅಷ್ಟೇನೂ ವೆಚ್ಚವಾಗಲಿಲ್ಲ. ಇಂಥ ಸಿನಿಮಾಗಳಿಗೆ ಸಾಕಷ್ಟು ಸಂಶೋಧನೆಯ ಅಗತ್ಯ ಇದೆ. ಇದು ನನಗೊಂದು ಹೊಸ ಅನುಭವ~ ಎಂದರು ಛಾಯಾಗ್ರಾಹಕ ರಾಜ್‌ಕುಮಾರ್.

ಕೆ.ಸಿ.ಮಂಜುನಾಥ್ ಬರೆದ ಕತೆಯನ್ನು ಅಭಿವೃದ್ಧಿಪಡಿಸಿ ಕತೆಗೆ ನೆರವಾದವರು ಲಲಿತಾ ಬೆಳಗೆರೆ. ಅವರು ಸಿನಿಮಾ ಸಿದ್ಧಗೊಂಡ ನಂತರ ಕೆಲವು ದೃಶ್ಯಗಳನ್ನು ಮತ್ತು ಸಂಭಾಷಣೆಗಳನ್ನು ತಿದ್ದಿದ್ದಾಗಿಯೂ ಹೇಳಿಕೊಂಡರು. ತಮ್ಮ ನಿರ್ಮಾಣ ಸಂಸ್ಥೆ ಕಿರುತೆರೆಯಿಂದ ಬೆಳ್ಳಿತೆರೆಗೆ ಕಾಲಿಟ್ಟ ಖುಷಿಯನ್ನು ಕಿಟ್ಟಿ ಅವರ ಪತ್ನಿ ಭಾವನಾ ಬೆಳಗೆರೆ ಹಂಚಿಕೊಂಡರು.

ಲೇಖಕ ಮಹಮ್ಮದ್ ಬೋಳುವಾರು ಕುಂಞ, ಪತ್ರಕರ್ತ ರವಿ ಬೆಳಗೆರೆ, ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ, ಚಿತ್ರ ಸಾಹಿತಿ ದ್ವಾರ್ಕಿ ರಾಘವ, ಕತೆಗಾರ ಮಂಜುನಾಥ್ ಕಾರ್ಯಕ್ರಮದಲ್ಲಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.