ADVERTISEMENT

ಜಟಾಯು ಅವತಾರ!

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2012, 19:30 IST
Last Updated 12 ಏಪ್ರಿಲ್ 2012, 19:30 IST
ಜಟಾಯು ಅವತಾರ!
ಜಟಾಯು ಅವತಾರ!   

ಈತ ಆಧುನಿಕ `ಜಟಾಯು~. ಸೀತೆಯನ್ನು ಕಾಪಾಡಲು ಹೋಗಿ ರಾವಣನ ಖಡ್ಗಕ್ಕೆ ರೆಕ್ಕೆಗಳನ್ನು ಕಳೆದುಕೊಂಡ ರಾಮಾಯಣದ ಪಾಪದ `ಜಟಾಯು~ವಲ್ಲ. ಬದಲಿಗೆ ತನ್ನ ರೆಕ್ಕೆ ಕತ್ತರಿಸಲು ಬಂದವರ ರೆಕ್ಕೆಗಳನ್ನೇ ಕತ್ತರಿಸಬಲ್ಲ ಶಕ್ತಿಶಾಲಿ.

ಆ್ಯಕ್ಷನ್ ಸ್ಟಾರ್ ಎಂಬ ಬಿರುದನ್ನು ಹೊಸದಾಗಿ ತಗುಲಿಸಿಕೊಂಡಿದ್ದರು ನಟ ರಾಜ್. ತಮ್ಮ ಹಿಂದಿನ ಚಿತ್ರ `ಸಂಚಾರಿ~ಯ ಗೆಲುವಿನ ರೆಕ್ಕೆ ಕತ್ತರಿಸಿದ ಸೋಲೆಂಬ ರಾವಣನನ್ನು `ಜಟಾಯು~ ಸಂಹರಿಸುತ್ತಾನೆ ಎಂಬ ಭರವಸೆ ಅವರಲ್ಲಿತ್ತು. ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುವ ಜವಾಬ್ದಾರಿಯೂ ಅವರದೇ.

`ಜಟಾಯು~ ಕಥೆಯನ್ನು ಹಲವು ನಿರ್ದೇಶಕರಿಗೆ ಹೇಳಿದ್ದಾಯಿತು. ಹಲವು ನಟರ ಬಳಿಯೂ ವಿವರಿಸಿದ್ದಾಯಿತು. ಆದರೆ ಪ್ರಯೋಜನವಾಗಲಿಲ್ಲ. ಹೀಗಾಗಿ ನಟನೆ ಮತ್ತು ನಿರ್ದೇಶನ ಎರಡರ ಹೊಣೆಯನ್ನೂ ತಾವೇ ಇರಿಸಿಕೊಂಡರು ರಾಜ್. ಊರ ಗೌಡನ ಬಲಗೈ ಬಂಟ ಅನ್ಯಾಯದ ವಿರುದ್ಧ ಹೋರಾಡುವ ಮೂಲಕ ಜಟಾಯುವಾಗುತ್ತಾನೆ ಎನ್ನುವುದು ಅವರ ಕಥೆಯ ತಿರುಳು.

ಕನ್ನಡದಲ್ಲಿ ಸೋತ `ಸಂಚಾರಿ~ ತೆಲುಗಿನಲ್ಲಿ ಗೆದ್ದಿತು ಎನ್ನುವುದು ರಾಜ್ ಸಮಾಧಾನ. `ಗಾಳಿಯೇ ನೋಡು ಬಾ~ ಎಂಬ ಹಿಟ್ ಸಾಂಗ್‌ನಿಂದ ಅರ್ಜುನ್ ಜನ್ಯ ಪ್ರಸಿದ್ಧಿ ಪಡೆದರು ಎಂದು ನೆನಪುಗಳನ್ನು ಕೆದಕಿದ ರಾಜ್, ಈ ಚಿತ್ರದಲ್ಲೂ ಹಾಡುಗಳಿಗೆ ಪ್ರಾಮುಖ್ಯತೆ ನೀಡಿದ್ದಾರೆ. ಐದು ಹಾಡುಗಳಿದ್ದು, ಅವುಗಳಿಗೆ ಸಂಗೀತ ನೀಡಿರುವುದು ವಿನಯಚಂದ್ರ.
ಕಥೆ ಹಳ್ಳಿಯಲ್ಲಿ ಸಾಗುವುದರಿಂದ ಆ ಪರಿಸರದ ಹಿನ್ನೆಲೆಗೆ ಅನುಗುಣವಾದ ಸಂಗೀತವಿರುತ್ತದೆ.
 
ಶೀರ್ಷಿಕೆ ಗೀತೆಗಾಗಿ ಹೊಸ ಬಗೆಯ ಪ್ರಯೋಗ ಮಾಡಲಾಗಿದೆ ಎಂದರು ವಿನಯ್‌ಚಂದ್ರ.
`ಸಂಚಾರಿ~ಗೆ ಮಿತ್ರರೊಂದಿಗೆ ಸೇರಿ ಹಣ ಹೂಡಿದ್ದ ಪ್ರಭಾಕರ್ ಈ ಬಾರಿ ತಾವೊಬ್ಬರೇ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ. ನೀವೇ ಹೀರೋ ಆಗಿ ಎಂದು ರಾಜ್‌ರನ್ನು ಅವರೇ ಕೇಳಿಕೊಂಡರಂತೆ.

ಅಂದಹಾಗೆ `ಜಟಾಯು~ಗೆ ಇಬ್ಬರು ನಾಯಕಿಯರು. `ಸಂಕ್ರಾಂತಿ~ಯಲ್ಲಿ ಗಮನ ಸೆಳೆದಿದ್ದ ರೂಪಶ್ರೀ ಊರ ಗೌಡನ ಮಗಳಾಗಿ ಕಾಣಿಸಿಕೊಂಡಿದ್ದಾರೆ. ಒಳ್ಳೆಯ ಸಂದೇಶ ನೀಡುವ ಹೋಮ್ಲಿ ಪಾತ್ರ ತಮ್ಮದು ಎಂಬ ಖುಷಿ ಅವರದು.

ಪಂಕಜ್ ಜೊತೆ `ದುಷ್ಟ~ದಲ್ಲಿ ನಟಿಸಿದ್ದ ಸುರಭಿಗೆ ಇದು ಎರಡನೇ ಚಿತ್ರ. ಒಳ್ಳೆ ಕಥೆಗಾಗಿ ಕಾಯುತ್ತಿದ್ದೆ ಎನ್ನುವುದು ಅವರು ಇಷ್ಟು ಕಾಲ ನಟಿಸದಿರುವುದಕ್ಕೆ ಕೊಟ್ಟ ಕಾರಣ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.