‘ನನ್ನ ಎತ್ತರ ಸ್ವಲ್ಪ ಕಡಿಮೆಯಾದರೂ ಚೆನ್ನಾಗಿದ್ದೇನೆ. ನಟಿಗೆ ಬೇಕಾದ ಮುಖವಿದೆ. ಫೋಟೊಜೆನಿಕ್ ಆಗಿದ್ದೇನೆ. ಬೊಂಬೆಯಂತಿದ್ದೀಯಾ ಎಂದು ಎಷ್ಟೋ ಜನ ಹೇಳಿದ್ದಾರೆ. ಎಲ್ಲರಿಗಿಂತ ಭಿನ್ನವಾಗಿದ್ದೇನೆ ಎಂದು ನನಗೆ ಯಾವಾಗಲೂ ಅನಿಸುತ್ತದೆ. ಆ ವಿಶ್ವಾಸವೇ ಇಂದು ನನ್ನನ್ನು ಇಲ್ಲಿಯವರೆಗೆ ತಂದು ನಿಲ್ಲಿಸಿದೆ’
ಇಂದು (ಜ.15) ತೆರೆಕಾಣುತ್ತಿರುವ ‘ತರ್‍ಲೆ ನನ್ಮಕ್ಳು’ ಚಿತ್ರದ ನಾಯಕಿ ಅಂಜನಾ ದೇಶಪಾಂಡೆ ಅವರ ಮಾತಿದು. ಗಾಡ್ ಫಾದರ್‌ಗಳ ನೆರವಿಲ್ಲದೆ ವೃತ್ತಿ ಬದುಕಿನ ಒಂದೊಂದೇ ಮೆಟ್ಟಿಲು ಹತ್ತಿದ ನಟಿ ಅಂಜನಾ. ಅವರ ಪಯಣದ ಪ್ರತಿ ಹೆಜ್ಜೆಯಲ್ಲೂ ಜೊತೆಯಾದವರು ಹೆತ್ತವರು. ತಂದೆ-ತಾಯಿ ಮೂಲತಃ ಮಹಾರಾಷ್ಟ್ರದವರು. ಅಂಜನಾ ಹುಟ್ಟಿ ಬೆಳೆದಿದ್ದೆಲ್ಲ ಬೆಂಗಳೂರಲ್ಲೇ. ಹಾಗಾಗಿ ಅವರು ಚೆನ್ನಾಗಿ ಕನ್ನಡ ಬಲ್ಲವರು. ನಾಲ್ಕು ವರ್ಷಗಳ ಹಿಂದೆ ಬಿ.ಕಾಂ ಮುಗಿಸಿದಾಗ ನೌಕರಿಯ ಬದಲಾಗಿ ಅವರನ್ನು ಸೆಳೆದಿದ್ದು ಕ್ಯಾಮೆರಾ. ರ‍್ಯಾಂಪ್ ಮೇಲೆ ಕ್ಯಾಟ್ ವಾಕ್ ಮಾಡುತ್ತಲೇ ಜಾಹೀರಾತು ಜಗತ್ತಿಗೆ ಕಾಲಿಟ್ಟರು.
ಮಾತನಾಡುವುದೆಂದರೆ ಅಂಜನಾಗೆ ಬಹಳ ಇಷ್ಟ. ಅರಳು ಹುರಿದಂತೆ ಮಾತನಾಡುವ ಅವರ ಹವ್ಯಾಸ ವೃತ್ತಿಯಾಗಿ ಬದಲಾಗಿದ್ದು ವಾಹಿನಿಯಲ್ಲಿ ನಿರೂಪಕಿಯಾಗುವ ಮೂಲಕ. ಅದೇ ಸಮಯಕ್ಕೆ ಅವರ ಫೋಟೊಗಳು ಧಾರಾವಾಹಿ ನಿರ್ದೇಶಕಿ ಶ್ರುತಿ ನಾಯ್ಡು ಅವರ ಕೈ ಸೇರಿತ್ತು. ಅದು ಅಂಜನಾರ ನಟನೆಯ ಕನಸಿಗೆ ಇನ್ನೊಂದು ಆಯಾಮ ನೀಡಿತು. ಶ್ರುತಿ ನಾಯ್ಡು ನಿರ್ದೇಶನದ ‘ರಾಜಕುಮಾರಿ’ ಅಂಜನಾರ ಮೊದಲ ಧಾರಾವಾಹಿ. ಅದರಲ್ಲಿನ ರಾಜಕುಮಾರಿಯ ಪಾತ್ರ ಸಾಕಷ್ಟು ಜನಪ್ರಿಯತೆ ಗಳಿಸಿತು. ನಂತರ ‘ಚಲಿಸುವ ಮೋಡಗಳು’, ‘ನೂರೆಂಟು ಸುಳ್ಳು’ ಧಾರಾವಾಹಿಯಲ್ಲೂ ಪಳಗಿದರು.
‘ಎಲ್ಲವೂ ನನ್ನ ಹಾದಿಯನ್ನು ಅರಸಿಕೊಂಡು ಬಂದವು’ ಎಂಬುದು ತನ್ನ ಅದೃಷ್ಟದ ಬಗ್ಗೆ ಅಂಜನಾ ಹೇಳುವ ಮಾತು. ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ಅಂಥದ್ದೇನೂ ವ್ಯತ್ಯಾಸ ಅವರಿಗೆ ಕಂಡಿಲ್ಲ. ಮೇಕಪ್ ಬೇರೆ ರೀತಿಯಿದ್ದರೂ ಅಭಿನಯವೇ ಎಲ್ಲದಕ್ಕೂ ಮೂಲ ಎಂಬುದು ಅವರ ಮಾರ್ಗ.
ತರಲೆಗಳ ಜೊತೆಯಲ್ಲಿ...
ಅವಕಾಶ ಸಿಕ್ಕ ಲೆಕ್ಕದಲ್ಲಿ ‘ತರ್‍ಲೆ ನನ್ಮಕ್ಳು’ ಅಂಜನಾರ ಮೊದಲ ಸಿನಿಮಾ. ಬಿಡುಗಡೆ ದೃಷ್ಟಿಯಿಂದ ತೆಲುಗಿನ ‘ನೇನು ನಾ ಫ್ರೆಂಡ್ಸ್’ ಮೊದಲ ಚಿತ್ರ. ‘ತರ್‍ಲೆ ನನ್ಮಕ್ಳು’ ಚಿತ್ರೀಕರಣದ ಮಧ್ಯೆಯೇ ತೆಲುಗು ಸಿನಿಮಾ ಒಪ್ಪಿಕೊಂಡು ಅಲ್ಲೂ ಒಂದು ಕೈ ನೋಡಿ ಬಂದಿದ್ದಾರೆ. ಒಂದೂವರೆ ವರ್ಷದ ಹಿಂದೆಯೇ ಬಿಡುಗಡೆಯಾದ ಆ ಚಿತ್ರದಲ್ಲಿ ಅಂಜನಾ ಮೂರು ಗೆಟಪ್‌ಗಳಲ್ಲಿ ಕಾಣಿಸಿಕೊಂಡಿದ್ದರು.
‘ರಾಜಕುಮಾರಿ’ ಧಾರಾವಾಹಿ ನೋಡಿದ್ದ ‘ತರ್‍ಲೆ ನನ್ಮಕ್ಳು’ ಚಿತ್ರದ ನಿರ್ದೇಶಕ ರಾಕೇಶ್, ತಮ್ಮ ಚಿತ್ರದಲ್ಲಿ ನಟಿಸುವಂತೆ ಅಂಜನಾಗೆ ಆಹ್ವಾನ ನೀಡಿದರು. ಅವರು ತಮ್ಮ ವೃತ್ತಿ ಬದುಕು ಆರಂಭಿಸಿದ್ದು ನಿರೂಪಕಿಯಾಗಿ. ಕಾಕತಾಳೀಯವೆಂಬಂತೆ ಈ ಚಿತ್ರದಲ್ಲೂ ಅವರದ್ದು ನಿರೂಪಕಿಯ ಪಾತ್ರವೇ. ಬಿಡುವಿಲ್ಲದೆ ಸಂಭಾಷಣೆ ಉದುರಿಸುವ, ತಕ್ಷಣಕ್ಕೆ ಪ್ರತಿಕ್ರಿಯಿಸುವ ಬಜಾರಿ ಪಾತ್ರ ಅವರದ್ದು. ‘ಈ ಚಿತ್ರದಲ್ಲಿ ನನ್ನ ಅಭಿನಯ ಕೌಶಲ ನಿರೂಪಿಸುವ ಜೊತೆಗೆ ಹಾಡುಗಳಲ್ಲಿ ಗ್ಲಾಮರ್ ಆಗಿಯೂ ಕಾಣಿಸಿಕೊಂಡಿದ್ದೇನೆ’ ಎನ್ನುತ್ತಾರವರು.
‘ತರ್‍ಲೆ ನನ್ಮಕ್ಳು’ ಹೆಚ್ಚೆನ್ನಿಸುವಷ್ಟೇ ದ್ವಂದ್ವಾರ್ಥದ ಸಂಭಾಷಣೆಗಳಿರುವ ಚಿತ್ರ. ಆ ಬಗ್ಗೆ ಪ್ರತಿಕ್ರಿಯಿಸುವ ಅಂಜನಾ, ‘ನಮ್ಮ ಸಿನಿಮಾ ಆರಂಭವಾಗುವ ಹೊತ್ತಿಗೆ ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ತೆರೆಕಂಡಿತ್ತು. ಇಂಥ ಸಂಭಾಷಣೆಗಳಿರುವ ಸಿನಿಮಾ ಟ್ರೆಂಡ್ ಆಗ ಆರಂಭವಾಗಿತ್ತು’ ಎನ್ನುತ್ತಾರೆ. ಈಗ ತಮ್ಮ ಚಿತ್ರವನ್ನೂ ಪ್ರೇಕ್ಷಕರು ಸ್ವೀಕರಿಸುತ್ತಾರೆ ಎಂಬ ವಿಶ್ವಾಸ ಅವರದ್ದು. ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದಾರೆ. ‘ಇಬ್ಬರಿಗೂ ಸಮಾನ ಪ್ರಾಮುಖ್ಯ ಇದೆ’ ಎನ್ನುತ್ತಾರೆ ಅಂಜನಾ.
ಸಂಭಾಷಣೆಯ ಸಂಕಷ್ಟ
‘ಇಷ್ಟೊಂದು ದ್ವಂದ್ವಾರ್ಥದ ಸಂಭಾಷಣೆಗಳಿರುತ್ತವೆ ಎಂಬುದು ಚಿತ್ರವನ್ನು ಒಪ್ಪಿಕೊಳ್ಳುವಾಗ ನನಗೆ ಗೊತ್ತಿರಲಿಲ್ಲ. ಚಿತ್ರೀಕರಣ ಆರಂಭವಾದಾಗಲೇ ಆ ಬಗ್ಗೆ ಗೊತ್ತಾಗಿದ್ದು. ಆದರೆ ಚಿತ್ರವನ್ನು ಒಪ್ಪಿಕೊಂಡದ್ದರಿಂದ ನಟಿಸುವುದು ನನ್ನ ಬದ್ಧತೆಯಾಗಿತ್ತು. ಹಾಗಾಗಿ ಸಂಭಾಷಣೆಗಳ ಬಗ್ಗೆ ಏನೂ ತಕರಾರೂ ಮಾಡಲಿಲ್ಲ’ ಎನ್ನುತ್ತಾರೆ. ಎದುರಿಗಿರುವ ಕಲಾವಿದರ ಮುಂದೆ ಕಚಗುಳಿಯಿಡುವ ಸಂಭಾಷಣೆ ಹೇಳುವಾಗ ಮುಜುಗರವಾದರೂ, ‘ಕಲಾವಿದೆಯಾಗಿ ಯಾವುದನ್ನೂ ನಿರಾಕರಿಸುವಂತಿಲ್ಲ. ಹಾಗೆ ನಿರಾಕರಿಸಿದರೆ ಕಲಾವಿದೆ ಎನ್ನಿಸಿಕೊಳ್ಳುವುದಾದರೂ ಹೇಗೆ’ ಎಂಬುದು ಅವರ ಪ್ರಶ್ನೆ.
‘ತರ್‍ಲೆ ನನ್ಮಕ್ಳು’ ಅವಕಾಶ ಗಿಟ್ಟಿಸುವ ಮುನ್ನ ಅವರು ಸಾಕಷ್ಟು ಚಿತ್ರಗಳಿಗೆ ಆಡಿಷನ್ ಕೊಟ್ಟಿದ್ದರೂ ಯಾವುದೂ ಕೈಗೂಡಲಿಲ್ಲ. ಎತ್ತರ ಕಡಿಮೆ, ಚಿಕ್ಕ ಹುಡುಗಿಯಂತೆ ಕಾಣುತ್ತಾಳೆ, ಚೆನ್ನಾಗಿ ಕಾಣುವುದಿಲ್ಲ ಎಂಬೆಲ್ಲ ಕಾರಣಗಳಿಂದ ಅವರಿಗೆ ಅವಕಾಶಗಳು ಕೈ ತಪ್ಪಿತ್ತು. ಒಂಬತ್ತು ತಿಂಗಳ ಕಾಯುವಿಕೆಯ ನಂತರ ದೊರೆತ ‘ತರ್‍ಲೆ ನನ್ಮಕ್ಳು’ ಅವಕಾಶ ಕಳೆದುಕೊಳ್ಳಬಾರದು ಎಂಬುದೂ ಅವರ ತಲೆಯಲ್ಲಿತ್ತು. ಆದರೆ, ಮತ್ತೆ ಇಂಥದ್ದೇ ಪಾತ್ರ ಬಂದರೆ ಒಪ್ಪಿಕೊಳ್ಳುವುದಿಲ್ಲ ಎನ್ನುವುದು ಅವರ ನಿರ್ಧಾರ.
ಅತಿಯಾದ ಗ್ಲಾಮರ್ ಮತ್ತು ಅತಿ ಸಾಂಪ್ರದಾಯಿಕವೂ ಅಲ್ಲದ ಮಧ್ಯಮ ಹಂತದ ಪಾತ್ರಗಳನ್ನು ಅವರು ಒಪ್ಪಿಕೊಳ್ಳಲು ಸಿದ್ಧ. ನಟನೆಯ ಮೂಲಕ ಗುರ್ತಿಸಿಕೊಳ್ಳುವ ಪಾತ್ರ ಅವರಿಗೆ ಇಷ್ಟ. ಸದ್ಯ ಹೊಸ ನಾಯಕನ ಜೊತೆ ಒಂದು ಚಿತ್ರದಲ್ಲಿ ಅಂಜನಾ ಅಭಿನಯಿಸಿದ್ದಾರೆ. ಅದರ ಹಾಡಿನ ಚಿತ್ರೀಕರಣ ಮಾತ್ರ ಬಾಕಿಯಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.