ADVERTISEMENT

ತೆರೆಯಲ್ಲೊಂದಿಷ್ಟು ‘ದಮ್’ ಪುರಾಣ...

ಚೆಲುವಿನ ಚಿತ್ತಾರ

​ಪ್ರಜಾವಾಣಿ ವಾರ್ತೆ
Published 8 ಜನವರಿ 2014, 19:30 IST
Last Updated 8 ಜನವರಿ 2014, 19:30 IST

ಸಿಗರೇಟ್ ಆರೋಗ್ಯಕ್ಕೆ ಹಾನಿಕರ ಎಂಬುದು ಗೊತ್ತಿದ್ದರೂ ಮಹಿಳೆಯರಿಗೂ ಅದರ ಮೋಹದಿಂದ ದೂರವುಳಿಯಲಾಗಿಲ್ಲ. ಆದರೂ ಗಂಡಸರಷ್ಟು ಬಿಂದಾಸ್ ಆಗಿ ದಮ್‌ ಹೊಡೆಯಲು ಹೆಂಗಸರಿಗೆ ಇನ್ನೂ ಮುಜುಗರ. ಅಪ್ಪ ಸೇದಿ ಎಸೆದ ಸಿಗರೇಟ್‌ ತುಂಡುಗಳನ್ನು ಕದ್ದು ಸೇದಿ ಕೆಮ್ಮು ಬರಿಸಿಕೊಂಡ ಪ್ರಸಂಗ ಕೆಲವು ಹುಡುಗಿಯರ ಬಾಲ್ಯದ ಬೆಚ್ಚಗಿನ ನೆನಪುಗಳಲ್ಲೊಂದು.

ಸಿನಿಮಾಗಳಲ್ಲೂ ದಮ್‌ ಮಾರೋ ದೃಶ್ಯಗಳು ಮಾಮೂಲು. ನಾಯಕರಿಗಿಂತ ತಾವೇನೂ ಕಡಿಮೆ ಇಲ್ಲವೆಂಬಂತೆ ನಾಯಕಿಯರು ದಮ್‌ ಎಳೆಯುವುದು ಸಾಮಾನ್ಯ. ಅಮಿತಾಭ್‌ ಬಚ್ಚನ್‌, ಶಾರೂಕ್‌ ಖಾನ್‌, ಅಜಯ್ ದೇವಗನ್‌ ಸಿಗರೇಟ್‌ ಸೇದಿದಂತೆ ಐಶ್ವರ್ಯಾ ರೈ, ವಿದ್ಯಾಬಾಲನ್‌ ಕೂಡ ಪರದೆಯ ಮೇಲೆ ಹೊಗೆ ತೇಲಿಸಿ ಹುಡುಗರೂ ಹುಬ್ಬೇರಿಸುವಂತೆ ಮಾಡಿದ್ದಾರೆ.

ಹಿಂದಿ ಸಿನಿಮಾಗಳಲ್ಲಿ ಕಂಡು ಬರುತ್ತಿದ್ದ ‘ಧೂಮ’ದ ದೃಶ್ಯಗಳು ಕನ್ನಡದಲ್ಲೂ ಕಮ್ಮಿಯೇನಿಲ್ಲ. ‘ಮೌರ್ಯ’ದಲ್ಲಿ ತುಂಟ ಹುಡುಗಿ ಮೀರಾ ಜಾಸ್ಮಿನ್ ತುಂಡು ಬೀಡಿ ಸೇದಲು ಹೋಗಿ ಹೊಗೆ ತಲೆಗೆ ಹತ್ತಿ ಒದ್ದಾಡುವ ದೃಶ್ಯವಿದೆ. ಕಳೆದ ವರ್ಷ ಸುದ್ದಿ ಮಾಡಿದ ‘ದಂಡುಪಾಳ್ಯ’ ಚಿತ್ರದಲ್ಲಿ ನಟಿ ಪೂಜಾ ಗಾಂಧಿ ಮೋಟು ಬೀಡಿ ಹಿಡಿದು ಹೊಗೆ ಉಗುಳುತ್ತಾರೆ.

ಮಧುರ್‌ ಭಂಡಾರ್‌ಕರ್‌ ಅವರ ‘ಫ್ಯಾಷನ್‌’ ಸಿನಿಮಾದಲ್ಲಿ ಸೂಪರ್ ಮಾಡೆಲ್ ಆಗಬೇಕು ಎಂಬ ಕನಸು ಹೊತ್ತ ಪಾತ್ರ ಪ್ರಿಯಾಂಕಾ ಛೋಪ್ರಾ ಅವರದು. ಮಾನಸಿಕ ಒತ್ತಡದಿಂದ ಪಾರಾಗಲು ಪ್ರಿಯಾಂಕ ಸಿಗರೇಟ್‌ನ ಮೊರೆ ಹೋಗುತ್ತಾರೆ. ತುಂಬಾ ಮೋಹಕವಾಗಿ ಹೊಗೆ ಉಗುಳಿದ್ದು ಚಿತ್ರ ವಿಮರ್ಶೆಗಳಲ್ಲೂ ಪ್ರಸ್ತಾಪವಾಗಿತ್ತು.

ಸವಾಲಿನ ಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ವಿದ್ಯಾಬಾಲನ್ ‘ಡರ್ಟಿ ಪಿಕ್ಚರ್‌’ನಲ್ಲಿ ಬಿಂದಾಸಾಗಿ ಸಿಗರೇಟ್‌ ಹಿಡಿದು ಅಚ್ಚರಿ ಮೂಡಿಸಿದ್ದರು. ಧೂಮಪಾನದ ದೃಶ್ಯ ಸಹಜವಾಗಿರಬೇಕು ಎಂಬ ಕಾರಣಕ್ಕೆ ವಿದ್ಯಾಬಾಲನ್‌ ಹತ್ತು ಸಿಗರೇಟ್‌ ಸೇದಿ ‘ರಿಹರ್ಸಲ್’ ಮಾಡಿಕೊಂಡು ಕ್ಯಾಮೆರಾ ಮುಂದೆ ನಿಂತಿದ್ದರಂತೆ. ಇದರಿಂದ ವಿದ್ಯಾಗೆ ಕೆಮ್ಮು ಶುರುವಾಗಿ ಚಿತ್ರೀಕರಣದಿಂದ ಸಣ್ಣ ಬ್ರೇಕ್‌ ತೆಗೆದುಕೊಂಡಿದ್ದರು.

ಸಂಜಯ್‌ ಲೀಲಾ ಬನ್ಸಾಲಿ ಚಿತ್ರ ‘ಗುಜಾರಿಷ್‌’ ಬಿಡುಗಡೆಗೂ ಮುನ್ನ ಐಶ್ಚರ್ಯಾ ರೈ ಸಿಗರೇಟ್‌ ಸೇದುವ ಪೋಸ್ಟರ್‌ ಚಿತ್ರದ ಆಕರ್ಷಣೆಯಲ್ಲೊಂದಾಗಿತ್ತು. ಯುವ ಜನರಿಗೆ ರೋಲ್‌ಮಾಡೆಲ್‌ ಆಗಿರುವ ನಟಿಯ ಬಗ್ಗೆ ಇಂತಹ ಫೋಟೊ ಇರುವ ಪೋಸ್ಟರ್‌ ತೆಗೆದುಹಾಕಬೇಕು ಎಂಬ ಆಕ್ಷೇಪವೂ ವ್ಯಕ್ತವಾಗಿತ್ತು. 

‘ನೋ ಒನ್ ಕಿಲ್ಡ್ ಜೆಸ್ಸಿಕಾ’  ಸಿನಿಮಾದಲ್ಲಿ ಪತ್ರಕರ್ತೆ ಪಾತ್ರ ನಿರ್ವಹಿಸಿದ್ದ ರಾಣಿ ಮುಖರ್ಜಿ ನಟನೆಯಲ್ಲಿ ನೈಜತೆಯನ್ನು ಹೊಮ್ಮಿಸುವ ಸಲುವಾಗಿ ಅನೇಕ ಸಿಗರೇಟ್‌ ಸೇದಿದ್ದರು. ಇದಕ್ಕೂ ಮುಂಚೆ ನಟಿಸಿದ ‘ಬಿಚ್ಚೂ’ ಸಿನಿಮಾದ ಪಾತ್ರದಲ್ಲಿ ರಾಣಿ ಇದಕ್ಕಿಂತ ಹೆಚ್ಚು ಸಿಗರೇಟ್‌ ಸೇದಿ ಬೀಗಿದ್ದಾಕೆ. ನಿಜ ಜೀವನದಲ್ಲೂ ದಮ್‌ ಎಳೆಯುವ ಕೃಷ್ಣ ಸುಂದರಿಗೆ ತೆರೆಯ ಮೇಲೂ ಮಜಾ ಬಂದಿರಬೇಕು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT