ADVERTISEMENT

ತೆಳ್ಳನೆ ತರುಣ್

ಎಚ್.ಎಸ್.ರೋಹಿಣಿ
Published 29 ಜನವರಿ 2013, 19:59 IST
Last Updated 29 ಜನವರಿ 2013, 19:59 IST
ತೆಳ್ಳನೆ ತರುಣ್
ತೆಳ್ಳನೆ ತರುಣ್   

`ಸ್ನೇಹಿತರು' ಚಿತ್ರದ ಗೆಲುವು ತರುಣ್‌ಗೆ ಹುಮ್ಮಸ್ಸು ತಂದಿದೆ. ಅವರು ನಾಯಕರಾಗಿ ನಟಿಸಿರುವ `ಪದೇ ಪದೇ' ಬಿಡುಗಡೆಗೆ ಸಿದ್ಧವಾಗಿದೆ. ಇದರ ನಡುವೆ ಹಲವು ಕತೆಗಳು ಬಂದರೂ ಗಟ್ಟಿ ಕತೆಗಾಗಿ ಹುಡುಕುತ್ತಿರುವ ಅವರಿಗೆ ವಿಶಿಷ್ಟ ಪಾತ್ರಗಳು ಬೇಕು. ಅಂದಹಾಗೆ ಮೊದಲ ಸಿನಿಮಾ `ಖುಷಿ'ಯಲ್ಲಿ ಇದ್ದಷ್ಟೇ ದೇಹ ತೂಕವನ್ನು ಕಾಯ್ದುಕೊಂಡಿರುವ ಅವರು ಅದಕ್ಕಾಗಿ ಏನೇನು ಮಾಡುತ್ತಾರೆ ಎಂಬ ಮಾಹಿತಿ ಇಲ್ಲಿದೆ.

`ಶೂಟಿಂಗ್ ಇಲ್ಲದೇ ಇರುವಾಗ ನಾನು ಒಂದೂವರೆ ಗಂಟೆ ಜಿಮ್‌ನಲ್ಲಿ ಕಳೆಯುತ್ತೇನೆ. ಶೂಟಿಂಗ್ ಇದ್ದಾಗ ಕನಿಷ್ಠ 45 ನಿಮಿಷವಾದರೂ ವರ್ಕ್‌ಔಟ್ ಮಾಡುತ್ತೇನೆ. ಸಿನಿಮಾ ಆರಂಭಕ್ಕೆ ಮುಂಚೆ ಪಾತ್ರಕ್ಕೆ ತಕ್ಕಂತೆ ದೇಹತೂಕ ಕಾಯ್ದುಕೊಳ್ಳುವತ್ತ ಚಿಂತಿಸುತ್ತೇನೆ' ಎಂದು ತಮ್ಮ ದೈನಂದಿನ ವ್ಯಾಯಾಮವನ್ನು ವಿವರಿಸುವ ಅವರು ಇದೀಗ ಕೊಂಚ ದಪ್ಪಗಾಗಿದ್ದಾರೆ.

“ಪ್ರತಿಯೊಂದು ಸಿನಿಮಾ ಪಾತ್ರಕ್ಕೆ ತಕ್ಕಂತೆ ದೇಹ ತೂಕವನ್ನು ಹೊಂದಿಸಬೇಕಿರುತ್ತದೆ. `ಗಾನ ಬಜಾನಾ' ಚಿತ್ರಕ್ಕೆ ಸಿಕ್ಸ್‌ಪ್ಯಾಕ್ ಮಾಡಬೇಕು ಎಂದು ನಿರ್ದೇಶಕ ಪ್ರಶಾಂತ್‌ರಾಜ್ ಹೇಳಿದ್ದರು. ಅದಕ್ಕಾಗಿ ದೇಹ ದಂಡಿಸಿ ಸಿಕ್ಸ್‌ಪ್ಯಾಕ್ ಬರಿಸಿಕೊಂಡಿದ್ದೆ. `ಪದೇ ಪದೇ' ಚಿತ್ರದಲ್ಲಿ ಪ್ರಬುದ್ಧ ಯುವಕನ ಪಾತ್ರ ನಿರ್ವಹಿಸುತ್ತಿದ್ದೇನೆ. ಅದಕ್ಕೆ ಸಾಮಾನ್ಯ ಮೈಕಟ್ಟು ಸಾಕು. ಅದರಿಂದ ಕೆನ್ನೆ ತುಂಬಿಕೊಂಡು ದಪ್ಪಗೆ ಕಾಣಿಸುತ್ತಿರುವೆ. ಎಚ್ಚರ ತಪ್ಪುವಷ್ಟು ನಾನು ದಪ್ಪಗಾಗಿಲ್ಲ. ಅದಕ್ಕೆ ಕಾರಣ ವ್ಯಾಯಾಮವನ್ನು ಎಂದಿಗೂ ತಪ್ಪಿಸುವುದಿಲ್ಲ” ಎನ್ನುವ ತರುಣ್‌ಗೆ ತೌಶಿಶ್ ಖಾನ್ ಎಂಬ ವ್ಯಾಯಾಮ ತರಬೇತುದಾರ ಇದ್ದಾರೆ. ಅವರ ಸಲಹೆ ಸೂಚನೆ ಪಡೆದು ಜಿಮ್‌ನಲ್ಲಿ ಮೈ ದಂಡಿಸುವ ತರುಣ್ ಸ್ಟ್ರೆಚಸ್, ವೇಟ್ ಟ್ರೈನಿಂಗ್, ಕೋರ್ ವರ್ಕ್‌ಔಟ್ ಮಾಡುತ್ತಾರಂತೆ.

ಡಯಟ್‌ನಲ್ಲಿಯೂ ಕಟ್ಟುನಿಟ್ಟು ನಿಯಮ ಹಾಕಿಕೊಂಡಿರುವ ತರುಣ್ ಬೆಳಿಗ್ಗೆ ಇಡ್ಲಿ, ಎಣ್ಣೆ ಅಂಶ ಕಡಿಮೆ ಇರುವ ದೋಸೆ, ಉಪ್ಪಿಟ್ಟು ತಿನ್ನುತ್ತಾರೆ. ಮಧ್ಯಾಹ್ನ ಬೇಯಿಸಿದ ಚಿಕನ್, ಕೆಂಪಕ್ಕಿ ಅನ್ನ ತಿಂದು ರಾತ್ರಿ ಚಪಾತಿ, ಸೂಪ್, ಚಿಕನ್ ತಿಂದು ಮಲಗುತ್ತಾರೆ. `ಚಿಕನ್‌ನಲ್ಲಿ ಪ್ರೊಟೀನ್ ಜಾಸ್ತಿ ಇರುತ್ತದೆ. ಅದನ್ನು ಎಣ್ಣೆಯಲ್ಲಿ ಕರಿದು ತಿಂದರೆ ಕೊಬ್ಬು ಜಾಸ್ತಿಯಾಗುತ್ತದೆ. ಬೇಯಿಸಿ ತಿಂದರೆ ಅಪಾಯ ಇಲ್ಲ' ಎನ್ನುವ ತರುಣ್‌ಗೆ ಮಟನ್ ಎಂದರೆ ಪಂಚಪ್ರಾಣವಂತೆ.

`ಮಟನ್ ಎಂದರೆ ನನಗೆ ತುಂಬಾ ಇಷ್ಟ. ಫಿಟ್‌ನೆಸ್ ದೃಷ್ಟಿಯಿಂದ ಅದನ್ನು ತಿನ್ನುತ್ತಿಲ್ಲ. ಅಪರೂಪಕ್ಕೆ ಒಂದೋ ಎರಡೋ ತುಂಡು ತಿಂದು ಖುಷಿಪಡುತ್ತೆನೆ' ಎಂದು ಮುಖ ಸಪ್ಪಗೆ ಮಾಡಿಕೊಳ್ಳುತ್ತಾರೆ.

`ಇಷ್ಟ ಬಂದದ್ದನ್ನು ತಿನ್ನಲು ಆಗುತ್ತಿಲ್ಲವಲ್ಲ ಎಂದು ನೆಗೆಟಿವ್ ಆಗಿ ಯೋಚಿಸುವುದನ್ನು ಬಿಟ್ಟು ನಮ್ಮ ವೃತ್ತಿಗಾಗಿ ಇಂಥ ಹವ್ಯಾಸಕ್ಕೆ ಒಗ್ಗಿಕೊಳ್ಳುತ್ತಿರುವುದು ತಾನೇ' ಎಂದು ಪಾಸಿಟಿವ್ ಆಗಿ ಚಿಂತಿಸುತ್ತೇನೆ' ಎಂದು ಹೇಳುವ ತರುಣ್ ಕನ್ನಡ ಸಿನಿಮಾ ನಟರ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದವರು.  `ಸದ್ಯದಲ್ಲೇ ಕ್ರಿಕೆಟ್ ಟೂರ್ನಿ ಆರಂಭವಾಲಿದೆ. ಅದಕ್ಕಾಗಿ ಪ್ರತ್ಯೇಕ ತರಬೇತಿ ಇರುತ್ತದೆ. ಸಾಕಷ್ಟು ಬೆವರು ಹರಿಸಬೇಕಾಗುತ್ತದೆ' ಎನ್ನುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.