ADVERTISEMENT

ದಾಖಲೆ ಮುರಿಯುವುದರಲ್ಲಿ ಆಸಕ್ತಿ ಇಲ್ಲ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2013, 19:59 IST
Last Updated 19 ಸೆಪ್ಟೆಂಬರ್ 2013, 19:59 IST

‘ಅಭಿಮಾನಿಗಳನ್ನು ಮೆಚ್ಚಿಸುವುದು, ಪೂರ್ಣಪ್ರಮಾಣದ ಮನರಂಜನೆ ನೀಡುವುದು, ಜೊತೆಗೆ ಹೊಸತನ ಕೊಡುವ ಸಾಧ್ಯತೆ ಇವಿಷ್ಟನ್ನು ಮಾತ್ರ ಪಾತ್ರ ಆಯ್ಕೆ ಮಾಡುವಾಗ ಪರಿಗಣಿಸುತ್ತೇನೆ. ಉಳಿದಂತೆ ಬಾಕ್ಸ್ಆಫೀಸ್‌ ಗಳಿಕೆ, ದಾಖಲೆ, ಎಷ್ಟು ದಿನ ಓಡಿದವು ಇವೆಲ್ಲವೂ ಗೌಣ’ ಎಂದು ಅಮೀರ್‌ ಖಾನ್‌ ಹೇಳಿದ್ದಾರೆ.

ಡಿ.20ರಂದು ಅವರು ಖಳನ ಪಾತ್ರ ನಿರ್ವಹಿಸಿರುವ ‘ಧೂಮ್‌3’ ಬಿಡುಗಡೆಗೆ ಸಿದ್ಧವಾಗಿದೆ. ಈ ಚಿತ್ರ ‘ಚೆನ್ನೈ ಎಕ್ಸ್‌ಪ್ರೆಸ್‌’ ಚಿತ್ರ ಗಳಿಕೆಯ ದಾಖಲೆಯನ್ನು ಮುರಿಯಬಲ್ಲದೇ ಎಂಬ ಪ್ರಶ್ನೆಗೆ ಅಮೀರ್‌ ಉತ್ತರಿಸಿದ್ದು ಹೀಗೆ.

ಬಾಕ್ಸ್‌ ಆಫೀಸಿನ ಅಂಕಿ ಸಂಖ್ಯೆಗಳೆಲ್ಲ ನನಗರ್ಥವಾಗುವುದಿಲ್ಲ. ಅಭಿಮಾನಿಗಳ ಪ್ರೀತಿ ಗಳಿಸಬೇಕು. ಬಂದವರಿಗೆ ಫುಲ್‌ ಮನರಂಜನೆ ದೊರೆಯಬೇಕು. ಜೊತೆಗೆ ಭಾವನಾತ್ಮಕ ತೃಪ್ತಿ ಸಿಗಬೇಕು. ಅಷ್ಟಕ್ಕೆ ಮಾತ್ರ ಹೆಚ್ಚು ಗಮನ ಕೊಡುತ್ತೇನೆ. ನಾನೊಬ್ಬ ಕಲಾವಿದ. ಈ ಗಳಿಕೆ, ದಾಖಲೆಗಳ ಹಟಕ್ಕೆ ಬೀಳುವ ಲೆಕ್ಕಾಚಾರ ಗೊತ್ತಿಲ್ಲ ಎಂದು ಅಮೀರ್‌ ಖಾನ್‌ ಹೇಳಿದ್ದಾರೆ.

ಈ ಹಿಂದೆ ಅಮೀರ್‌, ಪೊಲೀಸ್‌ ಪಾತ್ರ ನಿರ್ವಹಿಸಿದ್ದ ‘ತಲಾಶ್‌’ಚಿತ್ರ ಬಾಕ್ಸ್‌ ಆಫೀಸಿನಲ್ಲಿ ಯಶಸ್ವಿಯಾಗದಿದ್ದರೂ ವಿಮರ್ಶಕರ ಹಾಗೂ ಅಭಿಮಾನಿಗಳ ಪ್ರೀತಿ ಗಳಿಸಿತ್ತು ಎಂದೂ ಹೇಳುತ್ತಾರೆ ಅಮೀರ್‌.

ನಾನು ನನ್ನ ಅಭಿಮಾನಿಗಳಿಗೆ ವೈವಿಧ್ಯಮಯ ಪಾತ್ರಗಳನ್ನು ನಿರ್ವಹಿಸುವ ಮೂಲಕ ಚಕಿತಗೊಳಿಸಲು ಇಚ್ಛಿಸುತ್ತೇನೆ. ಅವರ ಪ್ರೀತಿಗಾಗಿ ಹಾತೊರೆಯುತ್ತೇನೆ. ನನಗೆ ಸವಾಲೆನಿಸುವ ಪಾತ್ರಗಳನ್ನು ಮಾತ್ರ ಒಪ್ಪಿಕೊಳ್ಳುತ್ತೇನೆ. ನನ್ನ ಪಾತ್ರಗಳಿಗಾಗಿ ದೇಹದಂಡಿಸಲು, ಹೊಸತನ್ನು ಕಲಿಯಲು ಇಷ್ಟಪಡುತ್ತೇನೆ. ಇವೆಲ್ಲವೂ ನನ್ನ ಆದ್ಯತೆಗಳಾಗಿವೆ’ ಎಂದಿರುವ ಅಮೀರ್‌ ಖಾನ್‌ ದಾಖಲೆ ನಿರ್ಮಿಸುವ, ಮುರಿಯುವ ಬಗ್ಗೆ ಆಸಕ್ತಿ ಇಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.