ADVERTISEMENT

ದೆವ್ವದ ವೃತ್ತಾಂತ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2018, 19:30 IST
Last Updated 1 ಮಾರ್ಚ್ 2018, 19:30 IST
ದೆವ್ವದ ವೃತ್ತಾಂತ
ದೆವ್ವದ ವೃತ್ತಾಂತ   

ಗಾಂಧಿನಗರದಲ್ಲಿ ಹಾರರ್‌ ಚಿತ್ರಗಳ ಅಬ್ಬರ ಹೆಚ್ಚಿದೆ. ‘3000’ ಚಿತ್ರ ಇದಕ್ಕೆ ಹೊಸ ಸೇರ್ಪಡೆ. ಗೆಳೆಯರೆಲ್ಲರೂ ಒಟ್ಟಿಗೆ ದ್ವೀಪವೊಂದಕ್ಕೆ ಹೋದಾಗ ಅವರಿಗೆ ವಿಚಿತ್ರ ಅನುಭವಗಳಾಗುತ್ತವೆ. ಅಲ್ಲಿಂದ ಅವರೆಲ್ಲರೂ ಹೇಗೆ ಪಾರಾಗುತ್ತಾರೆ ಎನ್ನುವುದೇ ಈ ಚಿತ್ರದ ಕಥಾಹಂದರ.

ಸಿನಿಮಾ ಈ ವಾರ ತೆರೆಗೆ ಬರುತ್ತಿದ್ದು, ಇದನ್ನು ಹಂಚಿಕೊಳ್ಳಲೆಂದೇ ಚಿತ್ರತಂಡ ಸುದ್ದಿಗೋಷ್ಠಿ ಕರೆದಿತ್ತು. ಚಿತ್ರೀಕರಣದ ವೇಳೆ ಆದ ವಿಚಿತ್ರ ಅನುಭವಗಳ ಬಗ್ಗೆ ಹೇಳಲು ತಂಡದ ಸದಸ್ಯರು ಮರೆಯಲಿಲ್ಲ.

ನಿರ್ದೇಶಕ ರಬ್ಬುನಿ ಕೀರ್ತಿ ಅವರಿಗೆ ಇದು ಮೊದಲ ಚಿತ್ರ. ‘ನಾವು ನಿರೀಕ್ಷೆ ಮಾಡಿದ್ದಕ್ಕಿಂತಲೂ ಚಿತ್ರ ಚೆನ್ನಾಗಿ ಮೂಡಿಬಂದಿದೆ. ಚಿತ್ರದಲ್ಲಿರುವ ಎಲ್ಲರೂ ಹೊಸಬರು. ನಿರ್ದೇಶನ ನನಗೆ ಹೊಸ ಅನುಭವವನ್ನು ಕಟ್ಟಿಕೊಟ್ಟಿದೆ. ಜನರಿಗೆ ಖಂಡಿತ ಸಿನಿಮಾ ಇಷ್ಟವಾಗಲಿದೆ’ ಎಂಬ ವಿಶ್ವಾಸ ಅವರ ಮಾತುಗಳಲ್ಲಿತ್ತು.

ADVERTISEMENT

ಚಿತ್ರದಲ್ಲಿ ಐದು ಹಾಡುಗಳಿದ್ದು, ಕ್ಲಾರೆನ್ಸ್ ಅಲೆನ್ ಕ್ರಾಸ್ತಾ ಸಂಗೀತ ಸಂಯೋಜಿಸಿದ್ದಾರೆ. ಲ್ಯಾಟಿನ್ ಭಾಷೆಯಲ್ಲಿ ಒಂದು ಹಾಡು ಇದೆಯಂತೆ. ಕನ್ನಡದಲ್ಲಿ ಇಂತಹ ಪ್ರಯತ್ನ ಇದೇ ಮೊದಲು ಎನ್ನುವುದು ಚಿತ್ರತಂಡದ ಹೇಳಿಕೆ.

ನಿರ್ಮಾಪಕ ಶಂಕರ್‌, ‘ಚಿತ್ರಕ್ಕೆ ಹಣ ಹೂಡಿದ ತಕ್ಷಣ ನಿರ್ಮಾಪಕನ ಜವಾಬ್ದಾರಿ ಮುಗಿಯುವುದಿಲ್ಲ. ಕಲಾವಿದರ ಪ್ರತಿಭೆ ಗುರುತಿಸುವುದು ಕೂಡ ಆತನ ಹೊಣೆ’ ಎಂದರು.

ಪತ್ರಕರ್ತ ಗೌರೀಶ್ ಅಕ್ಕಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ಚಿತ್ರರಂಗಕ್ಕೆ ಹೊಸ ನಿರ್ಮಾಪಕರ ಪ್ರವೇಶವಾಗುತ್ತಿದೆ. ಅವರ ಪ್ರಯತ್ನಕ್ಕೆ ಗೌರವ ನೀಡುವ ಹೊಣೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮೇಲಿದೆ’ ಎಂದು ಆಶಿಸಿದರು.

ಮನುಕೃಷ್ಣನ್ ಛಾಯಾಗ್ರಹಣ ಚಿತ್ರಕ್ಕಿದೆ. ಪಲ್ಲವಿ ಸಾಗರ್, ಸುಹಾನ್, ಪ್ರಸಾದ್, ಸ್ವಾತಿ, ಕಾವ್ಯಾ ತಾರಾಗಣದಲ್ಲಿದ್ದಾರೆ.


ರಬ್ಬುನಿ ಕೀರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.