ADVERTISEMENT

ದ್ವೇಷ, ಪ್ರೀತಿ, ಗೌರವ...

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2012, 19:30 IST
Last Updated 26 ಏಪ್ರಿಲ್ 2012, 19:30 IST

ಇಪ್ಪತ್ತೈದು ದಿವಸಗಳ ಸತತ ಚಿತ್ರೀಕರಣದಲ್ಲಿ ನಿರತವಾಗಿತ್ತು `ಅಂದರ್ ಬಾಹರ್~ ತಂಡ. ಅಲ್ಲಿಗೆ ಮೊದಲನೇ ಹಂತದ ಚಿತ್ರೀಕರಣ ಮುಕ್ತಾಯವಾಗುವ ಸಮಯ ಬಂದಿತ್ತು. ಮೂರು ದಿನಗಳಿಂದ ಹೊಡೆದಾಟದ ದೃಶ್ಯವೊಂದನ್ನು ಚಿತ್ರೀಕರಿಸಲಾಗುತ್ತಿತ್ತು. ಸ್ಥಳ ಬೆಂಗಳೂರಿನ ಮೈಸೂರ್ ಲ್ಯಾಂಪ್ಸ್ ಕಾರ್ಖಾನೆಯ ಆವರಣ.

ಚಿತ್ರಕ್ಕೆ ಸಂಭಾಷಣೆ ಬರೆದಿರುವ ಎಂ.ಎಸ್.ರಮೇಶ್, `ಶಿವರಾಜ್‌ಕುಮಾರ್ ಅವರ ಪಾತ್ರಕ್ಕೆ ಮೂರು ಆಯಾಮಗಳಿವೆ. ಚಿತ್ರದಲ್ಲಿ ಮೊದಲು ಅವರನ್ನು ನೋಡಿದಾಗ ದ್ವೇಷಿಸಬೇಕು ಅನ್ನಿಸುತ್ತದೆ. ನಂತರ ಆ ಪಾತ್ರದ ಬಗ್ಗೆ ಪ್ರೀತಿ ಮೊಳೆಯುತ್ತದೆ.
 
ಆ ನಂತರ ಗೌರವ ಹುಟ್ಟುತ್ತದೆ~ ಎಂದರು. ಶಿವಣ್ಣ ಅವರದ್ದು ಚಿತ್ರದಲ್ಲಿ ಭೂಗತ ನಾಯಕನ ಪಾತ್ರ. ಆದರೂ ಚಿತ್ರದಲ್ಲಿ ಭಾವನೆಗಳಿಗೆ ಹೆಚ್ಚು ಒತ್ತು ನೀಡಲಾಗಿದೆ. ಚಿತ್ರಕ್ಕೆ ಸಂಭಾಷಣೆ ಬರೆಯುವ ಕೆಲಸ ಅವರಿಗೆ ಸಾಕಷ್ಟು ತೃಪ್ತಿ ನೀಡಿದೆ.

ನಿರ್ದೇಶಕ ಫಣೀಶ್ ಅನ್ಯಮನಸ್ಕರಾಗಿ ಕುಳಿತಿದ್ದರು. ಅದು ಅವರ ಚೊಚ್ಚಲ ಚಿತ್ರ. ಚಿತ್ರದ ಆತಂಕಗಳೆಲ್ಲಾ ಅವರನ್ನು ಆವರಿಸಿದ್ದವು.

ಫಣೀಶ್ ಮಾತಿಗಿಳಿದಾಗ ಶಿವರಾಜ್‌ಕುಮಾರ್, ಶ್ರೀನಾಥ್, ಪಾರ್ವತಿ, ಅರುಂಧತಿ ನಾಗ್ ಅಭಿನಯವನ್ನು ಮನಸಾರೆ ಹೊಗಳಿದರು. ಅನುಭವಿ ನಟರಿಂದ ಕಲಿತ ಪಾಠಗಳನ್ನು ವಿವರಿಸಿದರು. ಛಾಯಾಗ್ರಾಹಕ ಶೇಖರ್ ಚಂದ್ರು ತಮ್ಮ ಕಲ್ಪನೆಗಳನ್ನು ವಾಸ್ತವವಾಗಿಸಿದ್ದಾರೆ ಎಂದು ಮೆಚ್ಚಿಕೊಂಡರು.
 
ಅಂದುಕೊಂಡಂತೆ ಚಿತ್ರ ಮೂಡಿದೆ ಎಂಬ ತೃಪ್ತಿ ಅವರದು. ಬೆಂಗಳೂರಿನ ಸುತ್ತಮುತ್ತ ಮೊದಲನೇ ಹಂತದ ಚಿತ್ರೀಕರಣ ನಡೆಸಿರುವ ಚಿತ್ರತಂಡ ಎರಡನೇ ಹಂತದ ಚಿತ್ರೀಕರಣಕ್ಕಾಗಿ ಗೋಕರ್ಣ, ಗೋವಾ ಹಾಗೂ ಕಾರವಾರದತ್ತ ಮುಖ ಮಾಡಿದೆ. ಮೂರನೇ ಹಂತದಲ್ಲಿ ಹಾಡುಗಳ ಚಿತ್ರೀಕರಣ ನಡೆಸಲು ನಿರ್ದೇಶಕರು ತೀರ್ಮಾನಿಸಿದ್ದಾರೆ.

ನಾಯಕ ಶಿವರಾಜ್‌ಕುಮಾರ್ ಅರುಂಧತಿ ನಾಗ್ ಅವರ ಅಭಿನಯವನ್ನು ಕೊಂಡಾಡಿದರು. ಅಂಥ ಹಿರಿಯ ನಟಿಯ ಜತೆ ಅಭಿನಯಿಸುವುದು ಒಳ್ಳೆಯ ಅನುಭವ ಎಂದರು. `ಜೋಗಿ~ ಚಿತ್ರದ ತಾಯಿ ಪಾತ್ರಕ್ಕಿಂತ ಇಲ್ಲಿ ಭಿನ್ನವಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಅರುಂಧತಿ. ಅವರದು ಹಾಸ್ಯಮಯ ಅಭಿನಯ.

ಫಣೀಶ್ ಅವರ ಚಡಪಡಿಕೆಗಳ ಬಗ್ಗೆಯೂ ಒಂದೆರಡು ಮಾತುಗಳನ್ನಾಡಿದರು. ಚಿಕ್ಕ ಚಿಕ್ಕ ವಿಷಯಗಳಿಗೂ ಅವರು ಹೆಣಗುವ ರೀತಿಯನ್ನು ಉಲ್ಲೇಖಿಸಿದರು. ಹೊಸ ಕಲಾ ನಿರ್ದೇಶಕರ ಹುಡುಕಾಟದಲ್ಲಿರುವ ಚಿತ್ರಕ್ಕೆ ಸದ್ಯ ಕಲಾ ನಿರ್ದೇಶಕರಾಗಿರುವುದು ಫಣೀಶ್ ಎಂದರು.

ಚಿತ್ರದಲ್ಲಿ ಶಶಿಕುಮಾರ್, ಚಸ್ವಾ ನೀನಾಸಂ ಕಾಣಿಸಿಕೊಳ್ಳುತ್ತಿದ್ದಾರೆ. ಶಶಿಕುಮಾರ್ ಪಾತ್ರದ ಚಿತ್ರೀಕರಣ ಇನ್ನಷ್ಟೇ ನಡೆಯಬೇಕಿದೆ. ಮೇ ಅಂತ್ಯದ ವೇಳೆಗೆ ಚಿತ್ರೀಕರಣ ಮುಕ್ತಾಯ ವಾಗಲಿದೆ. ನಿರ್ಮಾಪಕರಲ್ಲಿ ಒಬ್ಬರಾದ ಪ್ರಸಾದ್ ತಮ್ಮ ಚೊಚ್ಚಲ ಚಿತ್ರದ ಅನುಭವಗಳನ್ನು ಹಂಚಿಕೊಂಡರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.