ADVERTISEMENT

ಪಾಕ ಪ್ರವೀಣ ಸಿದ್ಧಾರ್ಥ

ಪಂಚರಂಗಿ

​ಪ್ರಜಾವಾಣಿ ವಾರ್ತೆ
Published 3 ಜೂನ್ 2013, 19:59 IST
Last Updated 3 ಜೂನ್ 2013, 19:59 IST

ದಕ್ಷಿಣ ಭಾರತದ ನಟ ಸಿದ್ಧಾರ್ಥ್ `ರಂಗ್ ದೆ ಬಸಂತಿ' ಚಿತ್ರದ ಮೂಲಕ ಬಾಲಿವುಡ್ ಅಂಗಳಕ್ಕೆ ಕಾಲಿಟ್ಟವರು. ಆನಂತರ `ಚಷ್ಮೆ ಬದ್ದೂರ್' ಚಿತ್ರದಲ್ಲೂ ಕಾಣಿಸಿಕೊಂಡಿದ್ದರು. ಕಾಲಿವುಡ್, ಟಾಲಿವುಡ್ ಮತ್ತು ಬಾಲಿವುಡ್ ಹೀಗೆ ಮೂರು ದೋಣಿಯ ಮೇಲೆ ಪಯಣಿಸುತ್ತಿರುವ ಸಿದ್ಧಾರ್ಥ್ ಮನಸ್ಸಿನ ನೆಮ್ಮದಿಗಾಗಿ ಹೊಸದೊಂದು ಸೂತ್ರ ಕಂಡುಕೊಂಡಿದ್ದಾರೆ.

ಯೋಗ ಮಾಡಿದರೆ ದೇಹ ಮತ್ತು ಮನಸ್ಸು ಪ್ರಫುಲ್ಲವಾಗಿರುತ್ತದೆ ಎಂಬುದು ಹಳೆ ವಿಷಯ. ನಟ ಸಿದ್ಧಾರ್ಥ್ ಅವರಿಗೆ ಅಡುಗೆ ಮಾಡುವುದರಿಂದ ಆ ನೆಮ್ಮದಿ ಸಿಕ್ಕುತ್ತದಂತೆ. ಇದು ಹೊಸ ವಿಷಯ.

ಅಡುಗೆ ಕೆಲಸ ಯೋಗದಂತೆ ಮನಸ್ಸಿಗೆ ಚಿಕಿತ್ಸೆ ನೀಡುತ್ತದೆ ಎನ್ನುವ ಸಿದ್ಧಾರ್ಥ್‌ಗೆ ತನ್ನ ಗೆಳೆಯರಿಗಾಗಿ ಶೆಫ್ ವಸ್ತ್ರವನ್ನು ಧರಿಸುವುದು ಎಂದರೆ ತುಂಬ ಇಷ್ಟವಂತೆ. `ಅಡುಗೆಯೇ ನನ್ನ ಯೋಗ. ಅದನ್ನು ಮಾಡಿದಾಗ ಸಿಕ್ಕುವ ಫಲ ನನಗೆ ಅಡುಗೆ ಮಾಡುವುದರಿಂದಲೇ ಸಿಕ್ಕುತ್ತದೆ. ದಿನ ಒಂದಿಲ್ಲೊಂದು ಖಾದ್ಯ ಮಾಡುವ ಮೂಲಕ ಮನಸ್ಸನ್ನು ಪ್ರಶಾಂತವಾಗಿಟ್ಟುಕೊಳ್ಳುತ್ತೇನೆ. ಕಳೆದ ಭಾನುವಾರ ಅಲೆಪ್ಪಿ ಸಿಗಡಿ ಕರ್ರಿ ಮತ್ತು ಚಿತ್ರಾನ್ನ ತಯಾರಿಸಿದ್ದೆ. ರುಚಿ ಅದ್ಭುತವಾಗಿತ್ತು' ಎಂದು ಅವರು ಟ್ವೀಟ್ ಮಾಡಿದ್ದಾರೆ.

`ಸ್ನೇಹಿತರಿಗೆ ಅಡುಗೆ ಬೇಯಿಸಿ ಹಾಕುವುದು ನನ್ನಿಷ್ಟದ ಕೆಲಸಗಳಲ್ಲಿ ಒಂದು. ಆದರೆ ಅವರ ರುಚಿಯನ್ನು ಅರಿತು ಅದರಂತೆ ಖಾದ್ಯಗಳನ್ನು ತಯಾರಿಸುವುದು ಸವಾಲಿನ ಸಂಗತಿ. ಅಡುಗೆ ಮಾಡುವ ಕಲೆ ನನಗೆ ವಂಶಪಾರಂಪರ್ಯವಾಗಿ ಬಂದಿದೆ' ಎಂದು ಮಾತು ಸೇರಿಸುತ್ತಾರೆ ಅವರು.

ಸಿದ್ಧಾರ್ಥ್ ಈಗ ತಮ್ಮ ಹೊಸ ಚಿತ್ರ `ಥೀಯ ವೇಲ ಸೆಯ್ಯನಂ ಕುಮಾರು' ಚಿತ್ರ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ. ಈ ಚಿತ್ರ ಜೂನ್ 14ಕ್ಕೆ ತೆರೆಕಾಣಲಿದೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.