ADVERTISEMENT

ಪ್ರಜ್ವಲ ದಿನಗಳು

ಅಮಿತ್ ಎಂ.ಎಸ್.
Published 22 ಸೆಪ್ಟೆಂಬರ್ 2011, 19:30 IST
Last Updated 22 ಸೆಪ್ಟೆಂಬರ್ 2011, 19:30 IST

ಮುಖದಲ್ಲಿ ಕಾಣುವ ಸಂಕೋಚದ ಸ್ವಭಾವ ಹುಟ್ಟಿನಿಂದಲೂ ಇತ್ತು. ತಂದೆ ಚಿತ್ರರಂಗದಲ್ಲಿ ಹೆಸರು ಮಾಡಿದ್ದವರು. ತಾಯಿ ಮತ್ತು ತಮ್ಮ ಕೂಡ ಆಗಲೇ ಬಣ್ಣಹಚ್ಚಿದ್ದರು.

ತಾನೂ ನಟಿಸಬೇಕೆಂಬ ಆಸೆಯನ್ನು ಹೇಳಿಕೊಳ್ಳಲು ಸಂಕೋಚ ಬಿಟ್ಟಿರಲಿಲ್ಲ. ಕೊನೆಗೆ ಅವಕಾಶವೇ ಅವರನ್ನು ಹುಡುಕಿಕೊಂಡು ಬಂದಿತು. ನಾಚಿಕೆ, ಹಿಂಜರಿಕೆಯನ್ನು ಬದಿಗಿಟ್ಟು ಧೈರ್ಯ ಮಾಡಿ ಮನೆಯವರ ಮುಂದಿಟ್ಟಾಗ ತಕ್ಷಣವೇ ಗ್ರೀನ್ ಸಿಗ್ನಲ್ ಸಿಕ್ಕಿತು.

ಹೀಗೆ ಚಿತ್ರರಂಗದ ಮೈದಾನಕ್ಕೆ ಕಾಲಿಟ್ಟೊಡನೆ `ಸಿಕ್ಸರ್~ ಬಾರಿಸಿದವರು ಪ್ರಜ್ವಲ್ ದೇವರಾಜ್.

ಬಣ್ಣದ ಲೋಕದ `ಸ್ಟಾರ್~ಗಳ ನಡುವೆ ತುಸು ವಿಭಿನ್ನವಾಗಿ ಗುರುತಿಸುವಂತಹ ವ್ಯಕ್ತಿತ್ವ ಪ್ರಜ್ವಲ್‌ರದು. ಅಪ್ಪನ ನೆರಳಿನಲ್ಲಿ ಬೆಳೆದ ಪ್ರಜ್ವಲ್‌ಗೆ ನಟನೆಯಲ್ಲಿ ತಂದೆಯೇ ಆದರ್ಶ. ರಾಜ್‌ಕುಮಾರ್, ಕಮಲಹಾಸನ್ ಚಿತ್ರಗಳೆಂದರೆ ಅಚ್ಚುಮೆಚ್ಚು.

ತಂದೆಯ ಚಿತ್ರಗಳನ್ನು ಬಿಡುಗಡೆಯಾಗುತ್ತಿದ್ದಂತೆ ನೋಡಿ ಕನ್ನಡಿ ಮುಂದೆ ನಿಂತು ಅದೇ ರೀತಿ ಅಭಿನಯಿಸಲು ಪ್ರಯತ್ನಿಸುತ್ತಿದ್ದ ದಿನಗಳನ್ನು ಅವರು  ನೆನಪಿಸಿಕೊಳ್ಳುತ್ತಾರೆ.

ಆತ್ಮೀಯ ಸ್ನೇಹಿತನೂ ತಂದೆಯೇ. ತೆರೆಯ ಮೇಲೆ ರಫ್ ಆಂಡ್ ಟಫ್ ಆಗಿ ಕಾಣುವ ದೇವರಾಜ್ ವೈಯಕ್ತಿಕವಾಗಿ ತುಂಬಾ ಮೃದು. ತಂದೆಯನ್ನು ಪ್ರಜ್ವಲ್ ಕರೆಯವುದು `ಡ್ಯಾಡು~ ಎಂದು.
 
ದೇವರಾಜ್‌ಗೆ ಪಾಲಿಗೆ ಮಗ `ಸನ್ನಿ~. ಪ್ರಜ್ವಲ್ ಮನೆಯಿಂದ ಹೊರ ಹೊರಡುವಾಗ ಇಂದಿಗೂ ತಂದೆಗೆ ಹೇಳಿಯೇ ಹೊರಡುತ್ತಾರೆ. ಮರಳುವುದು ತಡವಾದರೂ `ಡ್ಯಾಡು~ ಫೋನ್ ಬರುತ್ತದೆ.

ಪ್ರಜ್ವಲ್ `ಸಿಕ್ಸರ್~ ಮೂಲಕ ಎಂಟ್ರಿ ಕೊಟ್ಟಾಗ ಅವರ ಲವರ್‌ಬಾಯ್ ಪಾತ್ರವನ್ನು ಮೆಚ್ಚಿ ನೂರಾರು ಫೀಮೇಲ್ ಅಭಿಮಾನಿಗಳು ಪತ್ರ ಬರೆದಿದ್ದರಂತೆ. ಅದೇ ಅಭಿಮಾನಿಗಳು ಅವರನ್ನು ಈಗ ಆಕ್ಷನ್ ಪಾತ್ರಗಳಲ್ಲಿ ಕಾಣಲು ಬಯಸುತ್ತಿದ್ದಾರಂತೆ.

ಇದರಿಂದ ಪುಳಕಿತರಾಗಿರುವ ಪ್ರಜ್ವಲ್ ಅಭಿಮಾನಿಗಳ ಈ ಆಸೆ ಪೂರೈಸುವ ತುಡಿತದಲ್ಲಿದ್ದಾರೆ. ದೇವರಾಜ್‌ರಂತೆ ಪೊಲೀಸ್ ದಿರಿಸಿನಲ್ಲಿ ಕಾಣಿಸಿಕೊಳ್ಳುವ ಹಂಬಲವೂ ಇದೆ.

ಅದರಲ್ಲೂ ತಂದೆ ಅಭಿನಯಿಸಿದ್ದ `ಹುಲಿಯ~ ಚಿತ್ರದಂತಹ ನಟನೆಗೆ ಪರಿಪೂರ್ಣ ಅವಕಾಶವಿರುವ ಪಾತ್ರ ಬೇಕೆನ್ನುವುದು ಅವರ ಬಯಕೆ. ಆದರೆ ಆಕ್ಷನ್ ಪಾತ್ರಕ್ಕೆ ಅವರ ಧ್ವನಿಯೇ ಅಡ್ಡಿಯಾಗುತ್ತಿದೆ.

ಆದರೆ ಅವರದು ಹೂವಿನಂತಹ ಮೃದು ಧ್ವನಿ. ಆ್ಯಕ್ಷನ್ ಪಾತ್ರಕ್ಕೆ ಹೊಂದಿಕೆಯಾಗುವಷ್ಟು ವಾಯ್ಸ ಮೆಚ್ಯೂರ್ ಆಗಿಲ್ಲ ಎಂಬುದು ಪ್ರಜ್ವಲ್ ಕೊರಗು.

ಬಣ್ಣದ ಲೋಕಕ್ಕೆ ಕಾಲಿಟ್ಟು ಐದು ವರ್ಷ ಕಳೆದಿದೆ. ಆಗಿನ್ನೂ ಕಾಲೇಜು ಮೆಟ್ಟಿಲೇರಿದ್ದವರು ಈಗ ಬಿಬಿಎಂ ಪದವೀಧರ. ಈಗಾಗಲೇ ಸುಮಾರು 20 ಚಿತ್ರಗಳಿಗೆ ಬಣ್ಣ ಹಚ್ಚಿದ್ದಾರೆ ಪ್ರಜ್ವಲ್.

ಆದರೆ ನಾಚಿಕೆಯ ಸ್ವಭಾವ ಇನ್ನೂ ಸಂಪೂರ್ಣ ದೂರವಾಗಿಲ್ಲ. ಗೆಳೆಯ, ಮೆರವಣಿಗೆ, ಲವ್‌ಗುರು, ಜೀವ ಹೀಗೆ ಹಲವು ಚಿತ್ರಗಳು ಹೆಸರು ಮಾಡಿವೆ. ಅವರೇ ಹೇಳುವಂತೆ ಅವರ ಯಾವ ಚಿತ್ರಗಳೂ ಸೂಪರ್ ಹಿಟ್ ಎನಿಸಿಲ್ಲ.
 
ಹಾಗಂತ ಸಂಪೂರ್ಣ ನೆಲಕಚ್ಚಿಯೂ ಇಲ್ಲ. `ಭದ್ರ~ದ ಚಿತ್ರದ ಯಶಸ್ಸು ಚಿತ್ರರಂಗದಲ್ಲಿ ತಮ್ಮನ್ನು ಭದ್ರಪಡಿಸಲಿದೆ ಎಂಬ ಭರವಸೆ ಮೂಡಿಸಿದೆ. ಇದೀಗ `ಸಾಗರ್~, `ಸೂಪರ್ ಶಾಸ್ತ್ರಿ~, `ಸುಮ್‌ಸುಮ್ನೆ~ `ಗೋಕುಲ ಕೃಷ್ಣ~ ಚಿತ್ರಗಳಲ್ಲಿ ಪ್ರಜ್ವಲ್ ಬಿಜಿಯಾಗಿದ್ದಾರೆ.

ಗುರುತಿಸಿಕೊಳ್ಳಲು ನಾಯಕನ ಪಾತ್ರವೇ ಬೇಕಿಲ್ಲ. ಚಿತ್ರದಲ್ಲಿ ಪ್ರಮುಖವೆನಿಸುವ ಉತ್ತಮ ಪಾತ್ರವಿರಬೇಕಷ್ಟೆ. ಒಬ್ಬ ಉತ್ತಮ ನಟ ಖಳನಾಯಕನ ಪಾತ್ರ ಮಾಡಿದರೂ ಜನ ಅದನ್ನು ಮೆಚ್ಚುತ್ತಾರೆ.

ಸಿನಿಮಾರಂಗ ಸಾಫ್ಟ್‌ವೇರ್ ಕಂಪೆನಿಗಳಂತೆ. ಇಲ್ಲಿ ಎಲ್ಲರೂ ಒಂದೇ ಬಗೆಯ ಕೆಲಸ ಮಾಡುತ್ತಾರೆ. ಎಲ್ಲರ ಉದ್ದೇಶವೂ ಒಂದೇ. ಇಂತಹ ಆರೋಗ್ಯಕರ ಪೈಪೋಟಿಯ ವಾತಾವರಣ ನಿರ್ಮಾಣವಾದಾಗ ಉತ್ತಮ ಚಿತ್ರಗಳು ತಾನಾಗಿಯೇ ಬರುತ್ತವೆ ಎಂಬುದು ಪ್ರಜ್ವಲ್ ಉವಾಚ.

ಕನ್ನಡ ಚಿತ್ರರಂಗ ಇನ್ನೂ ಬೆಳೆಯುತ್ತಿದೆ. ಮಾರುಕಟ್ಟೆ ಕೂಡ ವಿಸ್ತಾರವಾಗುತ್ತಿದೆ. ಜೊತೆಗೆ ಹೊಸ ಪ್ರತಿಭೆಗಳು, ತಾಂತ್ರಿಕ ಪರಿಣತರು ಚಿತ್ರರಂಗಕ್ಕೆ ಕಾಲಿಡುತ್ತಿರುವುದರಿಂದ ಅನ್ಯಭಾಷೆಗಳಿಗೆ ಸರಿಸಾಟಿಯಾಗಿ ನಿಲ್ಲುವಂತಾಗಿದೆ ಎನ್ನುವ ಪ್ರಜ್ವಲ್ ಡಬ್ಬಿಂಗ್ ಚಿತ್ರಗಳು ಚಿತ್ರರಂಗಕ್ಕೆ ಮಾರಕ ಎಂಬುದನ್ನು ಒಪ್ಪಿಕೊಳ್ಳುತ್ತಾರೆ.

ಇತ್ತ ಪ್ರಜ್ವಲ್ ನಟನೆಯಲ್ಲಿ ಬಿಜಿಯಾಗಿದ್ದರೆ, ತಂದೆ ದೇವರಾಜ್ ಕಥೆ ತಯಾರಿಸಿ ನಿರ್ದೇಶನಕ್ಕಿಳಿಯಲು ಸಿದ್ಧತೆಯಲ್ಲಿದ್ದಾರೆ. ತಂದೆ ನಿರ್ದೇಶನ ಚಿತ್ರದಲ್ಲಿ ಅವರ ಜೊತೆಯೇ ನಟಿಸಬೇಕು ಎಂಬ ಹೆಬ್ಬಯಕೆ ಅವರದು. ಅದು ಶೀಘ್ರವೇ ಈಡೇರಲಿದೆ ಎಂಬ ಸೂಚನೆಯನ್ನೂ ಅವರು ನೀಡಿದ್ದಾರೆ.
 
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.