ADVERTISEMENT

ಪ್ರಯೋಗಕ್ಕೆ ಒಗ್ಗಿಕೊಂಡ ರಾಗಿಣಿ

ಕೆ.ಎಚ್.ಓಬಳೇಶ್
Published 3 ಮೇ 2018, 19:30 IST
Last Updated 3 ಮೇ 2018, 19:30 IST
ರಾಗಿಣಿ ದ್ವಿವೇದಿ
ರಾಗಿಣಿ ದ್ವಿವೇದಿ   

ನಟಿ ರಾಗಿಣಿ ದ್ವಿವೇದಿ ಗ್ಲಾಮರ್‌ ಬೆಡಗಿ. ‘ತುಪ್ಪಾ ಬೇಕಾ ತುಪ್ಪಾ...’ ಹಾಡಿನಲ್ಲಿನ ಅವರ ಕುಣಿತಕ್ಕೆ ಪಡ್ಡೆ ಹುಡುಗರು ನಿದ್ದೆಗೆಟ್ಟಿದ್ದು ಉಂಟು. ‘ರಾಗಿಣಿ ಐಪಿಎಸ್’ ಚಿತ್ರದ ಮೂಲಕ ನಾಯಕಿ ಪ್ರಧಾನ ಚಿತ್ರಗಳತ್ತ ಅವರ ಚಿತ್ತ ಹೊರಳಿತು. ‘ಕಿಚ್ಚು’ ಚಿತ್ರದ ಮೂಲಕ ಈಗ ಪ್ರಯೋಗಾತ್ಮಕ ಹಾದಿಯಲ್ಲಿ ಹೆಜ್ಜೆ ಇಟ್ಟಿದ್ದಾರೆ. ಈ ಚಿತ್ರ ತನ್ನೊಳಗಿನ ನೈಜ ಪ್ರತಿಭೆಗೆ ಕನ್ನಡಿ ಹಿಡಿಯಲಿದೆ ಎಂಬುದು ಅವರ ನಂಬಿಕೆ. ಅವರೊಂದಿಗೆ ನಡೆಸಿದ ಮಾತುಕತೆಯ ಅಕ್ಷರರೂಪ ಇಲ್ಲಿದೆ.

* ಗ್ಲಾಮರ್‌ನಿಂದ ಪ್ರಯೋಗಾತ್ಮಕ ಚಿತ್ರಗಳತ್ತ ಹೊರಳಿದ್ದು ಏಕೆ?
ವರ್ಷಕ್ಕೆ ಇಂತಿಷ್ಟು ಸಿನಿಮಾ ಮಾಡಬೇಕೆಂಬ ಲೆಕ್ಕಾಚಾರ ನನ್ನದಲ್ಲ. ನನ್ನ ಇತಿಮಿತಿ ಬಗ್ಗೆ ನನಗೆ ಸಂಪೂರ್ಣ ಅರಿವಿದೆ. ನಟಿಯಾಗಿ ಒಂದೇ ತೆರೆನಾದ ಸಿನಿಮಾ ಮಾಡುವುದು ಸರಿಯಲ್ಲ. ಪ್ರಯೋಗಾತ್ಮಕ ಚಿತ್ರಗಳಿಗೆ ನಾವು ಒಗ್ಗಿಕೊಳ್ಳಬೇಕು. ಆಗ ಮಾತ್ರ ನಟನೆಯಲ್ಲಿ ಖುಷಿ ಸಿಗಲಿದೆ. ಕೇವಲ ಕಮರ್ಷಿಯಲ್‌ ಸಿನಿಮಾಗಳಿಗೆ ಸೀಮಿತರಾಗಬಾರದು. ‘ಕಿಚ್ಚು’ ಭಿನ್ನವಾದ ಚಿತ್ರ. ಇದರಲ್ಲಿ ನನ್ನ ಪಾತ್ರವೂ ವಿಶಿಷ್ಟವಾಗಿದೆ. ನನ್ನಲ್ಲಿನ ನಟನೆಗೆ ಇದು ವೇದಿಕೆ ಕಲ್ಪಿಸಿದೆ.

*ಹಲವು ತಿಂಗಳ ಬಳಿಕ ತೆರೆಯ ಮೇಲೆ ಬರುತ್ತಿರುವುದಕ್ಕೆ ಏನನಿಸುತ್ತಿದೆ?
ಕನ್ನಡ ಚಿತ್ರರಂಗ ಪ್ರವೇಶಿಸಿ ಎಂಟು ವರ್ಷ ಕಳೆಯಿತು. ಒಂದೂವರೆ ವರ್ಷದ ಬಳಿಕ ಜನರ ಮುಂದೆ ಬರುತ್ತಿದ್ದೇನೆ. ಈ ವರ್ಷ ನಾನು ನಟಿಸಿರುವ ಸಾಲು ಸಾಲು ಸಿನಿಮಾಗಳು ತೆರೆಕಾಣುತ್ತಿವೆ. ಪ್ರತಿ ಚಿತ್ರದಲ್ಲೂ ನನ್ನ ಪಾತ್ರ ಭಿನ್ನವಾಗಿದೆ. ಸಮಯದ ಅಂತರ ಕಾಯ್ದುಕೊಂಡು ಚಿತ್ರಗಳನ್ನು ಬಿಡುಗಡೆ ಮಾಡುವುದು ಒಳ್ಳೆಯದು ಅನಿಸುತ್ತದೆ. ಆಗ ಅಭಿಮಾನಿಗಳು ಮತ್ತು ಪ್ರೇಕ್ಷಕರಿಗೆ ನನ್ನ ಪಾತ್ರಗಳ ಮಹತ್ವದ ಬಗ್ಗೆ ಅರಿವಾಗಲಿದೆ.

ADVERTISEMENT

* ಕಿರುತೆರೆಯ ತೀರ್ಪುಗಾರರಾಗಿದ್ದು ಖುಷಿ ಕೊಟ್ಟಿದೆಯೇ?
ಕಿರುತೆರೆಯ ವ್ಯಾಪ್ತಿ ವಿಸ್ತರಿಸಿದೆ. ಟಿ.ವಿ. ಕಾರ್ಯಕ್ರಮಗಳ ಮೂಲಕ ಹೆಚ್ಚು ವೀಕ್ಷಕರನ್ನು ತಲುಪಲು ಸಾಧ್ಯ. ನಾನು ತೀರ್ಪುಗಾರ್ತಿಯಾಗಿದ್ದ ಕಾಮಿಡಿ ಕಾರ್ಯಕ್ರಮ ಖುಷಿ ಕೊಟ್ಟಿತು. ಹೆಚ್ಚು ಸಂಚಿಕೆಗಳಿರುವ ರಿಯಾಲಿಟಿ ಶೋಗಳನ್ನು ಒಪ್ಪಿಕೊಳ್ಳುವುದಿಲ್ಲ. ಈಗಾಗಲೇ, ವಾಹಿನಿಗಳಲ್ಲಿ ಡಾನ್ಸ್‌ ಮತ್ತು ಕಾಮಿಡಿ ಕಾರ್ಯಕ್ರಮಗಳೇ ಹೆಚ್ಚಿವೆ. ವಿಭಿನ್ನವಾದ ರಿಯಾಲಿಟಿ ಶೋಗಳಲ್ಲಿ ಪಾಲ್ಗೊಳ್ಳಲು ಅವಕಾಶ ಬಂದಿದೆ. ಈ ಕುರಿತು ಎರಡು ಕನ್ನಡ ವಾಹಿನಿಗಳೊಂದಿಗೆ ಚರ್ಚೆ ನಡೆಯುತ್ತಿದೆ.

*ಕಾಸ್ಟಿಂಗ್‌ ಕೌಚ್‌ ಬಗ್ಗೆ ನಿಮ್ಮ ಅಭಿಪ್ರಾಯ ಏನು?
ಇದೊಂದು ಕೆಟ್ಟ ಸಂಸ್ಕೃತಿ. ಎರಡು ಕೈ ಸೇರಿದರೆ ಮಾತ್ರ ಚಪ್ಪಾಳೆ ಸಾಧ್ಯ. ನನಗೆ ಅಂತಹ ಅನುಭವವಾಗಿಲ್ಲ. ನನ್ನದು ಶಿಸ್ತಿನ ಜೀವನ. ನನ್ನ ಇತಿಮಿತಿಯಲ್ಲಿ ನಟಿಸುತ್ತೇನೆ. ಇಂತಹ ಘಟನೆಗಳ ಬಗ್ಗೆ ವಿಷಾದವಿದೆ. ನಿರ್ಮಾಪಕರು, ನಿರ್ದೇಶಕರು, ನಟರನ್ನು ನಿಂದನೆ ಮಾಡುವುದು ಸರಿಯಲ್ಲ. ಕಾಸ್ಟಿಂಗ್‌ ಕೌಚ್‌ ಬಗ್ಗೆ ಚರ್ಚೆಯಾಗುತ್ತಿರುವುದು ಒಳ್ಳೆಯ ಬೆಳವಣಿಗೆ. ಆ ಮೂಲಕವಾದರೂ ಸಿನಿಮಾ ಕ್ಷೇತ್ರದಲ್ಲಿ ಜಾಗೃತಿ ಹೆಚ್ಚಲಿದೆ. ಸಂತ್ರಸ್ತರು ಸುಮ್ಮನೆ ಕುಳಿತುಕೊಳ್ಳಬಾರದು. ಕಾನೂನಾತ್ಮಕ ಹೋರಾಟಕ್ಕೆ ಮುಂದಾಗುವುದು ಒಳಿತು. ಕಲಾವಿದರಲ್ಲಿ ಜಾಗೃತಿ ಇಮ್ಮಡಿಗೊಂಡಾಗ ಮಾತ್ರ ಕಾಸ್ಟಿಂಗ್‌ ಕೌಚ್‌ಗೆ ಕಡಿವಾಣ ಬೀಳಲಿದೆ.

*ನಿಮ್ಮ ಮುಂದಿನ ಸಿನಿಮಾಗಳ ಬಗ್ಗೆ ಹೇಳಿ.
‘ದಿ ಟೆರರಿಸ್ಟ್‌’ ಚಿತ್ರ ಪೂರ್ಣಗೊಂಡಿದೆ. ಶೀಘ್ರವೇ, ನಟ ಶರಣ್‌ ಅವರೊಂದಿಗೆ ಕಾಮಿಡಿ ಚಿತ್ರವೊಂದರಲ್ಲಿ ಅಭಿನಯಿಸುತ್ತಿದ್ದೇನೆ. ಚಂದನವನ ನನಗೆ ಖುಷಿ ಕೊಟ್ಟಿದೆ. ಬೇರೆ ಭಾಷೆಗಳಲ್ಲಿ ನಟಿಸಬೇಕೆಂಬ ತೀವ್ರ ಹಂಬಲವಿಲ್ಲ. ಆದರೆ, ಪಂಜಾಬಿ ಚಿತ್ರವೊಂದರಲ್ಲಿ ನಟಿಸುವಂತೆ ಅವಕಾಶ ಬಂದಿದೆ. ಮುಂದಿನ ತಿಂಗಳು ಮಲಯಾಳ ಭಾಷೆಯ ಚಿತ್ರವೊಂದರಲ್ಲಿ ನಟಿಸುವ ಕುರಿತು ಚರ್ಚೆಯಲ್ಲಿದ್ದೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.