ADVERTISEMENT

ಪ್ರೀತಿಪಾಠದ ಮನಸಾಲಜಿ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2011, 19:30 IST
Last Updated 15 ಸೆಪ್ಟೆಂಬರ್ 2011, 19:30 IST

ಟೈಂಪಾಸ್ ಪ್ರೀತಿಯಲ್ಲಿ ಬೀಳುವವರು, ಫ್ಲರ್ಟ್ ಮಾಡುವ ಯುವಕರು ಈ ಕಾಲಮಾನದಲ್ಲಿ ಉಂಟು. ಅಂಥವರಿಗೆ ನಿಜವಾದ ಪ್ರೀತಿ ಯಾವುದು ಎಂಬುದನ್ನು ತಮ್ಮ `ಮನಸಾಲಜಿ~ ಚಿತ್ರ ತಿಳಿಸುತ್ತದೆಂದು ಹೇಳಿದರು ನಿರ್ದೇಶಕ ದೀಪಕ್ ಅರಸ್. ಈ ವಾರ ಬಿಡುಗಡೆಯಾಗಬೇಕಿದ್ದ ತಮ್ಮ ಸಿನಿಮಾ ಥಿಯೇಟರ್ ಸಮಸ್ಯೆಯಿಂದ ಮುಂದಕ್ಕೆ ಹೋಗಿರುವುದಕ್ಕೆ ಅವರಿಗೆ ಬೇಸರವಾಗಿತ್ತು.

ನಾಯಕ ರಾಕೇಶ್ ಅವರಿಗೆ ಇದು ನಾಯಕನಾಗಿ ಮೊದಲ ಸಿನಿಮಾ. `ಹೀರೊ   ಬಿಲ್ಡ್‌ಅಪ್‌ಗಳಿಲ್ಲದ ಸಹಜ ಪಾತ್ರ ನನ್ನದು. ಯುವಕರಿಗೆ ಇದು ಇಷ್ಟವಾಗಲಿದೆ. ಅವರು ನನ್ನ ಪಾತ್ರದಲ್ಲಿ ತಮ್ಮನ್ನೇ ಕಾಣುತ್ತಾರೆ.
 
ಚಿತ್ರದಲ್ಲಿ ಬ್ಯಾಂಡ್ ಸಂಗೀತಗಾರರು ತೊಡುವ ಬಟ್ಟೆಗಳನ್ನು ನಾನು ತೊಟ್ಟಿರುವುದು ವಿಶೇಷ. ನನಗೆ ರ‌್ಯಾಪ್ ಸಂಗೀತ ಬರುತ್ತದೆ. ಚಿತ್ರದಲ್ಲೂ ನನಗೆ ರ‌್ಯಾಪ್ ಸಂಗೀತಗಾರನ ಪಾತ್ರ ಸಿಕ್ಕಿದೆ~ ಎಂದು  ಅವರು ಆನಂದತುಂದಿಲರಾದರು.

ನಾಯಕಿ ಅಮೂಲ್ಯ ಪ್ರಬುದ್ಧ ಹುಡುಗಿಯಾಗಿ ನಟಿಸಿದ್ದಾರೆ. ಅಮ್ಮನಿಲ್ಲದ ಹುಡುಗಿಯಾಗಿ, ಅಪ್ಪನ ಪ್ರೀತಿಯಲ್ಲಿ ಮಿಂದು, ಅಪ್ಪನೊಂದಿಗೆ ಗೆಳೆತನ ಕಾಯ್ದುಕೊಂಡು, ತನ್ನ ಪ್ರೀತಿಯನ್ನು ಮೊದಲು ಅಪ್ಪನಿಗೆ ಅರುಹುವ ಬೇರೆ ರೀತಿಯ ಪಾತ್ರದಲ್ಲಿ ನಟಿಸಿರುವುದಾಗಿ ಅವರು ಹೇಳಿಕೊಂಡರು. `ಒಂದು ವಯಸ್ಸಿನಲ್ಲಿ ಎಲ್ಲರಿಗೂ ಆಗುವ ಪ್ರೀತಿಯನ್ನು ಅಪ್ಪ-ಅಮ್ಮನಿಗೆ ಹೇಳುವಷ್ಟು ಆತ್ಮೀಯತೆ ಇರಬೇಕು~ ಎಂಬುದು ಅವರ ಅಭಿಪ್ರಾಯ.

ಚಿತ್ರದ ಹಾಡುಗಳು ಮತ್ತು ಕ್ಲೈಮ್ಯಾಕ್ಸ್‌ಅನ್ನು ಮರುಚಿತ್ರೀಕರಣ ಮಾಡಿದ್ದರಿಂದ ಮತ್ತು ಸಿಜಿ, ಡಿಐ ತಂತ್ರಜ್ಞಾನ ಅಳವಡಿಕೆಯಿಂದ 1.25 ಕೋಟಿ ಎಂದುಕೊಂಡಿದ್ದ ಬಜೆಟ್ 2 ಕೋಟಿಯ ಅಂಚಿಗೆ ಬಂತು ಎಂದ ನಿರ್ದೇಶಕರು, `ಅಚ್ಚುಮೆಚ್ಚು.. ಪ್ರೀತಿ ಹುಚ್ಚು..~ ಹಾಡನ್ನು ಬೀದರ್ ಕೋಟೆಯಲ್ಲಿ ಚಿತ್ರೀಕರಿಸಿದ್ದನ್ನು ನೆನಪಿಸಿಕೊಂಡರು. ಕವಿ ಜಿ.ಪಿ.ರಾಜರತ್ನಂ ಅವರ `ನರಕಕ್ಕೆ ಇಳ್ಸಿ..~ ಸಾಲನ್ನು ರ‌್ಯಾಪ್ ಶೈಲಿಯಲ್ಲಿ ಬಳಸಿಕೊಂಡಿದ್ದನ್ನೂ ಹೇಳಿದರು.

ಈಗಾಗಲೇ ಚಿತ್ರತಂಡ ಕಾಲೇಜುಗಳಲ್ಲಿ ಸಿನಿಮಾದ ಪ್ರಚಾರ ಆರಂಭಿಸಿದೆ. ಚಾನೆಲ್‌ಗೂ ಚಿತ್ರದ ಹಕ್ಕು ಮಾರಾಟವಾಗಿದೆ. ಆದರೂ ಸಿನಿಮಾವನ್ನು ಪ್ರೇಕ್ಷಕರು ನೋಡಿ ಮೆಚ್ಚಬೇಕು ಎಂಬುದು ನಿರ್ದೇಶಕರ ಮಹದಾಸೆ.  

 ಈ ಮೊದಲು `ಹಾಗೆ ಸುಮ್ಮನೆ~ ಚಿತ್ರಕ್ಕೆ ಮಾತು ಹೊಸೆದಿದ್ದ ಅಶೋಕ್ `ಮನಸಾಲಜಿ~ಗೆ ಮಾತು ಬರೆದಿದ್ದಾರೆ. ತಾವು ಇಂಗ್ಲಿಷ್ ತುರಕದೆ ಹೆಚ್ಚು ಕನ್ನಡವನ್ನೇ ಬಳಸಿಕೊಂಡು ಸಂಭಾಷಣೆ ಬರೆದಿರುವುದಾಗಿ ಹೇಳಿದ ಅವರಿಗೆ ವಿಶೇಷ ಪ್ರಯೋಗಕ್ಕಿಂತ ಸಹಜ ಮಾತುಗಳೇ ಇಷ್ಟವಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.