ADVERTISEMENT

ಪ್ರೇಮದ ಲೈಫು

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2011, 19:30 IST
Last Updated 24 ಮಾರ್ಚ್ 2011, 19:30 IST
ಪ್ರೇಮದ ಲೈಫು
ಪ್ರೇಮದ ಲೈಫು   

ಒಂಥರ ಮನೆ ಮಟ್ಟಿಗಿನ ಸಮಾರಂಭದಂತಿದ್ದ ಸಿನಿಮಾ ಮುಹೂರ್ತ. ನೋಡಲು ಸರಳವಾಗಿ ಕಾಣುವ, ತಲೆಯಲ್ಲಿ ಹುಳ ಬಿಡಬಲ್ಲ ಜಾಣ ಎನ್ನಿಸಿಕೊಂಡಿರುವ ಪವನ್ ಕುಮಾರ್ ಫ್ರೆಂಚ್ ಗಡ್ಡ ಬಿಟ್ಟಿದ್ದರು. ಕೆಲವೇ ವರ್ಷಗಳ ಹಿಂದೆ ಇಂಗ್ಲಿಷ್ ಲಿಟ್ಲ್ ಥಿಯೇಟರ್‌ನ ಚುಂಗುಹಿಡಿದು ಓಡಾಡುತ್ತಿದ್ದ ಅವರೀಗ ಸಿನಿಮಾ ಪೀತಾಂಬರವನ್ನು ಉಡಿಸಲು ನಿಂತಿದ್ದಾರೆ. ಚಿತ್ರದ ಹೆಸರು ‘ಲೈಫು ಇಷ್ಟೇನೆ’.

‘ಪಂಚರಂಗಿ’ ಚಿತ್ರೀಕರಣ ನಡೆಯುವಾಗ ದಿಗಂತ್ ಹೇಳಿದ ಕಿವಿಮಾತಿನಿಂದ ಪ್ರಭಾವಿತರಾಗಿ ಪವನ್ ಸ್ಕ್ರಿಪ್ಟ್ ಮಾಡಿದರಂತೆ. ನೀವು ನಿರ್ದೇಶಕರಾಗಿ ಎಂದು ಆಗ ಹೇಳಿದ್ದ ದಿಗಂತ್, ಈಗ ಅವರ ಚಿತ್ರಕ್ಕೂ ನಾಯಕನಾಗುತ್ತಿರುವುದು ವಿಶೇಷ. ತುಸು ಹೆಚ್ಚೇ ಗಡ್ಡ ಬಿಟ್ಟಿದ್ದ ಅವರು ಏನು ಪಾತ್ರ ನಿಭಾಯಿಸುತ್ತಾರೆಂಬುದು ಕುತೂಹಲ. ಪ್ರೀತಿಯ ಖುಷಿ-ದುಃಖ, ಕೆಲಸ ಹೋದಾಗಿನ ಸಂಕಟ, ಎದುರಲ್ಲಿ ಕಾಣುವ ಆಶಾವಾದ ಎಲ್ಲವನ್ನೂ ಬೆಸೆದು ಪವನ್ ಕುಮಾರ್ ಸ್ಕ್ರಿಪ್ಟ್ ಬರೆದಿದ್ದಾರೆ. ಸಮಕಾಲೀನ ಯುವಕರ ತಾಕಲಾಟಗಳಿಗೆ ವಿಡಂಬನೆಯ ಲೇಪ ಕೊಟ್ಟು ಹೇಳುವುದು ಅವರ ಉದ್ದೇಶ.

ಚಿತ್ರಕ್ಕೆ ಇಬ್ಬರು ನಾಯಕಿಯರು. ನಟಿ ಸುಧಾ ಬೆಳವಾಡಿ ಪುತ್ರಿ ಸಂಯುಕ್ತ ಹೊರನಾಡು ಅವರಲ್ಲಿ ಒಬ್ಬರು. ನಿಜ ಬದುಕಿನಲ್ಲಿ ತಾವು ಇರುವಂತೆಯೇ ಪಾತ್ರವೂ ಇರುವುದರಿಂದ ಅವರಿಗೆ ಸಂತೋಷವಾಗಿದೆ. ಮನೆಯೇ ತಮ್ಮ ಅಭಿನಯದ ಶಾಲೆ ಎನ್ನುವ ಅವರಿಗೆ ಪವನ್ ಕೂಡ ನಟನೆಯ ಟಿಪ್ಸ್ ಕೊಟ್ಟಿದ್ದಾರೆ. ಇನ್ನೊಬ್ಬ ನಾಯಕಿ ಸಿಂಧು. ‘ಮರೆಯಲಾರೆ’ ಚಿತ್ರದಲ್ಲಿ ಈಗಾಗಲೇ ನಾಯಕಿಯಾಗಿ ನಟಿಸಿರುವ ಅವರನ್ನು ಹಾಗೇ ದಾರಿಯಲ್ಲಿ ಸಾಗುವಾಗ ನೋಡಿ ಪವನ್ ಆಯ್ಕೆ ಮಾಡಿದರಂತೆ.

ಪವನ್ ಕುಮಾರ್ ನಿರ್ದೇಶನದ ಕನಸಿಗೆ ನೀರೆರೆಯಲು ನಿಂತಿರುವ ನಿರ್ಮಾಪಕರು ಜಾಕ್ ಮಂಜು, ಯೋಗರಾಜ್ ಭಟ್, ಸೈಯದ್ ಸಲಾಮ್ ಹಾಗೂ ಉಪೇಂದ್ರ ಶೆಟ್ಟಿ. ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಸೈಯದ್ ಅಮಾನ್ ಅವರ ಒಂದು ಎಕರೆ ಜಾಗದ ನಡುವಿನ ಮನೆಯಲ್ಲಿ ಚಿತ್ರೀಕರಣ ನಡೆಯುತ್ತಿತ್ತು. ಜ್ಞಾನೇಂದ್ರ ಭುಜದ ಮೇಲೆ ಕ್ಯಾಮೆರಾ ಹಿಡಿದು ನಿರ್ದೇಶಕರ ಆ್ಯಕ್ಷನ್, ಕಟ್‌ಗೆ ಸ್ಪಂದಿಸುತ್ತಿದ್ದರು.

ತಮ್ಮ ಮಾತು ಕೇಳಿ ಆಮೇಲೆ ಸ್ಕ್ರಿಪ್ಟ್ ಮಾಡಿಕೊಂಡು ಬಂದ ಪವನ್ ಕುಮಾರ್ ಪ್ರತಿಭೆಯ ಬಗ್ಗೆ ದಿಗಂತ್‌ಗೆ ಅಪಾರ ವಿಶ್ವಾಸ. ‘ಪಂಚರಂಗಿ’ಯಲ್ಲಿರುವಂತೆ ಈ ಚಿತ್ರದಲ್ಲಿ ತಮ್ಮ ಪಾತ್ರ ಹಮ್ಮಿನಿಂದ ಮಾತನಾಡುವುದಿಲ್ಲ ಎಂಬುದು ಅವರ ಸ್ಪಷ್ಟನೆ. ಯೋಗರಾಜ ಭಟ್ ಅವರಿಗೂ ಪವನ್ ಒಳ್ಳೆಯ ಸಿನಿಮಾ ಕೊಡುತ್ತಾರೆಂಬ ವಿಶ್ವಾಸವಿದೆ. 
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.