ADVERTISEMENT

ಪ್ರೇಮಾಂಜಲಿ ಗೀತಾಂಜಲಿ

​ಪ್ರಜಾವಾಣಿ ವಾರ್ತೆ
Published 23 ಜನವರಿ 2014, 19:30 IST
Last Updated 23 ಜನವರಿ 2014, 19:30 IST

‘‘ಈ  ಸಿನಿಮಾ ‘ಇಂತಿ ನಿನ್ನ ಪ್ರೀತಿಯ’ ಮತ್ತು ‘ಸಂಜು ವೆಡ್ಸ್ ಗೀತಾ’ ಚಿತ್ರಗಳನ್ನು ನೆನಪಿಸುತ್ತಿದೆ’’ ಎಂದರು ಶ್ರೀನಗರ ಕಿಟ್ಟಿ. ‘ಇಂತಿ ನಿನ್ನ...’ದ ಕುಡಿತದ ಸನ್ನಿವೇಶವನ್ನು ನೆನಪಿಸುವಂತೆ ಚಿತ್ರ ಆರಂಭವಾಗುತ್ತದೆ. ಇನ್ನು ‘ಸಂಜು ವೆಡ್ಸ್‌ ಗೀತಾ’ದ ಗೀತಾ ಹೆಸರಿನ ಪಾತ್ರವೂ ಈ ಚಿತ್ರದಲ್ಲಿದೆ. ಕಥೆಯೂ ಈ ಎರಡೂ ಚಿತ್ರಗಳಂತೆ ಮಧುರ ಪ್ರೇಮವನ್ನು ಬಿಂಬಿಸುತ್ತದೆ ಎಂದು ಕಿಟ್ಟಿ ತಮ್ಮ ಹಿಂದಿನ ಚಿತ್ರಗಳಿಗೆ ‘ಗೀತಾಂಜಲಿ’ಯನ್ನು ಹೋಲಿಸಿದರು.

‘ಗೀತಾಂಜಲಿ’ಯ ಕಥನದ ಎಳೆಯ ಊಹೆ ಸಲೀಸು. ಗೀತಾ ಮತ್ತು ಅಂಜಲಿ ಎನ್ನುವ ಇಬ್ಬರು ಯುವತಿಯರ ನಡುವೆ ಇರುವ ಬಿಂದು ಕಿಟ್ಟಿಯ ಪಾತ್ರ. ಕಥೆಯನ್ನು ಗುಟ್ಟಾಗಿ ಇರಿಸಿಕೊಳ್ಳುವುದು ನಿರ್ದೇಶಕ ರಾಜಶೇಖರ್‌ ಉದ್ದೇಶ. ಮಾತಿಗೆ ಶುರುವಿಟ್ಟ ಕಲಾವಿದರಿಗೆ ಸುದ್ದಿಗೋಷ್ಠಿಯಲ್ಲಿಯ ನಡುವೆಯೇ ಕಥೆ ಹೇಳಬೇಡಿ ಎಂಬ ಸೂಚನೆ ನೀಡಿದರು. ‘ಈ ಸಂಭಾಷಣೆ’ ಎಂಬ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದ ರಾಜಶೇಖರ್‌, ಮೂರು ವರ್ಷಗಳ ಅಂತರದ ಬಳಿಕ ಮತ್ತೆ ನಿರ್ದೇಶಕನ ಟೊಪ್ಪಿ ಧರಿಸಿದ್ದಾರೆ. ಇದೊಂದು ಸರಳ ಮತ್ತು ತಿರುವುಗಳಿಂದ ಕೂಡಿರುವ ಪ್ರೇಕ್ಷಕರನ್ನು ಕಾಡಿಸುವ ಪ್ರೇಮಕಥನ ಎಂದಷ್ಟೇ ಅವರು ಚಿತ್ರದ ಬಗ್ಗೆ ಬಿಟ್ಟುಕೊಟ್ಟ ಗುಟ್ಟು.

ಶ್ರೀಮಂತ ಕುಟುಂಬದ ಯುವಕನಾಗಿ ಕಿಟ್ಟಿ ನಟಿಸುತ್ತಿದ್ದಾರೆ. ಮದ್ಯದ ಬಾಟಲಿಯೊಂದಿಗೆ ಕಾಣಿಸಿಕೊಂಡರೂ ದೇವದಾಸನಲ್ಲ ಎಂದರು ಕಿಟ್ಟಿ. ಗೀತಾ ಮತ್ತು ಅಂಜಲಿ ಎರಡೂ ಪಾತ್ರಗಳಾಗಿ ಕಾಣಿಸಿಕೊಳ್ಳುತ್ತಿರುವುದು ನಿಖಿತಾ ನಾರಾಯಣ್‌. ಮೈಸೂರು ಮೂಲದ ನಿಖಿತಾ, ಹಲವು ತೆಲುಗು ಚಿತ್ರಗಳಲ್ಲಿ ನಟಿಸಿ ಅನುಭವ ಗಿಟ್ಟಿಸಿಕೊಂಡವರು. ಕನ್ನಡದಲ್ಲಿ ಅವರಿಗಿದು ಮೊದಲ ಚಿತ್ರ. ನಟಿ ಸನಾತನಿ ಮತ್ತೊಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

‘ಆಶಾಕಿರಣಗಳು’ ಎಂಬ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಹಣ ಹೂಡಿದ್ದ ಲಕ್ಷ್ಮಣ್‌ ನಾಯಕ್‌, ಈ ಚಿತ್ರಕ್ಕೂ ಬಂಡವಾಳ ಹೂಡುವ ಜೊತೆಗೆ ಕಥೆ ಹಾಗೂ ಚಿತ್ರಕಥೆ, ಸಂಭಾಷಣೆಯನ್ನೂ ಒದಗಿಸಿದ್ದಾರೆ. ಮಧುರ ಹಾಡುಗಳಿಗೆ ರಾಜಶೇಖರ್‌ ಆದ್ಯತೆ ನೀಡಿದ್ದಾರಂತೆ. ಅವರ ಅಭಿರುಚಿಗೆ ಪೂರಕವಾಗಿ ಗುರುಕಿರಣ್‌ ಸಂಗೀತ ಹೊಸೆದಿದ್ದಾರೆ. 
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.