ADVERTISEMENT

ಪ್ರೇಮಿಗಳ ದಿನ ಚಂದ್ರಮ ಗಾನ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2011, 19:30 IST
Last Updated 17 ಫೆಬ್ರುವರಿ 2011, 19:30 IST

‘ಪ್ರಪಂಚದಲ್ಲಿ ಎಲ್ಲದಕ್ಕೂ ಪರ್ಯಾಯ ಬಂದು ಬಿಟ್ಟಿದೆ. ಅದನ್ನೇ ಆಧಾರವಾಗಿಟ್ಟುಕೊಂಡು ಹೆಣ್ಣಿಗೂ ಪರ್ಯಾಯ ಹುಡುಕುವಾಸೆಯಿಂದ ‘ಪ್ರೇಮ ಚಂದ್ರಮ’ ಕತೆ ಹುಟ್ಟಿತು’ ಎಂದರು ನಿರ್ದೇಶಕ ಶಾಹುರಾಜ್ ಶಿಂಧೆ.

‘ಅರ್ಥವಾಗಲಿಲ್ಲ...’  ಎಂದವರಿಗೆ ಮತ್ತೊಮ್ಮೆ ಅವರು,  ‘ಒಮ್ಮೆ ಮದುವೆಯಾದ ಹೆಣ್ಣು ಗಂಡನನ್ನು ಕಳೆದುಕೊಂಡ ನಂತರವೂ ಇನ್ನೊಬ್ಬ ವ್ಯಕ್ತಿಯನ್ನು ಮದುವೆಯಾಗಲು ಅವಕಾಶ ನೀಡಬೇಕು ಎಂಬುದೇ ತಮ್ಮ ಸಂದೇಶ’ ಎಂದು ವಿಷಯವನ್ನು ಕೊಂಚ ಸ್ಪಷ್ಟಪಡಿಸಿದರು.
‘ಅಂದರೆ ಅದು ವಿಧವಾ ವಿವಾಹವೇ’ ಮತ್ತೊಂದು ಪ್ರಶ್ನೆ ಹೊಮ್ಮಿತು.

‘ಹೆಣ್ಣು ದೇವತೆ. ಆ ದೇವತೆಯನ್ನು ಕೀಳಾಗಿ ಕಾಣದೇ ಮತ್ತೊಬ್ಬರೊಂದಿಗೆ ಬದುಕಲು ಅವಕಾಶ ಮಾಡಿಕೊಂಡಬೇಕು’.
ಹೀಗೆ ಪ್ರಶ್ನೋತ್ತರದ ಸರಣಿ ಕಳೆಗಟ್ಟುವ ಹೊತ್ತಿಗೇ  ‘ಪ್ರೇಮಚಂದ್ರಮ’ ಚಿತ್ರದ ಆಡಿಯೋ ಬಿಡುಗಡೆಗೆ ಮುಖ್ಯ ಅತಿಥಿಯಾಗಿ ಪುನೀತ್ ರಾಜ್‌ಕುಮಾರ್ ಆಗಮಿಸಿದರು. ತಕ್ಷಣ ಗುಂಪು ಚದುರಿತು. ಮಾತು ಅರ್ಧಕ್ಕೇ ಮೊಟಕಾಯಿತು.

ಈ ಮೊದಲು ‘ಸ್ನೇಹಾನಾ ಪ್ರೀತಿನಾ’, ‘ಅರ್ಜುನ್’ ಚಿತ್ರಗಳನ್ನು  ನಿರ್ದೇಶಿಸಿದ್ದ ಶಾಹುರಾಜ್ ಶಿಂಧೆ  ‘ಪ್ರೇಮ ಚಂದ್ರಮ’ಕ್ಕೆ ಆ್ಯಕ್ಷನ್, ಕಟ್ ಹೇಳಿದ್ದಾರೆ.

ಗಡಿಬಿಡಿಯಲ್ಲಿ ಬಂದ ಪುನೀತ್ ರಾಜ್‌ಕುಮಾರ್, ಎಲ್ಲರ ಕಡೆಗೂ ನಗೆ ಬೀರಿ ಕೊಂಚ ಕಾಫಿ ಹೀರಿ ವೇದಿಕೆ ಮೇಲೇರಿ, ತಡವಾಗಿ ಬಂದ ರಾಕ್‌ಲೈನ್ ವೆಂಕಟೇಶ್ ಜೊತೆ ಸೇರಿ ಸೀಡಿ ಬಿಡುಗಡೆ ಮಾಡಿದರು.

ಆಗ ಮಾತನಾಡಿದ ನಿರ್ದೇಶಕರು, ಅರ್ಧಕ್ಕೆ ನಿಂತ ಮಾತನ್ನು ಅವರು ಮುಂದುವರಿಸಲು ಇಷ್ಟಪಡದೇ ‘ಐದು ಹಾಡುಗಳಿಗೆ ಸಂಗೀತ ನಿರ್ದೇಶಕ ಹರಿಕೃಷ್ಣ ಒಳ್ಳೆಯ ರಾಗ ಸಂಯೋಜನೆ ಮಾಡಿದ್ದಾರೆ’ ಎಂದಷ್ಟೇ ಹೇಳಿದರು.

ನಾಯಕ ರಘು ಮುಖರ್ಜಿ, ಈ ಸಿನಿಮಾ ಚೆನ್ನಾಗಿ ಓಡಿದರೆ ನಮಗೂ ಒಳ್ಳೆಯ ಸಿನಿಮಾಗಳನ್ನು ಮಾಡುವ ಅವಕಾಶಗಳು ಸಿಗುತ್ತವೆ’ ಎನ್ನುತ್ತಾ ನಗೆ ಬೀರಿದರು.

‘ಹಾಗೇ ಸುಮ್ಮನೆ’ ಚಿತ್ರ ನೋಡಿ ತಮಗೆ ಅವಕಾಶ ನೀಡಿದ ನಿರ್ಮಾಪಕರಿಗೆ ವಂದಿಸಿದವರು ಕಿರಣ್. ಸಮಾರಂಭದಲ್ಲಿ ನಿರ್ಮಾಪಕರಾದ ಜಿ.ಕೃಷ್ಣಪ್ಪ. ವಿ.ಈ.ಗಣೇಶ್, ಜಿ.ಎಸ್.ಜಗದೀಶ್, ಸುನೀಲ್‌ಕುಮಾರ್ ಶಿಂಧೆ ಇದ್ದರು.

ಆನಂದ್ ಆಡಿಯೋ ಶ್ಯಾಮ್ ಅವರಿಗೆ ಹರಿಕೃಷ್ಣ ಸಂಗೀತ ನೀಡಿರುವ ಚಿತ್ರದ ಹಾಡುಗಳು ಇಷ್ಟವಾಗಿವೆಯಂತೆ.
ಅಂದಹಾಗೆ, ಪ್ರೇಮಿಗಳ ದಿನದಂದು ‘ಪ್ರೇಮ ಚಂದ್ರಮ’ ಸೀಡಿ ಬಿಡುಗಡೆ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದು ಚಿತ್ರತಂಡ ಪುಳಕಗೊಂಡಿತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT