ಕರಿಮೋಡ ಕರಗಿ ಪೂರ್ಣಚಂದಿರ ಹಾಲುಬೆಳದಿಂಗಳು ಚೆಲ್ಲುವ ಹೊತ್ತು. ಗಾಢ ಬೆಳಕಿತ್ತು, ನಿಜ. ಆದರೆ ಅದರ ನಡುವೆಯೂ ಎದ್ದುಕಂಡದ್ದು ಮುನಿಸಿಕೊಂಡ ಇನ್ನರ್ಧ ಚಂದ್ರನ ಗೈರುಹಾಜರಿ.
ಸುದ್ದಿಗೋಷ್ಠಿಯಲ್ಲಿ ಅರ್ಧ ಚಂದ್ರನ ಅನುಪಸ್ಥಿತಿಗೆ ತಾನು ಹೊಣೆಯಲ್ಲ. ತಮ್ಮಿಬ್ಬರ ಮಧ್ಯೆ ವಿರಸವೂ ಇಲ್ಲ ಎಂಬ ಸ್ಪಷ್ಟನೆ `ಚಂದ್ರ'ನ ಸೃಷ್ಟಿಕರ್ತರದು. ಸಿನಿ ರಸಿಕರಿಗೆ ಮುಂದಿನ ಪಂಚಮಿ ದಿನ ಪೂರ್ಣ ಚಂದಿರ ಎದುರಾಗಲಿದ್ದಾನೆ. ಮೋಡ, ಮಳೆ ಏನಿದ್ದರೂ ಬೆಳದಿಂಗಳಿಗೆ ಮೋಸವಿಲ್ಲ ಎನ್ನುವುದು ಅವರ ನಂಬಿಕೆ. ಚಿತ್ರತಂಡದ ಬಿಡುಗಡೆ ಪೂರ್ವ ಕೊನೆಯ ಸುದ್ದಿಗೋಷ್ಠಿಗೆ ನಟಿ ಶ್ರೀಯಾ ಶರಣ್ ಹಾಜರಾಗಿದ್ದರು. ಆದರೆ ನಟ ಪ್ರೇಮ್ ಸುಳಿವೇ ಇರಲಿಲ್ಲ.
ಪ್ರಚಾರದ ವಿಚಾರದಲ್ಲಿ ಪ್ರೇಮ್ ನಿರ್ದೇಶಕಿ ರೂಪಾ ಅಯ್ಯರ್ ಮೇಲೆ ಮುನಿಸಿಕೊಂಡಿದ್ದಾರೆ ಎನ್ನುವುದು ಸುದ್ದಿ. ಅದು ಪ್ರಶ್ನೆಯಾಗಿ ಎದುರಾದಾಗ, ತಮ್ಮಿಬ್ಬರ ನಡುವೆ ವಿವಾದವೇನೂ ಇಲ್ಲ. ಪ್ರೇಮ್‌ಗೆ ಅವರ ಮ್ಯಾನೇಜರ್ ಮೂಲಕ ಆಹ್ವಾನ ನೀಡಿದ್ದೆವು. ಆದರೆ ಅವರು ಬಂದಿಲ್ಲ. ಪ್ರಚಾರದಲ್ಲಿ ಎಲ್ಲಾ ಕಲಾವಿದರಿಗೂ ಸಮಾನ ಪ್ರಾಮುಖ್ಯ ನೀಡಿದ್ದೇವೆ ಎಂಬ ಸ್ಪಷ್ಟನೆ ಅವರದು.
ಪ್ರೇಮ್ ಅನುಪಸ್ಥಿತಿಯ ನಡುವೆಯೇ `ಚಂದ್ರ'ನ ಕುರಿತ ಮಾತುಕತೆ ಸಾಗಿತು. ಮುಂದಿನ ಗುರುವಾರ `ಚಂದ್ರ' ಚಿತ್ರದ ಕನ್ನಡ ಅವತರಣಿಕೆ ಸುಮಾರು 80 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಎರಡು ವಾರಗಳ ಬಳಿಕ ತಮಿಳು ಅವತರಣಿಕೆ ತೆರೆಕಾಣಲಿದೆ. ಕಥೆ ಹೆಣೆಯುವಾಗ ಕಲ್ಪಿಸಿಕೊಂಡ ಪಾತ್ರಗಳಿಗೆ ಜೀವತುಂಬುವಂಥ ಕಲಾವಿದರು ತಮಗೆ ದೊರಕಿದ್ದಾರೆ ಎಂಬ ಸಂತಸ ನಿರ್ದೇಶಕಿ ರೂಪಾ ಅಯ್ಯರ್ ಅವರದು.
ಪ್ರೇಮ್ ಮತ್ತು ಶ್ರೀಯಾ ಜೋಡಿಗಿಂತ ಬೇರೆ ಕಲಾವಿದರು ಆ ಸ್ಥಾನಕ್ಕೆ ಬರಲು ಸಾಧ್ಯವಿಲ್ಲ ಎಂಬುದು ಅವರ ಅಭಿಪ್ರಾಯ. ಚಿತ್ರೀಕರಣ ಮುಗಿಯುವುದು ತಡರಾತ್ರಿಯಾದರೂ ಮುಂಜಾನೆಯಲ್ಲಿಯೇ ಕಲರಿಪಯಟ್ಟು ಕಲಿಕೆಯಲ್ಲಿ ತೊಡಗುತ್ತಿದ್ದ ಶ್ರೀಯಾ ವೃತ್ತಿಪರತೆ ಬಗ್ಗೆ ಅವರಿಗೆ ಅಭಿಮಾನ. ಯೂಟ್ಯೂಬ್‌ನಲ್ಲಿ ಹಾಡುಗಳಿಗೆ ದೊರೆತಿರುವ ಯಶಸ್ಸು ಚಿತ್ರಕ್ಕೂ ಲಭಿಸುತ್ತದೆ ಎಂಬ ಭರವಸೆ ವ್ಯಕ್ತಪಡಿಸಿದರು.
ಡಿಜಿಟಲ್ ಯುಗದಲ್ಲಿ ಸಾಮಾನ್ಯವಾಗಿ ಹಾಡುಗಳ ಸೀಡಿಗೆ ಬೇಡಿಕೆ ಕಡಿಮೆ. ಅಂಥದ್ದರಲ್ಲಿ ಸುಮಾರು ಆರು ಸಾವಿರ ಸೀಡಿಗಳು ಮಾರಾಟವಾಗಿವೆ. ಎಲ್ಲಾ ಕಡೆಯೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ ಎಂಬ ಸಂತಸ ಸಂಗೀತ ನಿರ್ದೇಶಕ ಗೌತಮ್ ಶ್ರೀವತ್ಸ ಅವರದು.
ರೂಪಾ ಅಯ್ಯರ್ ಅವರ ಮೊದಲ ಚಿತ್ರ `ಮುಖಪುಟ'ಕ್ಕೆ ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ದೊರೆತ ಮನ್ನಣೆ ಕಂಡ ನಿರ್ಮಾಪಕ ರವಿ ರಾಜಗೋಪಾಲ್ `ಚಂದ್ರ'ನ ಕಾಂತಿಯೂ ಹೀಗೆ ಹರಡಲಿದೆ ಎಂಬ ಭರವಸೆಯೊಂದಿಗೆ ಇಂಗ್ಲಿಷ್ ಉಪಶೀರ್ಷಿಕೆಗಳನ್ನೂ ಚಿತ್ರಕ್ಕೆ ಅಳವಡಿಸಿದ್ದಾರೆ. ಗಾಯಕ ಬದ್ರಿಪ್ರಸಾದ್, ವಿತರಕ ಗಂಗರಾಜು, ಸಂಕಲನಕಾರ ಶ್ರೀ ಸುದ್ದಿಗೋಷ್ಠಿಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.