ADVERTISEMENT

ಬಹುಭಾಷಾ ತಾರೆ ಭಾವನಾ ಅಂದದ ಗುಟ್ಟು

​ಪ್ರಜಾವಾಣಿ ವಾರ್ತೆ
Published 18 ಜೂನ್ 2018, 14:29 IST
Last Updated 18 ಜೂನ್ 2018, 14:29 IST
ಭಾವನಾ ಮೆನನ್‌
ಭಾವನಾ ಮೆನನ್‌   

ಮಲಯಾಳಂ, ತಮಿಳು, ಕನ್ನಡ, ತೆಲುಗು ಹಾಗೂ ಹಿಂದಿ ಚಿತ್ರಗಳಲ್ಲಿ ನಟಿಸುವ ಮೂಲಕ ಬಹುಭಾಷಾ ತಾರೆ ಎಂಬ ಗರಿಮೆ ಗಳಿಸಿದ್ದಾರೆ ನಟಿ ಭಾವನಾ ಮೆನನ್‌. ‘ಜಾಕಿ’ ಸಿನಿಮಾದಲ್ಲಿ ಪುನೀತ್ ರಾಜ್‌ಕುಮಾರ್‌ಗೆ ಜತೆಯಾಗಿ, ಚಂದನವನಕ್ಕೆ ಕಾಲಿಟ್ಟ ಈ ತ್ರಿಶೂರಿನ ಬೆಡಗಿ ವಿಷ್ಣುವರ್ಧನ, ರೋಮಿಯೊ, ಮೈತ್ರಿ, ಯಾರೇ ಕೂಗಾಡಲಿ ಚಿತ್ರಗಳಲ್ಲಿ ನಟಿಸಿದ್ದಾರೆ. ಚೆಲುವಿನ ಜತೆಗೆ ನಟನೆಯಿಂದಲೂ ಪ್ರೇಕ್ಷಕರ ಮನಗೆದ್ದಿರುವ ಭಾವನಾ ಫಿಟ್‌ನೆಸ್‌ ಬಗ್ಗೆ ತೀರಾ ತಲೆಕೆಡಿಸಿಕೊಂಡವರಲ್ಲ.

ಇತ್ತೀಚೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ಭಾವನಾ ಪುನಃ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಪ್ರಜ್ವಲ್‌ ದೇವರಾಜ್‌ ನಾಯಕನಟನಾಗಿರುವ ‘ಇನ್‌ಸ್ಪೆಕ್ಟರ್‌ ವಿಕ್ರಂ’ ಚಿತ್ರದಲ್ಲಿ ಪೊಲೀಸ್‌ ಅಧಿಕಾರಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅಂದದ ದೇಹ ಸೊಬಗು ಹೊಂದಿರುವ ಭಾವನಾ ಅನುಸರಿಸುವ ಪಥ್ಯ ಮತ್ತು ಫಿಟ್ ನೆಸ್ ಮಂತ್ರ ಸರಳವಾಗಿದೆ. ಫಿಟ್‌ ಆಗಿರಬೇಕು ಎಂದು ಬಾಯಿಗೆ ಕಡಿವಾಣ ಹಾಕುವವರು ಇವರಲ್ಲ. ತನಗೇನು ಬೇಕೋ ಅದನ್ನು ತಿಂದು ಆ ಬಳಿಕ ಅದನ್ನು ಕರಗಿಸಿಕೊಳ್ಳಲು ಜಿಮ್‌ ಅಥವಾ ವ್ಯಾಯಾಮ ಮಾಡುವುದು ಭಾವನಾ ರೂಢಿ.

ಇವರು ಆಹಾರಪ್ರಿಯೆ. ಸಿನಿಮಾದ ಚಿತ್ರೀಕರಣ ಅಥವಾ ಕಾರ್ಯಕ್ರಮಗಳಿಗೆ ಬೇರೆ ಬೇರೆ ಊರುಗಳಿಗೆ ಹೋಗುವಾಗ ಅಲ್ಲಿನ ಆಹಾರ ವೈವಿಧ್ಯದ ರುಚಿ ನೋಡುವುದು ಇವರ ಅಭ್ಯಾಸ. ಭಾವನಾ ಅವರಿಗೆ ಹಪ್ಪಳ ಹಾಗೂ ಹಲಸಿನಹಣ್ಣಿನ ಚಿಪ್ಸ್‌ ಅಂದ್ರೆ ತುಂಬಾ ಇಷ್ಟ. ಒಂದು ಪ್ಯಾಕೆಟ್‌ ಚಿಪ್ಸ್‌ ಕೈಗೆ ಸಿಕ್ಕರೆ ಅದು ಮುಗಿಯುವ ತನಕ ಕೆಳಗಿಳಿಸುವುದೇ ಇಲ್ಲವಂತೆ. ಇದಲ್ಲದೇ ಕೇರಳದ ಎಲ್ಲಾ ಬಗೆಯ ಅಡುಗೆಗಳು ಹಾಗೂ ಮೀನಿನ ಖಾದ್ಯಗಳು ಇವರಿಗೆ ಮೆಚ್ಚು. ಆದರೆ ಸಿನಿಮಾ ಕ್ಷೇತ್ರಕ್ಕೆ ಪ್ರವೇಶಿಸಿದ ಬಳಿಕ ಸಿಹಿ ತಿಂಡಿ ಹಾಗೂ ಎಣ್ಣೆಯಿಂದ ಕರಿದ ಪದಾರ್ಥಗಳನ್ನು ತಿನ್ನುವುದು ಕಡಿಮೆ. ‘ದಿನದ ಮೂರು ಹೊತ್ತು ಚಪಾತಿ ತಿನ್ನುತ್ತೇನೆ. ಅನ್ನವನ್ನು ತುಂಬಾ ಕಡಿಮೆ ಸೇವಿಸುತ್ತೇನೆ’ ಎನ್ನುತ್ತಾರೆ ಇವರು.

ADVERTISEMENT

ಚೆಲುವಿಗಾಗಿ ದೇಹವನ್ನು ಹೆಚ್ಚು ದಂಡಿಸಬಾರದು ಎಂಬುದು ಇವರ ನಂಬಿಕೆ. ತೆಳ್ಳಗಾಗಲು ದೇಹಕ್ಕೆ ಹಿಂಸೆ ಕೊಡಬಾರದು. ದಿನನಿತ್ಯ ಅಗತ್ಯ ವ್ಯಾಯಾಮ ದೇಹಕ್ಕೆ ಇರಬೇಕು. ಸೀರೆ, ಸಲ್ವಾರ್‌, ಆಧುನಿಕ ಎಲ್ಲಾ ಉಡುಪುಗಳಿಗೆ ದೇಹ ಒಪ್ಪುವಂತಿರಬೇಕು ಎಂಬುದು ಭಾವನಾ ಮಾತು. ‘ನಾನು ತುಂಬಾ ತಿನ್ನುತ್ತೇನೆ. ಅಷ್ಟೇ ವರ್ಕೌಟ್‌ ಮಾಡುತ್ತೇನೆ. ಪ್ರತಿದಿನ ಜಿಮ್‌ನಲ್ಲಿ ಒಂದು ಗಂಟೆ ವರ್ಕೌಟ್‌ ಮಾಡುತ್ತೇನೆ. ಒಂದು ವೇಳೆ ಸಿನಿಮಾ ಚಿತ್ರೀಕರಣದಿಂದ ಜಿಮ್‌ಗೆ ಹೋಗಲು ಆಗದಿದ್ದಲ್ಲಿ ಯೋಚಿಸುವುದಿಲ್ಲ. ಕೆಲಸ ಮುಗಿದ ಬಳಿಕ ಎರಡು– ಮೂರು ದಿನ ವಿರಾಮ ಪಡೆದು ಕೊಬ್ಬು ಕರಗಿಸಿಕೊಳ್ಳುತ್ತೇನೆ’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.