ADVERTISEMENT

ಬಾಲಕಾರ್ಮಿಕರ ಬಾಳ ಬವಣೆಗೆ ಕನ್ನಡಿ

​ಪ್ರಜಾವಾಣಿ ವಾರ್ತೆ
Published 7 ಜೂನ್ 2018, 19:30 IST
Last Updated 7 ಜೂನ್ 2018, 19:30 IST
ಪ್ರೀತಮ್, ಮಿಲನಾ,  ಆಯುಷ್
ಪ್ರೀತಮ್, ಮಿಲನಾ, ಆಯುಷ್   

‘1098’

ಇದು ಮಕ್ಕಳ ಸಹಾಯವಾಣಿ. ಮಕ್ಕಳನ್ನು ಅಕ್ರಮ ಕೆಲಸಗಳಿಗೆ ಬಳಸಿಕೊಳ್ಳುತ್ತಿದ್ದರೆ, ಅವರು ಸಂಕಷ್ಟದಲ್ಲಿದ್ದರೆ ಈ ಸಹಾಯವಾಣಿಗೆ ಕರೆ ಮಾಡಿ ತಿಳಿಸಬಹುದು. ಇದೇ ಸಹಾಯವಾಣಿಯನ್ನು ಇಟ್ಟುಕೊಂಡೇ ಸಿನಿಮಾ ಮಾಡಿದ್ದಾರೆ ಶ್ವೇತಾ ಎನ್. ಎ. ಶೆಟ್ಟಿ.

ಈ ಸಿನಿಮಾ 2016ರಲ್ಲಿಯೇ ಪೂರ್ತಿಗೊಂಡು ಸೆನ್ಸಾರ್ ಪ್ರಮಾಣಪತ್ರವನ್ನೂ ತೆಗೆದುಕೊಂಡಾಗಿತ್ತು. ಆದರೆ ಆರ್ಥಿಕ ಮತ್ತು ತಾಂತ್ರಿಕ ಅಡಚಣೆಗಳಿಂದ ಬಿಡುಗಡೆಯಾಗದೇ ಉಳಿದುಕೊಂಡಿತ್ತು. ಇದೀಗ ‘1098’ಗೆ ಬಿಡುಗಡೆಯ ಭಾಗ್ಯ ಸಿಗುತ್ತಿದೆ. ಈ ಖುಷಿಯ ವಿಷಯವನ್ನು ಹಂಚಿಕೊಳ್ಳಲಿಕ್ಕಾಗಿಯೇ ಚಿತ್ರತಂಡ ಪತ್ರಿಕಾಗೋಷ್ಠಿ ಕರೆದಿತ್ತು.

ADVERTISEMENT

‘ಮಕ್ಕಳ ಸಹಾಯವಾಣಿ ನಂಬರ್ ಅನ್ನೇ ಶೀರ್ಷಿಕೆಯನ್ನಾಗಿಟ್ಟುಕೊಂಡು ಸಿನಿಮಾ ಮಾಡಿದ್ದೇವೆ. ಎರಡು ವರ್ಷಗಳ ಹಿಂದೆ ಮುಗಿದಿರುವ ಸಿನಿಮಾಗೆ ಈಗ ಮುಕ್ತಿ ಸಿಗುತ್ತಿದೆ. ತಾಯಿ ಸೆಂಟಿಮೆಂಟ್, ದಲ್ಲಾಳಿಗಳ ಕ್ರೌರ್ಯ, ಮನೆ ಬಿಟ್ಟು ಓಡಿಬಂದ ಮಕ್ಕಳ ಬವಣೆ ಎಲ್ಲವನ್ನೂ ಇಟ್ಟುಕೊಂಡು ಕಥೆ ಕಟ್ಟಿದ್ದೇನೆ. ಯಾವುದೇ ಮಕ್ಕಳು ಸಂಕಷ್ಟದಲ್ಲಿರುವುದು ಕಂಡುಬಂದರೆ 1098ಗೆ ಕರೆ ಮಾಡಿ ತಿಳಿಸಿ ಎನ್ನುವ ಜಾಗೃತಿಯನ್ನೂ ಈ ಸಿನಿಮಾ ಮೂಡಿಸುತ್ತದೆ’ ಎಂದು ನಿರ್ದೇಶಕಿ ಶ್ವೇತಾ ವಿವರಿಸಿದರು.

ಜೂನ್‌ 12ರಂದು ಬಾಲಕಾರ್ಮಿಕ ವಿರೋಧಿ ದಿನ. ಅಂದೇ ಈ ಚಿತ್ರವನ್ನು ಬಿಡುಗಡೆ ಮಾಡಬೇಕು ಎಂದು ಚಿತ್ರತಂಡ ಯೋಜನೆ ಹಾಕಿಕೊಂಡಿದೆ. ಅಂದು ಬೆಂಗಳೂರಿನ ಚಂದ್ರೋದಯ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದೆ. ಮೊದಲ ದಿನ ಹದಿನಾಲ್ಕು ವರ್ಷದೊಳಗಿನ ಎಲ್ಲ ಮಕ್ಕಳಿಗೂ ಉಚಿತವಾಗಿ ಚಿತ್ರವೀಕ್ಷಣೆಗೆ ಅವಕಾಶ ನೀಡಲೂ ತಂಡ ನಿರ್ಧರಿಸಿದೆ. ನಂತರ ಜೂನ್ 15ರಂದು (ಶುಕ್ರವಾರ) ಇನ್ನಷ್ಟು ಚಿತ್ರಮಂದಿರಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡುವ ಯೋಜನೆ ಅವರದು.

ಈ ಚಿತ್ರಕ್ಕೆ ಶಂಕರ್ ಸೊಗಟೆ ಹಣ ಹೂಡಿದ್ದಾರೆ. ಸೆನ್ಸಾರ್ ಮಂಡಳಿ ಚಿತ್ರ ವೀಕ್ಷಿಸುವವರೆಗೂ ನಿರ್ದೇಶಕಿ ಮತ್ತು ನಿರ್ಮಾಪಕಿ ಇಬ್ಬರೂ ಮುಖತಃ ಭೇಟಿಯೇ ಆಗಿರಲಿಲ್ಲವಂತೆ! ದೂರವಾಣಿ ಕರೆಯ ಮೂಲಕವೇ ಶ್ವೇತಾಗೆ ಕಥೆಯನ್ನು ಹೇಳಿ, ಅದು ಅವರಿಗೆ ಇಷ್ಟವಾಗಿ ಹಣ ಹೂಡಲು ಮುಂದೆ ಬಂದಿದ್ದು.

ಕೃಷ್ಣ ಕಂಚನಹಳ್ಳಿ ಅವರ ಸಿನಿಮಾಟೋಗ್ರಫಿ ಇರುವ ‘1098’ ಚಿತ್ರದಲ್ಲಿ ಮಾಸ್ಟರ್ ಪ್ರೀತಮ್, ಆಯುಷ್, ಮಿಲನಾ, ಕುಮಾರ್ ಮುಂತಾದ ಚಿಣ್ಣರು ಅಭಿನಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.