ADVERTISEMENT

ಬಾಲಿವುಡ್‌ಗೆ ಬೇಡವಾದ ಅಂಬೇಡ್ಕರ್

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2012, 19:30 IST
Last Updated 13 ಏಪ್ರಿಲ್ 2012, 19:30 IST

ಭಾರತೀಯ ಸಿನಿಮಾ ರಂಗದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಚಿತ್ರಕ್ಕಾಗಿ ಸಂಶೋಧನೆಗೆ ತೆಗೆದುಕೊಂಡಷ್ಟು ಕಾಲ ಬಹುಶಃ ಯಾವ ಚಿತ್ರಗಳೂ ತೆಗೆದುಕೊಂಡಿಲ್ಲ.

1990ರಲ್ಲಿ ಸಿನಿಮಾ ಯೋಜನೆಯನ್ನು ಜಬ್ಬಾರ್ ಪಟೇಲ್ ಸಿದ್ಧಪಡಿಸಿದ್ದರು. ಆದರೆ ಸಿನಿಮಾ ಸಿದ್ಧವಾಗಿದ್ದು 1998ರಲ್ಲಿ. ಆಗಲೇ ಸೆನ್ಸಾರ್ ಮಂಡಳಿಯೊಂದಿಗೆ ವಾದ ವಿವಾದಗಳೂ ಆಗಿದ್ದವು. ತೆರೆಗೆ ಬಂದದ್ದು 2000ನೇ ಇಸವಿಯಲ್ಲಿ.

ಮಮ್ಮುಟ್ಟಿ ಅಂಬೇಡ್ಕರ್ ಪಾತ್ರ ನಿರ್ವಹಿಸಿದ್ದ ಈ ಚಿತ್ರ `ಬೆಸ್ಟ್ ಇಂಗ್ಲಿಷ್ ಸಿನಿಮಾ~ ವಿಭಾಗದಲ್ಲಿ ರಾಷ್ಟ್ರೀಯ ಪ್ರಶಸ್ತಿ ಗಳಿಸಿತ್ತು. ಮಮ್ಮುಟ್ಟಿಗೆ ಉತ್ತಮ ನಟ, ನಿತಿನ್ ಚಂದ್ರಕಾಂತ್ ದೇಸಾಯಿ ಅವರು ಇದೇ ಚಿತ್ರಕ್ಕೆ ಶ್ರೇಷ್ಠ ಕಲಾ ನಿರ್ದೇಶಕ ಪ್ರಶಸ್ತಿಯನ್ನು ಪಡೆದರು. ನಂತರ ಇದೇ ಚಿತ್ರ ತಮಿಳು, ತೆಲಗು ಭಾಷೆಗಳಿಗೂ ಡಬ್ ಆಯಿತು. 

ಕನ್ನಡದಲ್ಲಿಯೂ `ಡಾ.ಬಿ.ಆರ್. ಅಂಬೇಡ್ಕರ್~ ಎಂಬ ಚಿತ್ರವು 2005ರಲ್ಲಿ ತೆರೆ ಕಂಡಿತು. ಶರಣಕುಮಾರ್ ಕಬ್ಬೂರ್ ಇದನ್ನು ನಿರ್ದೇಶಿಸಿದ್ದರು. ವಿಷ್ಣುಕಾಂತ್ ಇದರಲ್ಲಿ ಅಂಬೇಡ್ಕರ್ ಪಾತ್ರ ನಿರ್ವಹಿಸಿದ್ದರು. ತಾರಾ ಮೊದಲ ಹೆಂಡತಿ ರಮಾಬಾಯಿ ಹಾಗೂ ಭವ್ಯಾ ಎರಡನೆಯ ಹೆಂಡತಿ ಸವಿತಾ ಅಂಬೇಡ್ಕರ್ ಪಾತ್ರ ನಿರ್ವಹಿಸಿದ್ದರು. ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಗಲಿಲ್ಲ.

ಮರಾಠಿ ಚಿತ್ರರಂಗದಲ್ಲಿ ಮಾತ್ರ ಸತತವಾಗಿ ಅಂಬೇಡ್ಕರ್ ಚಿತ್ರಗಳು ತೆರೆಕಂಡಿವೆ.
ಕೊಹಿನೂರ್ ಭಾರತ್‌ಚಾ: ಭೀಮ್‌ರಾವ್ ಅಂಬೇಡ್ಕರ್, ಯುಗ್‌ಪುರುಷ್,  ಭೀಮ್‌ಪರ್ವ ಮುಂತಾದ ಚಿತ್ರಗಳಿಲ್ಲಿ ತೆರೆಕಂಡವು. ನಿರ್ದೇಶಕ ಪ್ರಕಾಶ್ ಜಾಧವ್ ಅವರು ರಮಾಬಾಯಿ ಅಂಬೇಡ್ಕರ್ ಚಿತ್ರವನ್ನು ನಿರ್ದೇಶಿಸಿದರು.

ಮಹಾರಾಷ್ಟ್ರದಲ್ಲಿ ಸಾಹಿತ್ಯ, ಸಿನಿಮಾ ಹಾಗೂ ರಂಗಭೂಮಿಯಲ್ಲಿ ಅಂಬೇಡ್ಕರ್ ಅವರು ಆವರಿಸಿಕೊಂಡಿದ್ದಾರೆ. ಹಮ್ಚಾ ಭೀಮರಾವ್ ಎಂದು ಲಾವಣಿಯಲ್ಲಿಯೂ ಅವರ ಜೀವನಗಾಥೆಯನ್ನು ಹಾಡಲಾಗುತ್ತದೆ. ರಾಜೇಶ್ ಕುಮಾರ್ ರಚಿಸಿದ `ಅಂಬೇಡ್ಕರ್ ಔರ್ ಗಾಂಧಿ~ ನಾಟಕವನ್ನು ಅರವಿಂದ್ ಗೌರ್ ನಿರ್ದೇಶಿಸಿದ್ದಾರೆ.  `ಅಂಬೇಡ್ಕರ್ ಅಣಿ ಗಾಂಧೀಜಿ~ ಸಹ ಅಂಬೇಡ್ಕರ್ ಹಾಗೂ ಗಾಂಧಿ ತತ್ವ, ಹರಿಜನ ಕಲ್ಪನೆಯನ್ನು ಒರೆಗೆಹಚ್ಚಿತು. ಪುಣೆಯ ವೇದ ವಿದ್ವಾಂಸ ಪ್ರಭಾಕರ್ ಜೋಷಿ ಎಂಬುವರು ಅಂಬೇಡ್ಕರ್ ಅವರ ಜೀವನ ಚರಿತ್ರೆ ಕುರಿತ `ಭೀಮಯಾನ~ ಎಂಬ ಸಂಸ್ಕೃತ ಮಹಾಕಾವ್ಯವನ್ನು ರಚಿಸಿದ್ದಾರೆ. ಇದರಲ್ಲಿ 1577 ಶ್ಲೋಕಗಳಿವೆ.

ಅಮರ ಚಿತ್ರಕಥೆ ಮಾಲಿಕೆಯಲ್ಲಿಯೂ ಡಾ.ಬಿ.ಆರ್. ಅಂಬೇಡ್ಕರ್ `ಹಿ ಡೇರ್ಡ್‌ ಟು ಫೈಟ್~ ಎಂಬ ಕಾಮಿಕ್ಸ್ 611ನೇ ಮಾಲಿಕೆಯಲ್ಲಿ ಪ್ರಕಟವಾಯಿತು.

ಹಿಂದಿ ಸಿನಿಮಾರಂಗದಲ್ಲಿ ಮಾತ್ರ ಅಂಬೇಡ್ಕರ್ ಕುರಿತು ಚಿತ್ರಗಳೇ ಇಲ್ಲ. ಗಾಂಧೀಜಿಯ ನಂತರ ಬೆಳ್ಳಿ ಪರದೆಗೆ ಹೆಚ್ಚಿನ ಸಂಖ್ಯೆಯಲ್ಲಿ ಸಿನಿಮಾ ಆಗಿರುವುದು ಭಗತ್ ಸಿಂಗ್ ಬಗ್ಗೆ. ಹಿಂದಿ ಸಿನಿಮಾರಂಗದಲ್ಲಿ ಅಂಬೇಡ್ಕರ್ ಜೀವನ ಯಾರನ್ನೂ ಸೆಳೆಯದಿರುವುದೇ ಸೋಜಿಗವಾಗಿದೆ.

ಜಬ್ಬಾರ್ ಪಟೇಲ್ ನಿರ್ದೇಶನದ ಚಿತ್ರದಲ್ಲಿ ಮಮ್ಮುಟ್ಟಿ ಹಾಗೂ ಸೊನಾಲಿ ಕುಲಕರ್ಣಿ ನಟಿಸಿದ್ದರು. ಚಿತ್ರವನ್ನು ತೀರ ಇತ್ತೀಚೆಗಷ್ಟೆ ಯು ಟ್ಯುಬ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ.

ಇಲ್ಲಿಯೂ ಮುಮ್ಮಟ್ಟಿಯ ನಟನೆ ಹಾಗೂ ಜಬ್ಬಾರ್ ಪಟೇಲ್ ನಿರ್ದೇಶನಕ್ಕೆ ಮೆಚ್ಚುಗೆಗಳು ವ್ಯಕ್ತವಾಗಿವೆ. ಆ ಸಾಮಾಜಿಕ ವ್ಯವಸ್ಥೆ ಹಾಗೂ ಅದರ ವಿರುದ್ಧದ ಹೋರಾಟ, ಚಳವಳಿಗಳು ಯಾರ ಗಮನವನ್ನೂ ಸೆಳೆಯದೇ ಇರುವುದು ಇನ್ನೊಂದು ಅಚ್ಚರಿಯಾಗಿದೆ.
 
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.