ADVERTISEMENT

`ಬಿಗ್‌ಬಾಸ್' ಬೆಳ್ಳಿಕಿರಣ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2013, 19:59 IST
Last Updated 1 ಆಗಸ್ಟ್ 2013, 19:59 IST

ಎರಡೆರಡು `ಬಿಗ್‌ಬಾಸ್' ಗೆದ್ದ ಸಂಭ್ರಮದಲ್ಲಿದ್ದಾರೆ ನಟ ವಿಜಯ ರಾಘವೇಂದ್ರ. `ಬಿಗ್‌ಬಾಸ್' ಮನೆಯಿಂದ 50 ಲಕ್ಷ ರೂಪಾಯಿ ಗೆದ್ದದ್ದು ಒಂದು ಸಂಭ್ರಮವಾದರೆ, ಮತ್ತೊಂದು ಸಂಭ್ರಮ ಅವರ `ಬಿಗ್‌ಬಾಸ್', ಅಂದರೆ ತಂದೆ ಚಿನ್ನೇಗೌಡರು ಮಗನಿಗಾಗಿ ಚಿತ್ರ ನಿರ್ಮಿಸಲು ಮುಂದಾಗಿರುವುದು. ಈ ಸಂಭ್ರಮಕ್ಕೆ ವಿಜಯ್ ಸಹೋದರ ಮುರಳಿ ಸಹ ಜೊತೆಯಾಗಿದ್ದಾರೆ. ಇಬ್ಬರಿಗೂ ಒಂದೊಂದು ಸಿನಿಮಾ ನಿರ್ಮಿಸುವುದು ಚಿನ್ನೇಗೌಡರ ಉದ್ದೇಶ.

`ಬಿಗ್‌ಬಾಸ್' ಕಾರ್ಯಕ್ರಮದಲ್ಲಿ ಗೆದ್ದ ಸಂತೋಷವನ್ನು ಹಂಚಿಕೊಳ್ಳುವ ಸಲುವಾಗಿ ಏರ್ಪಡಿಸಿದ್ದ ಸಂತೋಷ ಕೂಟದಲ್ಲಿ ವಿಜಯ್ ರಾಘವೇಂದ್ರ ಎಂದಿನ ಭಾವುಕ ಶೈಲಿಯಲ್ಲಿಯೇ ಮಾತಿಗಿಳಿದರು. ವೃತ್ತಿಯಲ್ಲಿ ಸತತ ಸೋಲುಗಳನ್ನೇ ಕಾಣುತ್ತಿದ್ದ ಅವರಿಗೆ ಬಿಗ್‌ಬಾಸ್‌ನಲ್ಲಿ ಸಿಕ್ಕ ಗೆಲುವು ಕಾರ್ಮೋಡದಂಚಿನ ಬೆಳ್ಳಿರೇಖೆಯಂತೆ ಕಂಡಿದೆ. ಆ ಬೆಳಕು ಮತ್ತಷ್ಟು ಪ್ರಕಾಶಮಾನವಾಗಿ ಹರಡಿಕೊಳ್ಳಲಿದೆ ಎಂಬ ಭರವಸೆ ಅವರದು.

ಬಿಗ್‌ಬಾಸ್ ಮನೆಗೆ ಹೊರಡುವಾಗ- `ವಿದ್ಯೆ, ತಿಳಿವಳಿಕೆ ಕೊಟ್ಟಿದ್ದೇನೆ. ನಿನಗೆ ಅನುಭವವಿದೆ. ಏನು ಮಾಡಬೇಕೆಂದು ನಿನಗೆ ಗೊತ್ತು' ಎಂದಷ್ಟೇ ಚಿನ್ನೇಗೌಡರು ವಿಜಯ್‌ಗೆ ಹೇಳಿದ್ದರಂತೆ. ತಂದೆ ಕಲಿಸಿದ ತಾಳ್ಮೆಯ ದೊಡ್ಡ ಪಾಠ ನೆರವಾಯಿತು ಎನ್ನುವ ವಿಜಯ್, ತಮ್ಮಳಗಿನ ಗಟ್ಟಿ ಮನುಷ್ಯನ ಅಸ್ತಿತ್ವವನ್ನು ಈ ಕಾರ್ಯಕ್ರಮದ ಮೂಲಕ ಕಂಡುಕೊಂಡಿದ್ದಾರಂತೆ.

ಗೆಲುವನ್ನು ಸಂಭ್ರಮಿಸುತ್ತಲೇ ರಾಜ್‌ಕುಮಾರ್ ಜೊತೆಗಿನ ಕೆಲ ನೆನಪುಗಳನ್ನು ಚಿನ್ನೇಗೌಡರು ಮೆಲುಕು ಹಾಕಿದರು. ರಾಜ್‌ರಿಂದ ಕಲಿತದ್ದು ತಾಳ್ಮೆ. ಕಲಾವಿದರಿಗೆ ಅದು ಬಹಳ ಮುಖ್ಯ ಎನ್ನುವುದು ಅವರ ನಂಬಿಕೆ. ಹೊಸ ಸಿನಿಮಾ ಯೋಜನೆಗಳ ಬಗ್ಗೆ ಅವರು ಹೆಚ್ಚೇನೂ ಹೇಳಲಿಲ್ಲ.

`ಬಿಗ್‌ಬಾಸ್ ಮನೆಗೆ ನಾನು ಹೋಗಿದ್ದರೆ ಮೂರು ದಿನ ಸಹ ನನ್ನನ್ನು ಇಟ್ಟುಕೊಳ್ಳುತ್ತಿರಲಿಲ್ಲ' ಎಂದರು ಮುರಳಿ. ಬಿಗ್‌ಬಾಸ್ ಕಾರ್ಯಕ್ರಮದ ವೇಳೆ ಮನೆಯಲ್ಲಿನ ಅಳು, ಕೋಪ, ಸಂತಸಗಳಿಗೆ ಮುರಳಿ ಸಾಕ್ಷಿಯಾಗಿದ್ದರಂತೆ. ಬಾಲನಟನಾಗಿ ಗೆಲುವು ಕಂಡಿದ್ದ ಅಣ್ಣನ ಗೆಲುವಿನ ಅಭಿಯಾನ ಮತ್ತೆ ಶುರುವಾಗಲಿದೆ ಎಂಬ ವಿಶ್ವಾಸ ಅವರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.