ADVERTISEMENT

ಬಿಸಿಲಿಗೂ ಮಳೆಗೂ ಬೇಕಾದ ಕೊಡೆಗಳು!

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2013, 19:59 IST
Last Updated 18 ಏಪ್ರಿಲ್ 2013, 19:59 IST
ಬಿಸಿಲಿಗೂ ಮಳೆಗೂ  ಬೇಕಾದ ಕೊಡೆಗಳು!
ಬಿಸಿಲಿಗೂ ಮಳೆಗೂ ಬೇಕಾದ ಕೊಡೆಗಳು!   

ನಟ ರಮೇಶ್ ಅರವಿಂದ್ ಮಾತುಗಳಲ್ಲಿ ಮರ್ಮ ಅಡಗಿತ್ತು: ಸಿನಿಮಾ ಎನ್ನುವುದು ಗಡಿಯಾರದ ಮುಳ್ಳುಗಳಂತೆ. ಒಂದು ತಿರುಗಿದರಷ್ಟೇ ಮತ್ತೊಂದಕ್ಕೆ ಚಾಲನೆ. ಎಲ್ಲವೂ ಒಟ್ಟಿಗೆ ದುಡಿದರಷ್ಟೇ ಸಮಯಕ್ಕೆ ಅರ್ಥ. ಈಗ ಆ ಸಮಯ ಬಂದಿದೆ. `ಛತ್ರಿಗಳು ಸಾರ್ ಛತ್ರಿಗಳು' ಏಪ್ರಿಲ್ 19ರಂದು ತೆರೆಗೆ ಬರುತ್ತಿದೆ...

ಚಿತ್ರತಂಡದ ಸಾಂಘಿಕ ಹೋರಾಟವನ್ನು ಅವರು ಹೋಲಿಸಿದ್ದು ದೋಣಿ ಸ್ಪರ್ಧೆಗೆ. ಓಣಂ ವೇಳೆ ಕೇರಳದಲ್ಲಿ ದೋಣಿ ಸ್ಪರ್ಧೆ ನಡೆಯುತ್ತದೆ. ಎಲ್ಲರೂ ಒಗ್ಗೂಡಿ ಹುಟ್ಟುಹಾಕುತ್ತಾರೆ. ಚಿತ್ರದ ಕಲಾವಿದರು, ತಂತ್ರಜ್ಞರ ದುಡಿಮೆ ಒಂದೇ ದೋಣಿಯಲ್ಲಿ ಕುಳಿತ ಹಲವು ಅಂಬಿಗರನ್ನು ನೆನಪಿಗೆ ತಂದಿತ್ತು.

ಅಂದಹಾಗೆ ನಿರ್ದೇಶಕ ಎಸ್. ನಾರಾಯಣ್ `ಛತ್ರಿಗಳ' ಟ್ರೇಡ್‌ಮಾರ್ಕ್. ಈ ಮೊದಲು ಚಿತ್ರರಂಗದಿಂದ ನಿವೃತ್ತಿ ಪಡೆಯುವುದಾಗಿ ಘೋಷಿಸಿದ್ದ ಅವರ ಕೊರಳಿಗೆ `ಛತ್ರಿಗಳನ್ನು' ವ್ಯವಸ್ಥಿತವಾಗಿ ಕಟ್ಟಲಾಯಿತಂತೆ. ರಮೇಶ್, ಮೋಹನ್ ಜೊತೆಗೂಡಿ ಚಿತ್ರದ ಕತೆ ಹೆಣೆದಿದ್ದರೂ ನಿರ್ದೇಶನ ತಮ್ಮ ಪಾಲಿಗೇ ಒಲಿದಿದ್ದು ವ್ಯವಸ್ಥಿತ ತಂತ್ರಗಾರಿಕೆ ಎಂದು ತುಂಬು ನಗುವಿನಿಂದ ಬಿಂಬಿಸಿಕೊಂಡರು. ಹತ್ತು ವರ್ಷಗಳ ಹಿಂದೆ  `ಕೋತಿಗಳು ಸಾರ್ ಕೋತಿಗಳು' ಚಿತ್ರದಲ್ಲಿ ಈ ಮೂವರೂ ಒಟ್ಟಿಗೆ ದುಡಿದಿದ್ದನ್ನು ಇಲ್ಲಿ ಸ್ಮರಿಸಬಹುದು.

ಉಮಾಶ್ರೀಗೆ ಜೋಡಿಯಾಗಿ ಹಿರಿಯ ನಟ ಎಸ್. ಶಿವರಾಂ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದುದ್ದಕ್ಕೂ ಅವರಿದ್ದಾರೆ. ಆದರೆ ಹೆಚ್ಚು ಮಾತನಾಡುವುದಿಲ್ಲ. ಏಕೆಂದರೆ ಅವರ ಮಾತುಗಳನ್ನೂ ಉಮಾಶ್ರೀಯೇ ಆಡಿದ್ದಾರಂತೆ. ಅಂದಹಾಗೆ ಉಮಾಶ್ರೀ ಈ ಬಾರಿ ಆಂಧ್ರಪ್ರದೇಶದ ರಾಜಮಂಡ್ರಿಯ ಹೆಣ್ಣುಮಗಳು. `ಸಾಮಿ ಏಮಿ' ಎಂಬ ತೆಲುಗು ಮಿಶ್ರಿತ ಸಂಭಾಷಣೆಗೆ ರಾಗ ಬೆರೆಸಿ ಅವರು ಕಚಗುಳಿ ಇಡಲಿದ್ದಾರೆ. ನಗೆಯ ಪಡೆಯಲ್ಲಿ ರಂಗಾಯಣ ರಘು, ಸಾಧುಕೋಕಿಲ, ಬುಲೆಟ್ ಪ್ರಕಾಶ್, ಮುಖ್ಯಮಂತ್ರಿ ಚಂದ್ರು ಮುಂತಾದವರಿದ್ದಾರೆ.

ಸುಂದರ್‌ರಾಜ್ ಮೂರೇ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದರೂ ಅವರ ಅಭಿನಯದಿಂದಾಗಿ ಆ ದೃಶ್ಯಗಳ ವರ್ಚಸ್ಸು ಹೆಚ್ಚಿದೆಯಂತೆ. ನಾರಾಯಣ್ ನಿರ್ಗಮನದ ವಿಚಾರವನ್ನು ಪ್ರಸ್ತಾಪಿಸಿದ ಶಿವರಾಂ ಹಾಗೂ ಸುಂದರ್‌ರಾಜ್ ಅಂಥ ನಿರ್ಧಾರ ತೆಗೆದುಕೊಳ್ಳಬಾರದು ಎಂದು ಪ್ರೀತಿಯಿಂದ ತಾಕೀತು ಮಾಡಿದರು. ನಿರ್ದೇಶನ, ನಟನೆ, ಸಂಘಟನೆಯನ್ನು ಏಕಕಾಲಕ್ಕೆ ಯಶಸ್ವಿಯಾಗಿ ನಿಭಾಯಿಸುವ ನಾರಾಯಣ್‌ರ ಜವಾಬ್ದಾರಿ ಶಿವರಾಂರನ್ನು ಕಾಡಿದೆ. ಸುಮಾರು ಹತ್ತು ಚಿತ್ರಗಳಲ್ಲಿ ನಾರಾಯಣ್ ಜೊತೆ ಒಟ್ಟಿಗೆ ನಟಿಸಿದ್ದಾರೆ ಸುಂದರ್ ರಾಜ್. ಕಲಾವಿದರಿಗೆ ನಾರಾಯಣ್ ನೀಡುವ ಪ್ರೋತ್ಸಾಹ ಅವರಿಗೆ ಹಿಡಿಸಿದೆ.

ರಮೇಶ್ ಅರವಿಂದ್, ನಾರಾಯಣ್ ಹಾಗೂ ಮೋಹನ್‌ರಿಗೆ ಜೋಡಿಯಾಗಿರುವುದು ಸನಾತನಿ, ಮಾನಸಿ, ಸುಷ್ಮಾ ರಾಜ್ ಹಾಗೂ ಪವಿತ್ರಾ ಗೌಡ. ವೇದಿಕೆಯಲ್ಲಿದ್ದ ಹಿರಿಯ ಕಿರಿಯ ಕಲಾವಿದರ ಸಂಗಮ ಹಳೆ ಬೇರು ಹೊಸ ಚಿಗುರು ಎಂಬುದನ್ನು ನೆನಪಿಸುತ್ತಿತ್ತು. ಮೂವರು ನಾಯಕರಿಗೆ ನಾಲ್ವರು ನಾಯಕಿಯರು ಹೇಗೆ ಎಂಬ ಅನುಮಾನವೇ? ಹಾಗಿದ್ದರೆ ಚಿತ್ರ ನೋಡಿ. ಡಬಲ್ ರಂಜನೆ ಪಡೆಯಿರಿ ಎನ್ನುತ್ತಿದ್ದಾರೆ `ಸಾರ್'ಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.