ADVERTISEMENT

ಬೆಳ್ಳಿ ಮೂಡಿತು

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2011, 18:30 IST
Last Updated 3 ಫೆಬ್ರುವರಿ 2011, 18:30 IST

ಶಿವರಾಜ್‌ಕುಮಾರ್ ಆಚರಣೆಯ ಮೂಡಿನಲ್ಲಿದ್ದಾರೆ. ಫೆಬ್ರುವರಿ 19ಕ್ಕೆ ಅವರು ಚಿತ್ರರಂಗಕ್ಕೆ ಕಾಲಿಟ್ಟು ಸರಿಯಾಗಿ 25 ವರ್ಷ. ಈ ಸಂದರ್ಭವನ್ನು ಸ್ಮರಣೀಯವಾಗಿಸಿಕೊಳ್ಳುವುದು ಅವರ ಉದ್ದೇಶ. ಅದಕ್ಕೇ ಮಾರ್ಚ್ 2ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಭವ್ಯವಾದ ಸಮಾರಂಭ. ಓರಗೆಯ ಕೆಲವು ನಟರಿಗೆ ಅಂದು ಸನ್ಮಾನ. ಅದಕ್ಕಿಂತ ಮುಖ್ಯವಾಗಿ ಚಿತ್ರರಂಗದ ಬಹುತೇಕ ತಾರಾಬಳಗ ಅಂದು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಲಿದೆ. ಶಿವರಾಜ್‌ಕುಮಾರ್ ಚಿತ್ರದ ಅನೇಕ ಹಾಡುಗಳಿಗೆ ಹೆಜ್ಜೆಹಾಕಲು ಎಲ್ಲರೂ ಸಜ್ಜಾಗುತ್ತಿದ್ದಾರೆ. ಮಾರ್ಚ್ 5ರಂದು ಅರಮನೆ ಮೈದಾನದಲ್ಲೇ ಇರುವ ‘ವೈಟ್ ಪೆಟಲ್ಸ್’ನಲ್ಲಿ ತಮ್ಮ ವೃತ್ತಿಬದುಕಿನ ಎಲ್ಲಾ ನಿರ್ಮಾಪಕರು, ತಂತ್ರಜ್ಞರನ್ನು ಸನ್ಮಾನ ಮಾಡುವ ಬೇರೆ ಕಾರ್ಯಕ್ರಮವೂ ಉಂಟು.

ಸನ್ಮಾನಿತರಾಗುವವರಲ್ಲಿ ರವಿಚಂದ್ರನ್, ಜಗ್ಗೇಶ್ ಪ್ರಮುಖರು. ರಮೇಶ್ ಕೂಡ ತಮ್ಮ ಓರಗೆಯ ನಟ ಎಂಬುದನ್ನು ನೆನಪಿಸಿಕೊಂಡ ಅವರ ಮಾತು ಆಮೇಲೆ ‘ಜೋಗಯ್ಯ’ನ ವಿಷಯದತ್ತ ತಿರುಗಿತು.

ಶಿವರಾಜ್‌ಕುಮಾರ್ ಅಭಿನಯದ ನೂರನೇ ಚಿತ್ರ ‘ಜೋಗಯ್ಯ’ ಮಾತಿನ ಭಾಗದ ಚಿತ್ರೀಕರಣ ಮುಗಿಸಿದೆ. ಹಾಡುಗಳಷ್ಟೇ ಬಾಕಿ. ‘ಮೂರು ಬಗೆಯ ಶಿವಣ್ಣನನ್ನು ಈ ಸಿನಿಮಾದಲ್ಲಿ ನೀವು ನೋಡುತ್ತೀರಿ. ನಂದ ಎಂಬ ಹೊಸ ಕ್ಯಾಮೆರಾಮನ್ ಇಲ್ಲಿ ತುಂಬಾ ಚೆನ್ನಾಗಿ ಕೆಲಸ ಮಾಡಿದ್ದಾರೆ. ನೈಟ್ ಎಫೆಕ್ಟ್‌ಗಳನ್ನು ನೋಡಿ ನಾನೇ ಖುಷಿಪಟ್ಟಿದ್ದೇನೆ. ಇದು ಜೋಗಿಗಿಂತ ಚೆನ್ನಾಗಿ ಮೂಡಿಬರಲಿದೆ. ಮೈಸೂರು, ಬೆಂಗಳೂರು, ಹರಿದ್ವಾರ, ಮುಂಬೈನಲ್ಲಿ ಶೂಟಿಂಗ್ ಮಾಡಿಕೊಂಡು ಬಂದೆವು. ಎಲ್ಲವೂ ಅದ್ಭುತ ಅನುಭವ. ಇನ್ನು ಹತ್ತು ಹನ್ನೆರಡು ದಿನದಲ್ಲಿ ಡಬ್ಬಿಂಗ್ ಕೂಡ ಪ್ರಾರಂಭವಾಗಲಿದೆ’- ಇದು ಚಿತ್ರದ ಕುರಿತು ಶಿವರಾಜ್‌ಕುಮಾರ್ ಕೊಟ್ಟ ಮಾಹಿತಿ.

ಶಿವರಾಜ್‌ಕುಮಾರ್ ವೃತ್ತಿಬದುಕಿನ ಬೆಳ್ಳಿಹಬ್ಬದ ಸಮಾರಂಭಕ್ಕೂ ‘ಜೋಗಯ್ಯ’ನಿಗೂ ಸಂಬಂಧವಿದೆ. ಯಾಕೆಂದರೆ, ಮಾರ್ಚ್ 2ರ ಆ ಕಾರ್ಯಕ್ರಮಕ್ಕೆ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭವೂ ತಳುಕು ಹಾಕಿಕೊಂಡಿದೆ. ಅಂಬರೀಷ್ ಅವರನ್ನು ಹೊರತುಪಡಿಸಿ ಉದ್ಯಮದ ಮಿಕ್ಕೆಲ್ಲರೂ ಇದರಲ್ಲಿ ಭಾಗವಹಿಸಲಿದ್ದಾರೆ ಎಂದವರು ನಿರ್ದೇಶಕ ಪ್ರೇಮ್. ಇಮ್ರಾನ್, ನಾಗೇಶ್, ಕಲೈ, ಹರ್ಷ ಮೊದಲಾದವರಿಂದ ಬೆಳ್ಳಿಹಬ್ಬದ ನೃತ್ಯ ಸಂಯೋಜನೆ ಮಾಡಿಸುವ ಕೆಲಸ ಈಗಾಗಲೇ ಪ್ರಾರಂಭವಾಗಿದೆಯಂತೆ.

ಹರಿದ್ವಾರ್, ಹೃಷಿಕೇಶಕ್ಕೆ ಇಲ್ಲಿಂದ 80 ಜನ ಡಾನ್ಸರ್‌ಗಳನ್ನು ಕರೆದುಕೊಂಡು ಹೋಗಿದ್ದು, ಕೊರೆಯುವ ಚಳಿಯಲ್ಲಿ ಶಿವರಾಜ್‌ಕುಮಾರ್‌ಗೆ ಅಘೋರಿಗಳ ಗೆಟಪ್ ಹಾಕಿಸಿ ಬೆಳಗಿನ ಜಾವದಲ್ಲೇ ಕುಣಿಸಿದ ನೆನಪುಗಳನ್ನು ಪ್ರೇಮ್ ತುಳುಕಿಸಿದರು. ಒಂದು ಲಕ್ಷ ಜನ ನೆರೆಯುವ ಹರಿದ್ವಾರದಲ್ಲಂತೂ ಚಿತ್ರೀಕರಣ ಬಲು ಕಷ್ಟವೆಂದರು. ಹಾಡುಗಳನ್ನು ಕನಕಪುರ, ಮೈಸೂರು ಹಾಗೂ ಬೆಂಗಳೂರಿನಲ್ಲಿ ಚಿತ್ರೀಕರಿಸಲಿದ್ದು, ‘ಜೋಗಯ್ಯ’ನ ಚಿತ್ರೀಕರಣ ಏನಿಲ್ಲವೆಂದರೂ ಇನ್ನೂ ಒಂದು ತಿಂಗಳಾದರೂ ಮುಂದುವರಿಯಲಿದೆ. ಈಗಾಗಲೇ 69 ದಿನಗಳ ಶೂಟಿಂಗ್ ಪೂರ್ಣವಾಗಿದೆ. ಒಂದು ‘ಥ್ರೀಡಿ’ ಹಾಡು ಚಿತ್ರೀಕರಿಸಲು ಸಜ್ಜಾಗಿರುವ ಪ್ರೇಮ್ ಅದಕ್ಕೆ ಅಗತ್ಯವಿರುವ ತಾಂತ್ರಿಕ ಹೊಣೆಗಾರಿಕೆಯನ್ನು ಪ್ರಸಾದ್ ಲ್ಯಾಬ್‌ನವರಿಗೆ ವಹಿಸಿದ್ದಾರೆ.

ಆ ಹಾಡಿನ ಚಿತ್ರೀಕರಣಕ್ಕೆಂದೇ ವಿದೇಶದಿಂದ ‘ಥ್ರೀಡಿ’ ಪರಿಣತರು ಆಗಮಿಸಲಿರುವುದು ವಿಶೇಷ. ‘ಥ್ರೀಡಿ’ ದೃಶ್ಯಗಳನ್ನು ತೋರಿಸಬಲ್ಲ ಪಿವಿಆರ್‌ನಂಥ ಚಿತ್ರಮಂದಿರಗಳಲ್ಲಿ ಮಾತ್ರ ಈ ತಂತ್ರಜ್ಞಾನದ ಹಾಡನ್ನು ನೋಡಲು ಸಾಧ್ಯವಿದೆ. ಅಂದರೆ, ‘ಥ್ರೀಡಿ’ ಕನ್ನಡಕ ಹಾಕಿಕೊಂಡು ಕನ್ನಡದ ಹಾಡನ್ನು ನೋಡುವ ಅವಕಾಶ ಪ್ರೇಕ್ಷಕನದ್ದು. ಆದರೆ, ಉಳಿದ ಚಿತ್ರಮಂದಿರಗಳಲ್ಲಿ ‘ಟುಡಿ’ ತಂತ್ರಜ್ಞಾನದಲ್ಲೇ ಆ ಹಾಡು ಮೂಡಿಬರಲಿದೆ ಎಂಬುದು ಪ್ರೇಮ್ ಸ್ಪಷ್ಟನೆ.

ಅಘೋರಿ, ಜೋಗಯ್ಯ ಇಬ್ಬರೂ ಒಂದೇ ಎಂಬ ಇನ್ನೊಂದು ವಿಚಿತ್ರ ವಾದವನ್ನು ಕೂಡ ಪ್ರೇಮ್ ತೇಲಿಬಿಟ್ಟರು. ಇವೆಲ್ಲಕ್ಕೂ ಸಾಕ್ಷಿಯಾಗಿದ್ದ ರಕ್ಷಿತಾ ಸುಮ್ಮನೆ ನಗುತ್ತಿದ್ದರು. ನಿರ್ಮಾಪಕಿಯಾದರೂ ಅವರು ಶೂಟಿಂಗ್ ಸ್ಪಾಟ್‌ಗೆ ಹೋದದ್ದು ಕಡಿಮೆಯಂತೆ. ‘ಏನು ಮಾತಾಡಲಿ ನಾನು’ ಎಂದು ನಗುವನ್ನು ಚೆಲ್ಲಿ ಅವರು ಕುಳಿತರು.

ಅಂದಹಾಗೆ, ಶಿವರಾಜ್‌ಕುಮಾರ್ ಬೆಳ್ಳಿಹಬ್ಬಕ್ಕೆ ಪ್ರವೇಶ ಮುಕ್ತ. ಸೂಕ್ತ ಬಂದೋಬಸ್ತ್ ಒದಗಿಸುವ ನಿಟ್ಟಿನಲ್ಲಿ ಪ್ರೇಮ್ ಹಾಗೂ ಗೆಳೆಯರು ಕಮಿಷನರ್ ಜೊತೆ ಮಾತುಕತೆಯನ್ನೂ ನಡೆಸಿದ್ದಾರಂತೆ.

ಅಘೋರಿಗಳಿಗೂ, ಶಿವರಾಜ್‌ಕುಮಾರ್ ಪಾತ್ರಕ್ಕೂ ಸಂಬಂಧವಿದೆಯಾ ಎಂಬುದು ಪ್ರಶ್ನೆ. ಯುದ್ಧದ ಹಾಡನ್ನು ಚಿತ್ರೀಕರಿಸಬೇಕು ಎಂದು ಪ್ರೇಮ್ ಹೇಳಿದ್ದರಿಂದ ಇದು ‘ಪೀರಿಯೆಡ್ ಚಿತ್ರವಾ’ ಎಂಬ ಇನ್ನೊಂದು ಪ್ರಶ್ನೆಯೂ ಹುಟ್ಟಿತು. ಇವೆಲ್ಲಕ್ಕೂ ಪ್ರೇಮ್ ಕೊಡುವ ಒಂದು ಸಾಲಿನ ಉತ್ತರ- ‘ಸಿನಿಮಾ ನೋಡಿ’. ಶಿವರಾಜ್‌ಕುಮಾರ್ ಪ್ರಕಾರ ಅಘೋರಿಯ ಗೆಟಪ್ ಬರೀ ಸಾಂಕೇತಿಕವಷ್ಟೆ. ಎಂಬಲ್ಲಿಗೆ ಪ್ರೇಮ್ ಗಿಮಿಕ್ ಪ್ರೀತಿ ಮುಂದುವರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.