ADVERTISEMENT

`ಬ್ಯಾಡ್' ಶೋಭರಾಜ್ ಕುರಿತ ಚಿತ್ರವಲ್ಲ

ಪಂಚರಂಗಿ

​ಪ್ರಜಾವಾಣಿ ವಾರ್ತೆ
Published 21 ಜುಲೈ 2013, 19:59 IST
Last Updated 21 ಜುಲೈ 2013, 19:59 IST
ಪೊಲೀಸ್ ಬಂಧನದಲ್ಲಿ ಶೋಭರಾಜ್ (ಸಂಗ್ರಹ ಚಿತ್ರ) ಬಲ ಚಿತ್ರ. ರಣದೀಪ್ ಹೂಡಾ
ಪೊಲೀಸ್ ಬಂಧನದಲ್ಲಿ ಶೋಭರಾಜ್ (ಸಂಗ್ರಹ ಚಿತ್ರ) ಬಲ ಚಿತ್ರ. ರಣದೀಪ್ ಹೂಡಾ   

ಪೂಜಾ ಭಟ್ ನಿರ್ಮಿಸುತ್ತಿರುವ `ಬ್ಯಾಡ್' ಎಂಬ ಚಿತ್ರವು `ಬಿಕಿನಿ ಕಿಲ್ಲರ್' ಕುಖ್ಯಾತಿಯ ಚಾರ್ಲ್ಸ್ ಶೋಭರಾಜ್ ಕುರಿತು ಎಂದು ಹಬ್ಬಿದ್ದ ಸುದ್ದಿಯನ್ನು ಚಿತ್ರ ನಿರ್ದೇಶಕ ಪ್ರವಾಲ್ ರಾಮನ್ ಅವರು ನಿರಾಕರಿಸಿದ್ದಾರೆ.

1986ರಲ್ಲಿ ತಿಹಾರ್ ಜೈಲು ಸೇರಿದ್ದ ಸರಣಿ ಹಂತಕ ಚಾರ್ಲ್ಸ್ ಶೋಭರಾಜ್ ಜೈಲಿನಿಂದ ತಪ್ಪಿಸಿಕೊಂಡ ಕಥೆಯನ್ನು ಆಧರಿಸಿದ್ದು ಎಂಬ ಸುದ್ದಿಯನ್ನು ಅಲ್ಲಗಳೆದ ಅವರು ಅಮೋದ್ ಕಾಂತ್ ಎಂಬ ಜೈಲರ್‌ನ ಕಥೆಯ ಮೇಲೆ ಚಿತ್ರವನ್ನು ಹೆಣೆಯಲಾಗಿದೆ ಎಂದಿದ್ದಾರೆ.

ಜೈಲು ಸೇರಿದ ಕುಖ್ಯಾತ ಅಪರಾಧಿಯೊಬ್ಬ ಸೆರೆಮನೆಯ ಭದ್ರಕೋಟೆಯಿಂದ ತಪ್ಪಿಸಿಕೊಳ್ಳುವ ರೋಚಕ ಕಥೆಯನ್ನು ಇದು ಹೊಂದಿದೆ. ಚಿತ್ರಕ್ಕೆ ಆಯ್ಕೆ ಮಾಡಿಕೊಂಡ ಪಾತ್ರ ಹಾಗೂ ಘಟನೆಯು ಚಾರ್ಲ್ಸ್ ಶೋಭರಾಜ್ ಜೈಲಿನಲಿದ್ದಾಗ ನಡೆದ ಸಂಗತಿಯನ್ನೇ ನೆನಪಿಸುವಂತಿವೆ ಎಂದು ಬಾಲಿವುಡ್‌ನ ಕೆಲವರು ಮಾತನಾಡಿಕೊಳ್ಳುತ್ತಿದ್ದಾರೆ.

ಆ ಸಂದರ್ಭದಲ್ಲೂ ತಿಹಾರ್ ಜೈಲಿನ ಅಧಿಕಾರಿಯಾಗಿದ್ದವರ ಹೆಸರು ಮೋದ್ ಕಾಂತ್ ಎಂಬುದು ಕಾಕತಾಳಿಯವೆಂಬಂತಿದೆ. ಚಿತ್ರದಲ್ಲಿ ಜೈಲರ್ ಪಾತ್ರವನ್ನು ಆದಿಲ್ ಹುಸೈನ್ ನಿರ್ವಹಿಸಿದರೆ ಅಪರಾಧಿ ಪಾತ್ರದಲ್ಲಿ ರಣದೀಪ್ ಹೂಡಾ ನಟಿಸುತ್ತಿದ್ದಾರೆ.

ADVERTISEMENT

ಜತೆಗೆ ರಿಚಾ ಚಡ್ಡಾ ಕೂಡಾ ರಣದೀಪ್ ಪ್ರೇಯಸಿಯಾಗಿ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಶೇ 40ರಷ್ಟು ಭಾಗದ ಚಿತ್ರೀಕರಣ ಮುಗಿದಿದ್ದು ಬರುವ ವರ್ಷದ ಆರಂಭದಲ್ಲಿ ಬಿಡುಗಡೆ ಮಾಡುವ ಇರಾದೆಯನ್ನು ನಟಿ ಹಾಗೂ ನಿರ್ಮಾಪಕಿ ಪೂಜಾ ಭಟ್ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.