ವಿಶ್ವ ಮಹಿಳಾ ದಿನದ ಪ್ರಯುಕ್ತ ದೂರದರ್ಶನದ ಚಂದನ ಕನ್ನಡ ವಾಹಿನಿಯಲ್ಲಿ ರಾತ್ರಿ 8ರಿಂದ 8.30ಕ್ಕೆ ಖ್ಯಾತ ಗಗನಸಖಿ ನೀರಜಾ ಭಾನೋಟ್ ಅವರ ಜೀವನ ಚರಿತ್ರೆ ಕುರಿತ 30 ನಿಮಿಷಗಳ ಶೈಕ್ಷಣಿಕ ಸಾಕ್ಷ್ಯಚಿತ್ರ ಪ್ರಸಾರವಾಗಲಿದೆ.
ಚಂಡೀಗಡ, ಬೆಂಗಳೂರು ವಿಮಾನ ನಿಲ್ದಾಣ, ಎಚ್.ಎ.ಎಲ್ ಗ್ರಂಥಾಲಯಗಳಲ್ಲಿ ಈ ಸಾಕ್ಷ್ಯಚಿತ್ರ ಚಿತ್ರೀಕರಿಸಲಾಗಿದೆ.
ನೀರಜಾ ಭಾನೋಟ್ ಒಬ್ಬ ಸಾಹಸಿ ಮಹಿಳೆಯಾಗಿದ್ದು, 1986 ಸೆಪ್ಟೆಂಬರ್5ರಂದು ಪಾಕಿಸ್ತಾನದ ಕರಾಚಿ ವಿಮಾನ ನಿಲ್ದಾಣದಲ್ಲಿ ಈಕೆ ಕರ್ತವ್ಯ ನಿರ್ವಹಿಸುತ್ತಿದ್ದ `ಪಾನ್ ಅಮೆರಿಕಾ ನಂ73 ಬೋಯಿಂಗ್ 747~ ವಿಮಾನ ಉಗ್ರರಿಂದ ಹೈಜಾಕ್ ಆಗುತ್ತದೆ.
ಇಂಥ ಸಮಯದಲ್ಲಿ 400 ಪ್ರಯಾಣಿಕರನ್ನು ವಿಮಾನದ ತುರ್ತುದ್ವಾರವನ್ನು ತೆಗೆದು ಪ್ರಾಣಾಪಾಯದಿಂದ ಪಾರು ಮಾಡುತ್ತಾಳೆ. ತನ್ನ ಪ್ರಾಣವನ್ನೂ ಲೆಕ್ಕಿಸದೆ ಮೂವರು ಮಕ್ಕಳನ್ನು ಕಾಪಾಡಲು ಹೋಗಿ ಕೊನೆಗೆ ಉಗ್ರರ ಗುಂಡಿಗೆ ಎದೆಯೊಡ್ಡಿ ಪ್ರಾಣ ತ್ಯಾಗಮಾಡಿದ ಧೀರ ಮಹಿಳೆಯ ಕತೆಯನ್ನು ಸಾಕ್ಷ್ಯಚಿತ್ರದಲ್ಲಿ ನೋಡಬಹುದು.
ಜನನಿ ಕ್ರಿಯೇಷನ್ಸ್‌ನ ನಿರ್ದೇಶಕ ಹಾಗೂ ನಿರ್ಮಾಪಕ ಅಯ್ಯಪ್ಪ ರಾಮತೀರ್ಥ ಅವರು ಈ ಚಿತ್ರಕ್ಕೆ ಕತೆ, ಸಾಹಿತ್ಯ ಹಾಗೂ ನಿರ್ದೇಶನ ಮಾಡಿದ್ದಾರೆ. ರಾಜೇಶ್ ರಾಮನಾಥ್ ಸಂಗೀತ ನೀಡಿದ್ದು, ಬಿ.ಎಚ್.ಮುರಳಿ ನಿರೂಪಣೆ ಮಾಡಿದ್ದಾರೆ. ನಯನಾ ಕಾವೇರಪ್ಪ ಭಾನೋಟ್ ಪಾತ್ರಕ್ಕೆ ಜೀವ ತುಂಬಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.