ಶೇಖರ್ ಸುಮನ್ ಮತ್ತೆ ಕಿರುತೆರೆ ಪ್ರವೇಶಿಸುತ್ತಿದ್ದಾರೆ. ಅವರ ಜನಪ್ರಿಯ ಕಾರ್ಯಕ್ರಮ `ಮೂವರ್ಸ್ ಅಂಡ್ ಶೇಕರ್ಸ್~ ಮೂಲಕ. ಆದರೆ ಈಗ ಇದು ಸಬ್ ಟಿವಿಯಲ್ಲಿ ಪ್ರಸಾರವಾಗಲಿದೆ.
ಮೂವರ್ಸ್ ಅಂಡ್ ಶೇಕರ್ಸ್‌ನಲ್ಲಿ ರಾಜಕಾರಣಿಗಳನ್ನು ಕಟುವಾಗಿ ಟೀಕಿಸುತ್ತ, ವ್ಯಂಗ್ಯ ಪ್ರಹಾರ ಮಾಡುವುದರಿಂದ ಸಾಮಾನ್ಯರ ನೆಚ್ಚಿನ ಕಾರ್ಯಕ್ರಮವಾಗಿ ಹೊರಹೊಮ್ಮಿತ್ತು. ಲಾಲು ಪ್ರಸಾದ್, ಶತೃಘ್ನ ಸಿನ್ಹಾ ಮುಂತಾದವರೆಲ್ಲ ಶೇಕರ್ಸ್‌ನೊಂದಿಗೆ ಮೂವ್ ಮಾಡಿದವರೇ ಆಗಿದ್ದರು.
ಈಗ ಕೆಲ ದಿನಗಳಿಂದ ಶೇಖರ್ ಸುಮನ್ ಜಾಹೀರಾತು ಸಬ್‌ಟಿವಿಯಲ್ಲಿ ಪ್ರಸಾರವಾಗುತ್ತಿದ್ದು, ವಿವಿಧ ವೇಷಗಳಲ್ಲಿ ಶೇಖರ್ ಕಾಣಿಸಿಕೊಳ್ಳುತ್ತಿದ್ದರು. ಮಾರ್ಚ್ 12ರಿಂದ ಈ ಕಾರ್ಯಕ್ರಮ ಆರಂಭವಾಗಲಿದೆ. ಅಣ್ಣಾ ಹಜಾರೆ ಮೊದಲ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಸಬ್ ಟಿವಿ ಘೋಷಿಸಿದೆ.
ಈ ಹಿಂದೆ ಸೋನಿ ಟೀವಿಗಾಗಿ ಕಾರ್ಯಕ್ರಮ ನಡೆಸಿಕೊಟ್ಟಿದ್ದ ಶೇಖರ್‌ವಿವಿಧ ಕ್ಷೇತ್ರಗಳಿಂದ 1500 ಗಣ್ಯರನ್ನು ಸಂದರ್ಶಿಸಿದ್ದರು. 52ರ ಹರೆಯದ ಶೇಖರ್ ಸುಮನ್‌ಗೆ ಈ ಸೀಸನ್‌ನಲ್ಲಿ ಮುಖಂಡರನ್ನು ಪ್ರಶ್ನಿಸಲು ಖುಷಿಯೆನಿಸುತ್ತದೆ ಎಂದು ಹೇಳಿದ್ದಾರೆ.
ಕಳೆದ ಸಲ ಬಂದವರನ್ನೇ ಮತ್ತೆ ಕರೆಯುವ ಸಾಧ್ಯತೆಗಳೂ ಇವೆ. ಬೊಮ್ಮನ್ ಇರಾನಿ ಮೂವರ್ಸ್‌ನಲ್ಲಿ ಪಾಲ್ಗೊಂಡಿದ್ದಾಗ ಕೇವಲ ಫೋಟೋಗ್ರಾಫರ್ ಆಗಿದ್ದರು. ಸಪೂರವಾಗಿದ್ದರು. ಈಗ ನಟರಾಗಿದ್ದಾರೆ. ಬೆಳೆದಿದ್ದಾರೆ. ಗಾತ್ರದಲ್ಲೂ ಎಂದು ನಕ್ಕು ಹೇಳುತ್ತಾರೆ ಶೇಖರ್. ಈ ಕಾರ್ಯಕ್ರಮ ಜನರ ಧ್ವನಿಯಾಗಿತ್ತು.
ಸಾಮಾನ್ಯರ ಅಭಿಪ್ರಾಯ ಹಾಗೂ ಅವರ ಟೀಕೆಗಳನ್ನೇ ಪ್ರತಿಬಿಂಬಿಸುವುದರಿಂದ ಜನಪ್ರಿಯವಾಗಿತ್ತು. ಈಗಲೂ ಇದೇ ಧೋರಣೆಯನ್ನೇ ಮುಂದುವರಿಸಿಕೊಂಡು ಬರಲಾಗುತ್ತದೆ ಎಂದು ಶೇಖರ್ ಸುಮನ್ ಹೇಳಿದ್ದಾರೆ. ಆದರೆ ಅಣ್ಣಾ ಈ ಕಾರ್ಯಕ್ರಮಕ್ಕೆ ಬರುವರೆ? ಮಾರ್ಚ್ 12ರವರೆಗೆ ಕಾಯಲೇಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.