ADVERTISEMENT

ಮನೆ ಮನೆ ಕಥೆಯ ಅಧಿಕಾರ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2012, 19:30 IST
Last Updated 9 ಆಗಸ್ಟ್ 2012, 19:30 IST
ಮನೆ ಮನೆ ಕಥೆಯ ಅಧಿಕಾರ
ಮನೆ ಮನೆ ಕಥೆಯ ಅಧಿಕಾರ   

ಸೊಸೆಯ ಗರ್ಭಪಾತ ಪ್ರಯತ್ನವನ್ನು ತನ್ನ ಬುದ್ಧಿವಂತಿಕೆಯಿಂದ ತಡೆಯುವ ಅತ್ತೆ, ಮಕ್ಕಳನ್ನು ತಿದ್ದಲು ಆತ್ಮವಿಶ್ವಾಸದ ಹಾದಿ ತುಳಿಯುವ ಅಮ್ಮ, ಮನೆಯ ಒಳಿತಿಗಾಗಿ ಪತಿಯ ವಿರುದ್ಧವೇ ತಿರುಗಿ ಬೀಳುವ ಪತ್ನಿ- `ಅಧಿಕಾರ~ ಸಿನಿಮಾದ ಪ್ರಧಾನ ಪಾತ್ರಧಾರಿಣಿಯ ವಿಶೇಷಣಗಳಿವು.
 
ತ್ಯಾಗಮಯಿ ಪಾತ್ರಗಳಿಗಿಂತ ಭಿನ್ನವಾದ ಹೆಣ್ಣುಮಗಳ ಚಿತ್ರಣ ಈ ಚಿತ್ರದಲ್ಲಿದೆಯಂತೆ. `ಅಧಿಕಾರ~ ಚಿತ್ರೀಕರಣ ಮುಗಿದು ತೆರೆಗೆ ಸಿದ್ಧವಾಗಿದೆ. ಇದೇ ತಿಂಗಳಲ್ಲಿ ಚಿತ್ರವನ್ನು ತೆರೆಗೆ ತರುವ ಉದ್ದೇಶ ಚಿತ್ರತಂಡದ್ದು.

ನಿರ್ದೇಶಕ ರಾಮನಾಥ ಋಗ್ವೇದಿ ಅವರಿಗೆ ತಮ್ಮ ಸಿನಿಮಾದ್ದು ಪ್ರತಿಯೊಂದು ಮನೆಯ ಕತೆ ಎನಿಸಿದೆ. `ಇತ್ತೀಚೆಗೆ ಮಹಿಳಾ ಪ್ರಧಾನ ಸಿನಿಮಾಗಳು ಕಡಿಮೆಯಾಗಿದ್ದವು. ಅವುಗಳ ಸಾಲಿಗೆ ಅಧಿಕಾರ ಸೇರುತ್ತದೆ. ಅಲ್ಲದೇ ಇದು ಕನ್ನಡಿಗರೇ ಮಾಡಿರುವ ಸ್ವಮೇಕ್ ಸಿನಿಮಾ~ ಎನ್ನುತ್ತಾ ಅವರು ಖುಷಿಯಾದರು.

ಚಿತ್ರದ ಪ್ರಧಾನ ಪಾತ್ರದಲ್ಲಿ ನಟಿಸಿರುವ ವಿನಯಾ ಪ್ರಸಾದ್ ಅವರಿಗೆ ಇಂದಿನ ವೇಗದ ಸಿನಿಮಾಗಳ ಕಾಲದಲ್ಲಿ ನಿರ್ಮಾಪಕರು ಇಂಥ ವಿಭಿನ್ನ ಕತೆಯ ಸಿನಿಮಾ ಮಾಡಲು ಮುಂದಾಗಿರುವುದೇ ಸಾಹಸ ಎನಿಸಿದೆ.

ಇನ್ನು ಕತೆಯನ್ನು ಮನಮುಟ್ಟುವಂತೆ ಹೇಳಿರುವ ನಿರ್ದೇಶಕರ ಕೆಲಸಕ್ಕೂ ಅವರ ಮೆಚ್ಚುಗೆ ಸಂದಾಯವಾಯಿತು. `ಕುಟುಂಬವನ್ನು ಪ್ರೀತಿಯ ಬೆಸುಗೆಯಲ್ಲಿ ಕಟ್ಟಿಹಾಕಲು ಪ್ರಯತ್ನಿಸುವ ಹೆಣ್ಣುಮಗಳ ಕತೆ ಇದು.

ಆತ್ಮವಿಶ್ವಾಸದಿಂದ ಕೆಲಸ ಸಾಧಿಸುವ ಆಕೆಗೆ ದೇವರ ದಯೆಯೂ ನೆರವಾಗುತ್ತದೆ. ದೇವರನ್ನು ನಂಬದವರೂ ಆತ್ಮವಿಶ್ವಾಸದಲ್ಲಿ ನಂಬಿಕೆ ಇಟ್ಟು ಇದನ್ನು ನೋಡಬಹುದು~ ಎಂಬ ಆಹ್ವಾನ ಅವರದು.

 ಮೂರೂವರೆ ದಶಕಗಳಿಂದ ಉದ್ಯಮದಲ್ಲಿ ಇರುವ ಕೆಸಿಎನ್ ವೇಣುಗೋಪಾಲ್ ಅವರ ನಿರ್ಮಾಣದ ಸಿನಿಮಾ ಇದು. `ಅಂತ~, `ನವಭಾರತ~, `ಇಂದಿನ ಭಾರತ~, `ಕದನ~, `ಖಡ್ಗ~ದಂಥ ಆಕ್ಷನ್ ಸಿನಿಮಾಗಳನ್ನು ನಿರ್ಮಿಸಿದ್ದ ತಮಗೆ, ಸಾಂಸಾರಿಕ ಸಿನಿಮಾ ಮಾಡುವಾಸೆ ಇದೀಗ ಈಡೇರುತ್ತಿದೆ ಎಂದು ಸಂತೋಷ ಹಂಚಿಕೊಂಡರು.

`ಇವತ್ತಿನ ಟ್ರೆಂಡ್‌ಗೆ ಎದುರಾಗಿ ಈ ಸಿನಿಮಾ ಮಾಡಿರುವೆ. ನನಗೆ ಕತೆ ತುಂಬಾ ಇಷ್ಟವಾಯಿತು. ಕತೆಗೆ ಕೊರತೆಯಾಗದಂತೆ ಬಜೆಟ್ ಒದಗಿಸಿರುವೆ. ನನ್ನ ಇದುವರೆಗಿನ 18 ಸಿನಿಮಾಗಳಲ್ಲಿ `ಅಧಿಕಾರ~ ತುಂಬಾ ಇಷ್ಟವಾದ ಸಿನಿಮಾ~ ಎಂದು ವೇಣುಗೋಪಾಲ್ ಹೇಳಿದರು.

ಅವರಿಗೆ ಪುಟ್ಟಣ್ಣ ಕಣಗಾಲ್ ಅವರಿಂದ ಸಿನಿಮಾ ಮಾಡಿಸಬೇಕು ಎನ್ನುವ ಆಸೆ ಇತ್ತಂತೆ. ಹಾಗೆಯೇ ವಿಷ್ಣುವರ್ಧನ್ ಅವರಿಗಾಗಿ `ಮೋಡದ ಮನೆ~ ಎಂಬ ಕಾದಂಬರಿಯನ್ನು ಸಿನಿಮಾ ಮಾಡುವ ಆಸೆ ಇತ್ತಂತೆ. ಎರಡೂ ಈಡೇರಲಿಲ್ಲ ಎನ್ನುವ ಕೊರಗಿಗೆ ಮುಲಾಮಿನ ರೂಪದಲ್ಲಿ `ಅಧಿಕಾರ~ ಮೂಡಿಬಂದಿದೆಯಂತೆ.

ಛಾಯಾಗ್ರಾಹಕ ಎಸ್.ಮನೋಹರ್, ಆರಂಭದಲ್ಲಿ ತಮ್ಮಂದಿಗೆ ಕೆಲಸ ಮಾಡಲು ನಿರಾಕರಿಸಿದ್ದ ನಿರ್ದೇಶಕರು ನಂತರ ತಮ್ಮನ್ನು ಮೆಚ್ಚಿಕೊಂಡಿದ್ದು ಖುಷಿ ಕೊಟ್ಟಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.