ADVERTISEMENT

ಮರ್ಯಾದೆಯ ಹಾದಿಯಲ್ಲಿ...

​ಪ್ರಜಾವಾಣಿ ವಾರ್ತೆ
Published 9 ಜೂನ್ 2011, 19:30 IST
Last Updated 9 ಜೂನ್ 2011, 19:30 IST
ಮರ್ಯಾದೆಯ ಹಾದಿಯಲ್ಲಿ...
ಮರ್ಯಾದೆಯ ಹಾದಿಯಲ್ಲಿ...   

ಬೀದರ್ - ಹುಮನಾಬಾದ್ ರಸ್ತೆ. ಲೊಕೇಶನ್ ನೋಡಿಕೊಂಡು ಬರುತ್ತಿದ್ದ ಚಿತ್ರತಂಡದ ವಾಹನಕ್ಕೆ ಲಾರಿ ಡಿಕ್ಕಿಯಾಯಿತು. ನಿರ್ದೇಶಕ ಹಾಗೂ ಛಾಯಾಗ್ರಾಹಕ ಸೇರಿದಂತೆ ಹಲವರಿಗೆ ಗಾಯ. ನಿರ್ದೇಶಕರಿಗೆ ಚಿಕಿತ್ಸೆ ನೀಡಿದ ವೈದ್ಯರು- `ಮೂರು ತಿಂಗಳು ಮನೆಯಿಂದ ಹೊರಗೆ ಬರಬಾರದು~ ಎಂದು ತಾಕೀತು ಮಾಡಿದರು.
 
ಆದರೆ, ಸುಮ್ಮನಿರುವುದು ಹೇಗೆ? ಮುಹೂರ್ತ ನಿಕ್ಕಿಯಾಗಿತ್ತು. ಚಿತ್ರೀಕರಣಕ್ಕೆ ಸಿದ್ಧತೆಗಳಾಗಿದ್ದವು. ಕಲಾವಿದರ ಡೇಟ್ಸ್ ಹೊಂದಾಣಿಕೆಯಾಗಿತ್ತು. ನಿರ್ದೇಶಕ ಹಾಗೂ ಛಾಯಾಗ್ರಾಹಕ ಗಿರಿ ಧೈರ್ಯಮಾಡಿ ಶೂಟಿಂಗ್‌ಗಿಳಿದೇ ಬಿಟ್ಟರು. ಇವರಿಬ್ಬರ ಧೈರ್ಯ ನೋಡಿ ನಿರ್ಮಾಪಕರು ಮಾತು ಮರೆತವರಂತೆ ನಿಂತಿದ್ದರು.

ಇದು `ಮರ್ಯಾದೆ ರಾಮಣ್ಣ~ ಚಿತ್ರತಂಡದ ಕಥೆ. ಸಿನಿಮಾ ಆರಂಭದಲ್ಲಿ ನಡೆದ ಈ ಅಪಘಾತದ ಕಹಿ ಈಗ ನಿರ್ದೇಶಕ ಗುರುಪ್ರಸಾದ್‌ರಿಗೆ ಒಂದು ನೆನಪಾಗಿಯಷ್ಟೇ ಉಳಿದಿದೆ. `ಸಿನಿಮಾ ಚೆನ್ನಾಗಿ ಬಂದಿದೆ~ ಎನ್ನುವ ಆತ್ಮತೃಪ್ತಿಯೇ ಅವರ ಎಲ್ಲ ನೋವುಗಳನ್ನು ಮರೆಸಿದೆಯಂತೆ.

ಗುರುಪ್ರಸಾದ್ ಪ್ರಕಾರ, `ಮರ್ಯಾದೆ ರಾಮಣ್ಣ~ ಚಿತ್ರದ ಮೂಲಕ ಕನ್ನಡ ಪ್ರೇಕ್ಷಕರಿಗೆ ಒಂದಷ್ಟು ಹೊಸ ಲೊಕೇಶನ್‌ಗಳನ್ನು ನೋಡುವ ಅವಕಾಶ ದೊರೆಯಲಿದೆ.

ಇವುಗಳಲ್ಲಿ ಮುಖ್ಯವಾದುದು ಬೀದರ್‌ಗೆ ಸಮೀಪದ ದುಬಲ್ ಗುಂಡಿ ಎನ್ನುವ ಸಣ್ಣ ಗ್ರಾಮದಲ್ಲಿನ ಹಳೆಯ ಮನೆ. ನಿಜಾಮರ ಕಾಲದ ಈ ವಾಡೆಯನ್ನು ಸಿನಿಮಾದಲ್ಲಿ ವಿಶಿಷ್ಟವಾಗಿ ಬಳಸಿಕೊಳ್ಳಲಾಗಿದೆಯಂತೆ. ಈ ವಾಡೆಗೂ ಮೊದಲು ಚಿತ್ರತಂಡ ಆಂಧ್ರದ ಕುಕ್ಕಲಪಲ್ಲಿ ಎನ್ನುವಲ್ಲಿ ಎರಡೂವರೆ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಸೆಟ್ ಒಂದರಲ್ಲಿ ಚಿತ್ರೀಕರಣ ನಡೆಸಲು ಚಿಂತಿಸಿತ್ತು. ಆದರೆ, ಅಲ್ಲಿ ಬಂಗಾಳಿ ಚಿತ್ರವೊಂದು ಬೀಡುಬಿಟ್ಟ ಕಾರಣ ಕನ್ನಡದ ರಾಮಣ್ಣ ಬೀದರ್‌ನತ್ತ ಬರಬೇಕಾಯಿತು.

ಬೀದರ್ ಪರಿಸರದಲ್ಲಿನ ಚಿತ್ರೀಕರಣದ ಅನುಭವ ಚಿತ್ರತಂಡಕ್ಕೆ ಅವಿಸ್ಮರಣೀಯವಾಗಿದೆ. ಶೂಟಿಂಗ್ ಮುಗಿದು ಹೊರಡುವಾಗ ವಾಡೆಯ ಮಂದಿ ಭಾವುಕರಾಗಿದ್ದರಂತೆ. ಅವರು, ಚಿತ್ರತಂಡದ ಎಲ್ಲರಿಗೂ ಸನ್ಮಾನ ಮಾಡುವ ಮೂಲಕ ಅಭಿನಂದಿಸಿದರಂತೆ. ಶೂಟಿಂಗ್ ಮುಗಿದ ನಂತರವೂ ಇಂಥ ಆರ್ದ್ರತೆ ಉಳಿಯುದು ಅಪರೂಪ ಎನ್ನುವುದು ಚಿತ್ರತಂಡದ ಅನುಭವ. ಅಂದಹಾಗೆ, ಬೀದರ್‌ನತ್ತ ಸಿನಿಮಾ ಮಂದಿ ಬರುವುದು ಅಪರೂಪ. ಆ ಕಾರಣಕ್ಕಾಗಿ ಅಲ್ಲಿನ ಜನರಿಗೆ ಕಲಾವಿದರ ಬಗ್ಗೆ ಬೆರಗಿನ್ನೂ ಉಳಿದುಕೊಂಡಿದೆ. ಚಿತ್ರದ ಶೂಟಿಂಗ್ ನಡೆಯುವ ಸಂದರ್ಭದಲ್ಲಿ ಪ್ರತಿದಿನವೂ ಸಾವಿರಾರು ಮಂದಿ ಗುಂಪಾಗಿ ಜಾತ್ರೆಯ ವಾತಾವರಣ ಸೃಷ್ಟಿಯಾಗುತ್ತಿತ್ತಂತೆ.

 ಆಂಧ್ರಪ್ರದೇಶದಲ್ಲಿನ ಅಗಸ್ತ್ಯಕೋನದಲ್ಲಿ ನಡೆಸಿರುವ ಚಿತ್ರೀಕರಣ ಕೂಡ ಸಿನಿಮಾದ ಹೈಲೈಟ್‌ಗಳಲ್ಲಿ ಒಂದು ಎನ್ನುವುದು ನಿರ್ದೇಶಕರ ಅನಿಸಿಕೆ.

ನಾಯಕನಟ ಕೋಮಲ್ ವಿಷಯಕ್ಕೆ ಬಂದಾಗ ನಿರ್ದೇಶಕ ಗುರುಪ್ರಸಾದ್ ಹಾಗೂ ನಿರ್ಮಾಪಕರ ಕುಮರೇಶ್ ಬಾಬು ಧ್ವನಿ ಮೆದುವಾಗುತ್ತದೆ. ಕಡಪಾದ ಕಲ್ಲುಮುಳ್ಳಿನ ನೆಲ ಹಾಗೂ ಧಗೆಯ ಪರಿಸರದಲ್ಲಿ ಕೋಮಲ್ 60-70 ಕಿ.ಮೀ. ಸೈಕಲ್ ತುಳಿದಿದ್ದನ್ನು, ಡೂಪ್ ಇಲ್ಲದೆ ಸಾಹಸ ದೃಶ್ಯಗಳಲ್ಲಿ ಭಾಗವಹಿಸಿದ್ದನ್ನು, ಸಿಕ್ಕಾಪಟ್ಟೆ ಕಷ್ಟಪಟ್ಟು ಡಾನ್ಸ್ ಮಾಡಿದ್ದನ್ನು ನೆನಪಿಸಿಕೊಳ್ಳುವ ಅವರು ಹೇಳುವುದು- `ಕೋಮಲ್‌ರಂಥ ನಾಯಕರಿದ್ದರೆ ಯಾವ ನಿರ್ಮಾಪಕರಿಗೂ ತೊಂದರೆಯಾಗುವುದಿಲ್ಲ~.

ಸಿನಿಮಾದ ಬಿಡುಗಡೆ ಬಗ್ಗೆ ಕೂಡ ಕಾಳಜಿ ವಹಿಸುತ್ತಿರುವ ಕೋಮಲ್, ಪ್ರಚಾರ ಕಾರ್ಯವನ್ನು ಭಿನ್ನವಾಗಿ ಯೋಜಿಸಿದ್ದಾರಂತೆ. ನೂರಾರು ಮಂದಿ ರಾಜ್ಯಾದ್ಯಂತ ಸೈಕಲ್ ಜಾಥಾ ನಡೆಸುವ ಮೂಲಕ ಪ್ರೇಕ್ಷಕರ ಗಮನಸೆಳೆಯುವುದು ಈ ತಂತ್ರಗಳಲ್ಲೊಂದು.

ತೆಲುಗಿನ `ಮರ್ಯಾದಾ ರಾಮನ್ನ~ ಚಿತ್ರದ ರೀಮೇಕಾದರೂ, ತೆಲುಗಿನ ಕಥೆಯನ್ನು ಕನ್ನಡಕ್ಕೆ ಒಗ್ಗಿಸಿಕೊಳ್ಳಲಾಗಿದೆ, ಕೋಮಲ್‌ರನ್ನು ಭಿನ್ನವಾಗಿ ತೋರಿಸಲಾಗಿದೆ ಎನ್ನುವ ನಿರ್ದೇಶಕರಿಗೆ ಚಿತ್ರವನ್ನು ಎಲ್ಲ ವರ್ಗದ ಪ್ರೇಕ್ಷಕರಿಗೆ ಇಷ್ಟವಾಗುವಂತೆ ರೂಪಿಸಿರುವ ನಂಬಿಕೆಯಿದೆ. ಅಂದಹಾಗೆ, ಪ್ರಸ್ತುತ `ಮರ್ಯಾದೆ ರಾಮಣ್ಣ~ ಚಿತ್ರದ ಡಬ್ಬಿಂಗ್ ನಡೆಯುತ್ತಿದೆ. ಒಂಚೂರು ಗ್ರಾಫಿಕ್ಸ್ ಕೆಲಸ ಬಾಕಿಯಿದೆ.  ಎಲ್ಲ ಅಂದುಕೊಂಡಂತೆ ಆದರೆ, ಜುಲೈ ಮಧ್ಯದಲ್ಲಿ ಚಿತ್ರವನ್ನು ತೆರೆಕಾಣಿಸುವುದು ನಿರ್ಮಾಪಕರ ಕುಮರೇಶ್ ಬಾಬು ಉದ್ದೇಶ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.