ADVERTISEMENT

ಮಳೆಯಲಿ ಮಿಂದ ಅಂದರ್ ಬಾಹರ್

​ಪ್ರಜಾವಾಣಿ ವಾರ್ತೆ
Published 12 ಜುಲೈ 2012, 19:30 IST
Last Updated 12 ಜುಲೈ 2012, 19:30 IST

ಹಿನ್ನೆಲೆಗೆ ದಟ್ಟ ಮೋಡ, ಕಡಿದಾದ ಪರ್ವತ. ಒಂಟಿ ಮರ, ನಭದಿಂದ ಚಾಚಿಕೊಂಡಂಥ ಬಿಳಲು. ಪಕ್ಕದಲ್ಲಿಯೇ ಕೊಳ. `ಮಳೆಯಲಿ ಮಿಂದ ಹೂವಿನ ಹಾಗೆ ಮಿನುಗುವೆಯೇಕೆ ನನ್ನೊಳಗೆ~ ಹಾಡು ತೇಲಿ ಬರುತ್ತಿದೆ. `ಆ್ಯಕ್ಷನ್~ ಆದೇಶಕ್ಕೆ ಯೋಧರಂತೆ ಅಣಿಯಾಗಿದ್ದಾರೆ ನಟ ಶಿವರಾಜ್‌ಕುಮಾರ್. ಪಕ್ಕದಲ್ಲಿ ಹೂವಿನಂಥ ಹುಡುಗಿ ಪಾರ್ವತಿ. 

 `ಅಂದರ್‌ಬಾಹರ್~ ಚಿತ್ರದ ಮೊದಲ ಹಾಡಿನ ಒಳಾಂಗಣ ಚಿತ್ರೀಕರಣ ಬೆಂಗಳೂರಿನ ಅಬ್ಬಾಯಿನಾಯ್ಡು ಸ್ಟುಡಿಯೊದಲ್ಲಿ ಸಾಗಿತ್ತು. ಹಾಡು ಬರೆದವರು ಜಯಂತ ಕಾಯ್ಕಿಣಿ. ರಮ್ಯ ಪ್ಯಾಥೊ ಹಾಡದು. ಇಮ್ರಾನ್ ಸರ್ದಾರಿಯಾ ಹಾಡಿನ ನೃತ್ಯ ನಿರ್ದೇಶಕರು. ಅದೇ ಹಾಡಿನ ಕೆಲ ಭಾಗಗಳನ್ನು ರಾಕ್‌ಲೈನ್ ಸ್ಟುಡಿಯೋದಲ್ಲಿ ಕೂಡ ಚಿತ್ರೀರಿಸಲಾಗಿದೆ.

ಸಂಗೀತ ನಿರ್ದೇಶಕ ವಿಜಯ ಪ್ರಕಾಶ್ ಅವರ ನಾದ ಜ್ಞಾನವನ್ನು ಹೊಗಳಿದರು ಶಿವರಾಜ್‌ಕುಮಾರ್. ಜತೆಗೆ `ಶಿವ~ ಚಿತ್ರದಲ್ಲಿ ಅವರು ಹಾಡಿರುವ ಊಸರವಳ್ಳಿ ಹಾಡನ್ನೂ ನೆನಪಿಸಿಕೊಂಡರು. ರೌದ್ರಭಾವ ಹುಟ್ಟಿಸುವ ಕ್ಲೈಮ್ಯಾಕ್ಸ್ ಗೀತೆಯನ್ನು `ಅಪ್ಸರಕೊಂಡ~ ಜಲಪಾತದ ಬಳಿ ಚಿತ್ರೀಕರಿಸಬೇಕು ಎಂಬುದು ಅವರ ಅಭಿಲಾಷೆ.
 
`ಓಂ~ ಬಳಿಕ ಮೂಡಿಬರುತ್ತಿರುವ ಭೂಗತ ಜಗತ್ತನ್ನು ಕುರಿತ ಮಹತ್ವದ ಚಿತ್ರ ಅಂದರ್‌ಬಾಹರ್. ಲಾಂಗು ಮಚ್ಚು ಇದ್ದರೂ ಇದೊಂದು ವಿಶೇಷ ಚಿತ್ರ. ಕಾರಣ ಪ್ರೇಕ್ಷಕರು ಚಿತ್ರದಲ್ಲಿ ಒಳ ಪ್ರವಾಹವೊಂದನ್ನು ಕಾಣಬಹುದು ಎಂದರು ಶಿವಣ್ಣ.

ಚಿತ್ರಕ್ಕಿರುವುದು ಒಟ್ಟು ಐದು ಹಾಡುಗಳು. ಎರಡನ್ನು ಜಯಂತ ಕಾಯ್ಕಿಣಿ, ತಲಾ ಒಂದೊಂದು ಹಾಡನ್ನು ಯೋಗರಾಜ್ ಭಟ್ ಹಾಗೂ ಕವಿರಾಜ್ ಬರೆದಿದ್ದಾರೆ. ಉಳಿದ ಒಂದು ಹಾಡನ್ನು ಯಾರಿಂದ ರಚಿಸಬೇಕು ಎಂಬ ಚಿಂತನೆಯಲ್ಲಿದ್ದಾರೆ ಚಿತ್ರದ ನಿರ್ದೇಶಕ ಫಣೀಶ್. ಸಿಕ್ಕಿಂ ರಾಜಧಾನಿ ಗ್ಯಾಂಗ್‌ಟಕ್‌ನಲ್ಲಿ ಹಾಡೊಂದರ ಚಿತ್ರೀಕರಣ ನಡೆಯಲಿದೆ.

ಕತೆಗೆ ಒಗ್ಗದ ಕಾರಣ ವಿದೇಶದಲ್ಲಿ ಹಾಡುಗಳನ್ನು ಚಿತ್ರೀಕರಿಸುವುದಿಲ್ಲವಂತೆ.
ಶಿವಣ್ಣ ಇದ್ದರೆ ಸಾಕು ಜನರೇಟರ್ ಬೇಡ. ಅಷ್ಟು ಶಕ್ತಿ ಅವರೊಳಗಿದೆ ಎಂದು ಹೊಗಳಿದ್ದು ನಟಿ ಪಾರ್ವತಿ. ಯೋಜನಾಬದ್ಧವಾಗಿ ಚಿತ್ರೀಕರಣ ನಡೆಯುತ್ತಿರುವುದಕ್ಕೆ ಅವರಿಗೆ ಅಪಾರ ಖುಷಿ.

ಇನ್ನು ಶಿವಣ್ಣ ಹಾಗೂ ತಮ್ಮ ನಡುವೆ ನಡೆಯುವ ವಾಗ್ವಾದಗಳನ್ನು ಬಿಚ್ಚಿಟ್ಟಿದ್ದು ಇಮ್ರಾನ್. ಒಳಾಂಗಣ ಚಿತ್ರೀಕರಣ, ಹಾಡಿನ ಭಂಗಿ ಮುಂತಾದವುಗಳ ಬಗ್ಗೆ ಅವರ ನಡುವೆ ಸದಾ ಮಾತಿನ ಚಕಮಕಿ ನಡೆಯುತ್ತಲೇ ಇರುತ್ತದಂತೆ. ತಮ್ಮ ಧೋರಣೆಯನ್ನು `ಕೊಬ್ಬು~ ಎಂದು ಹಾಸ್ಯದ ಧಾಟಿಯಲ್ಲಿ ಬಿಂಬಿಸಿಕೊಂಡದ್ದು ಶಿವಣ್ಣ. ಚಿತ್ರದ ಒಳಿತಿಗಾಗಿ ಅಂಥ ವಾಕ್ಸಮರ ಸಹಜ ಎನ್ನುವುದು ಇಬ್ಬರ ಅಭಿಪ್ರಾಯ.

ಚಿತ್ರದಲ್ಲಿ ಪ್ರಮುಖ ಪಾತ್ರಧಾರಿಯಾಗಿ ಕಾಣಿಸಿಕೊಳ್ಳುತ್ತಿರುವ `ಸಿದ್ಲಿಂಗು~, `ಕೂರ್ಮಾವತಾರ~ ಖ್ಯಾತಿಯ ಚಸ್ವಾ ನೀನಾಸಂ ಶಿವರಾಜ್‌ಕುಮಾರ್ ಜತೆ ನಟಿಸುವುದು ತುಂಬಾ ಸಡಗರದ ಸಂಗತಿ. ಅಂಥ ಪ್ರಮುಖ ನಟನೊಂದಿಗೆ ನಟಿಸುವುದು ಹೇಗೆ ಎಂದು ದಿಕ್ಕು ತೋಚದಾದಾಗ ಅವರನ್ನು ಪ್ರೋತ್ಸಾಹಿಸಿದ್ದು ಶಿವಣ್ಣನವರೇ ಅಂತೆ.

ಚಿತ್ರದ ಲೆಕ್ಕಾಚಾರ ಕುರಿತು ಮಾತನಾಡಿದವರು ನಿರ್ಮಾಪಕರಲ್ಲಿ ಒಬ್ಬರಾದ ರಜನೀಶ್ ಬಾಬು. ಐವತ್ತು ದಿನಗಳಿಂದ ಶೂಟಿಂಗ್ ನಡೆದಿದ್ದು ಶೇ 70ರಷ್ಟು ಚಿತ್ರೀಕರಣ ಬಾಕಿ ಇದೆಯಂತೆ.ಅರುಂಧತಿ ನಾಗ್, ಶ್ರೀನಾಥ್ ಚಿತ್ರದಲ್ಲಿ ಅಭಿನಯಿಸುತ್ತಿದ್ದು ಗೋವಾ, ಗೋಕರ್ಣ ಮುಂತಾದ ಕಡೆ ಚಿತ್ರೀಕರಣ ಸಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.