ADVERTISEMENT

ಮೈ ಮನಗಳ ಸುಳಿಯಲ್ಲಿ

ಪೂರ್ವಿ
Published 6 ಆಗಸ್ಟ್ 2011, 19:30 IST
Last Updated 6 ಆಗಸ್ಟ್ 2011, 19:30 IST
ಮೈ ಮನಗಳ ಸುಳಿಯಲ್ಲಿ
ಮೈ ಮನಗಳ ಸುಳಿಯಲ್ಲಿ   

`ಅಪ್ಪ ಒಂದೇ ಒಂದು ಸಲ ಸಿಕ್ಸ್ ಪ್ಯಾಕ್ ಮಾಡಿ ತೋರಿಸಪ್ಪಾ~- ಕರುಳಕುಡಿಯಿಂದ ಬಂದ ಈ ಕರೆಯನ್ನು ಕಣ್ಣಿಗೊತ್ತಿಕೊಂಡು ಶಾರುಖ್ ಖಾನ್ ಪಕ್ಕೆಯ ಮೂಳೆಗಳ ಮೇಲಿನ ಮಾಂಸವನ್ನು ಆರು ಮಡಿಕೆಗಳಾಗಿ ಮಾಡಿಯೇ ಬಿಟ್ಟರು. `ಓಂ ಶಾಂತಿ ಓಂ~ ಚಿತ್ರದಲ್ಲಿ `ದರ್ದೆ ಡಿಸ್ಕೋ~ ಹಾಡಿನಲ್ಲಿ ಶಾರೂಖ್‌ರ ಆರು ಮಡಿಕೆಯ ದಿವ್ಯ ಪ್ರದರ್ಶನ ನಡೆಯಿತು.

ಅತಿ ತುಂಡು ಕೂದಲ ನಡುವೆ ವಿಚಿತ್ರವಾಗಿ ಸೀಳಿದಂಥ ಬೈತಲೆ. ಭೀಮಬಲದ ಭುಜಗಳು. ಎದೆಮೇಲೆಲ್ಲಾ ಹರಡಿಕೊಂಡ ವಿಲಕ್ಷಣ ಹಚ್ಚೆಯ ಬರೆಹ. ಕಣ್ಣಲ್ಲಿ ಕೊಲ್ಲುವಷ್ಟು ಆಕ್ರೋಶ. `ಗಜಿನಿ~ ಸಿನಿಮಾದ ಅಮೀರ್ ಖಾನ್ ಹೀಗೆ `ಖಂಡವಿದೆ ಕೋ ಮಾಂಸವಿದೆ ಕೋ~ ಎಂದು ನಿಂತದ್ದೇ ಸಿನಿಮಾ ದುಡ್ಡು ಬಾಚಿಹಾಕಿತು.

ಈಗ ಅಜಯ್ ದೇವಗನ್ ಮೈ ಹುರಿ ಮಾಡಿಕೊಂಡಿದ್ದಾರೆ; ಅದೂ ರೀಮೇಕ್ ಚಿತ್ರಕ್ಕೆ. `ಸಿಂಘಂ~ನ ಬಾಜಿರಾವ್ ಪಾತ್ರದಲ್ಲಿ ಅವರು ಸೂಪರ್ ಕಾಪ್. ಅವರ ಮೈಕಟ್ಟು ನೋಡಿ ಹರೆಯ ಕೂಡ ಬೆವರತೊಡಗಿದೆ.

ಒಂದು ಕಾಲದ `ಕರ್ಜ್~ ಚಿತ್ರದ ಆತ್ಮವುಳ್ಳ `ಓಂ ಶಾಂತಿ ಓಂ~ ಆಗಲೀ, ತಮಿಳಿನದ್ದೇ ರೀಮೇಕ್ ಆದ `ಗಜಿನಿ~ ಆಗಲೀ ಬಾಲಿವುಡ್ ತನ್ನದೇ ಎಂದು ಹೇಳಿಕೊಳ್ಳುವ ಚಿತ್ರಗಳಲ್ಲ. ಅವೆಲ್ಲಾ ಕಡ ತಂದದ್ದು. ಪಾತ್ರಗಳನ್ನು ಕಡೆದವರು ದಕ್ಷಿಣದ ನಿರ್ದೇಶಕರು. `ಓಂ ಶಾಂತಿ ಓಂ~ನ ಛಾಯಾಗ್ರಾಹಕ ದಕ್ಷಿಣ ಭಾರತದವರಾದರೆ, `ಸಿಂಘಂ~ನಲ್ಲಿ ಅಜಯ್ ದೇವಗನ್‌ಗೆ ತಕ್ಕಂತೆ ಪಾತ್ರವನ್ನು ಪಾಲಿಷ್ ಮಾಡಿದ್ದು ರೋಹಿತ್ ಶೆಟ್ಟಿ ಎಂಬ ಮಂಗಳೂರು ಮೂಲದ ನಿರ್ದೇಶಕ.

ಗುರುದತ್, ರಾಜ್‌ಕಪೂರ್, ಶಮ್ಮಿ ಕಪೂರ್, ಸಂಜೀವ್ ಕಪೂರ್, ರಾಜೇಶ್ ಖನ್ನಾ, ಅಮಿತಾಬ್ ಬಚ್ಚನ್, ಗೋವಿಂದ, ರಿಶಿ ಕಪೂರ್ ಮೊದಲಾದ ನಾಯಕರ‌್ಯಾರೂ ಶರೀರದ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಅಷ್ಟೇಕೆ, ಶಾರುಖ್ ಖಾನ್ ಕೂಡ ಅಭಿನಯ, ಅತಿ ಅಭಿನಯ ನೆಚ್ಚಿಕೊಂಡೇ ಬಣ್ಣ ಹಚ್ಚಿದವರು. ಅಮೀರ್ ಖಾನ್ ಅಂತೂ ಚಾಕೊಲೇಟ್ ಹೀರೋ ಅಂತಲೇ ಅನ್ನಿಸಿಕೊಂಡವರು. ಜಾಕಿ ಶ್ರಾಫ್ ಎತ್ತರದ ನಿಲುವಿಗೆ ಸೆಡ್ಡು ಹೊಡೆಯುವಂಥ ಆಕೃತಿಯಾಗಿ ಸಂಜಯ್ ದತ್ ಉದಯವಾಯಿತು.

ದೇಹವನ್ನು ಇಷ್ಟದಂತೆ ಬಾಗಿಸುವ ಗುಣ ಅಕ್ಷಯ್ ಕುಮಾರ್‌ಗೆ ಸಿದ್ಧಿಸಿತ್ತು. ಮೊದಲಿನಿಂದಲೂ ಕಸರತ್ತಿನ ಆಸಕ್ತಿ ಉಳಿಸಿಕೊಂಡು ಬಂದಿದ್ದ ಸಲ್ಮಾನ್ ಖಾನ್ ಇಂದಿಗೂ ಅಂಗಿ ಕಳಚಿ, ಅಂಗಸೌಷ್ಟವ ತೋರುವುದರಲ್ಲಿ ಏನೋ ಸುಖವಿದೆ ಎಂದೇ ಭಾವಿಸಿದ್ದಾರೆ. ಹಾಸ್ಯ ಚಕ್ರವರ್ತಿಯಾಗುವ ಒಲವಿಟ್ಟುಕೊಂಡು ಬಂದ ಸೈಫ್ ಅಲಿ ಖಾನ್ ಕೂಡ ಬನಿಯನ್ ಜಾಹೀರಾತಿನಲ್ಲಿ ಮೈಕಟ್ಟು ತೋರುವ ಮಟ್ಟಕ್ಕೆ ಬೆಳೆದಿದ್ದಾರೆ.

ಇಂಥ ಸಂದರ್ಭದಲ್ಲಿ ಹೃತಿಕ್ ರೋಷನ್ ಪ್ರವೇಶವಾಯಿತು. ತೆರೆಮೇಲೆ ಮೂಡುವ ಹೊತ್ತಿಗೇ ದೇಹಾಕಾರವೇ ಪ್ರಧಾನ ಎಂಬ ಭಾವನೆಯನ್ನು ಬಾಲಿವುಡ್ ಪ್ರತಿಬಿಂಬಿಸುವಂತಿತ್ತು ಹೃತಿಕ್ ಮೈಕಟ್ಟು. ಮೂರ‌್ನಾಲ್ಕು ಚಿತ್ರಗಳು ಬಂದಮೇಲೆ `ನನ್ನ ಮೈಬಿಟ್ಟು ಮನಸ್ಸನ್ನೂ ತೋರುವ ಸಿನಿಮಾ ಬರುವುದೆಂದು?~ ಎಂದು ಅವರು ಅಲವತ್ತುಕೊಂಡರು. `ಗುಜಾರಿಶ್~ನಲ್ಲಿ ಅಪರೂಪವಾದ ಪಾತ್ರದಲ್ಲಿ ಕಾಣಿಸಿಕೊಂಡರು. ಆದರೆ, ಹೃತಿಕ್ ಜನರಿಗೆ ಹಿಡಿಸುವುದು ಮೈಕಟ್ಟಿನಿಂದಲೇ ಹೊರತು ಮನಸ್ಸಿನಾಟದಿಂದಲ್ಲ. ಅಜಯ್ ದೇವಗನ್‌ಗೂ ಅದು ಅರ್ಥವಾಗಿದೆ. ಅದಕ್ಕೇ ಅವರು `ಸಿಂಘಂ~ ಆಗಲು ದೇಹವನ್ನು ವಿಪರೀತ ದಂಡಿಸಿದ್ದು. ನಲವತ್ತು ದಾಟಿದ ಮೇಲೆ ಮೈ ಹುರಿ ಮಾಡಿಕೊಂಡಿದ್ದೇಕೆ? ಅದು ಸಿಕ್ಸ್ ಪ್ಯಾಕೋ, ಎಯ್ಟ ಪ್ಯಾಕೋ? ಈ ಪ್ಯಾಕ್ ಇನ್ನೂ ಎಷ್ಟು ದಿನ ಉಳಿಯುತ್ತದೆ? ಇದಕ್ಕೆ ಯಾವ್ಯಾವ ನಟರು ಸ್ಫೂರ್ತಿ? ಹುಡುಗಿಯರು ಹಿಂದೆ ಬೀಳುವುದು ಹೆಚ್ಚಾಗಿದೆಯೇ? ಕಾಜೋಲ್ ಇಷ್ಟಪಟ್ಟರೆಂಬ ಕಾರಣಕ್ಕೆ ಹೀಗೆ ಮಾಡಿದ್ದಾ?- ಇಂಥ ಸಾಲುಸಾಲು ಪ್ರಶ್ನೆಗಳು ಈಗ ಅಜಯ್ ದೇವಗನ್ ಎದುರಲ್ಲಿವೆ. ಆದರೆ, ಎಲ್ಲಕ್ಕೂ ಅವರ ಉತ್ತರ- `ಗೊತ್ತಿಲ್ಲ~.
ಖಾಸಗಿ ವಿಚಾರವನ್ನು ಹಂಚಿಕೊಳ್ಳಲು ಇಷ್ಟಪಡದ ಅಜಯ್ ಕೂಡ ಮೈ ಮಾ(ರಾ)ಟ ಮಾಡಿದ್ದಾರೆ. ಅರ್ಥಾತ್ `ಸಿಂಘಂ~ನಲ್ಲಿನ ಅವರ ಶರೀರ ದರ್ಶನ ಅಭಿಮಾನಿಗಳಿಗೆ ಹಿಡಿಸಿದ್ದು, ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಗೆದ್ದಿದೆ. ಇದೀಗ ಬಂದ ಜೋಕ್- `ದಕ್ಷಿಣ ಭಾರತದ ಆ್ಯಕ್ಷನ್ ಪ್ರಧಾನ ಚಿತ್ರಗಳನ್ನು ಹೊತ್ತೊಯ್ದು ಬಾಲಿವುಡ್‌ನ ಮಧ್ಯಮವಯಸ್ಕ ನಟರ ಮೈಹುರಿ ಮಾಡಿಸಿ ಸಿನಿಮಾ ತೆಗೆದರೆ ಶುಭಂ; ಎನ್ನುತ್ತಿದೆ `ಸಿಂಘಂ~ ಕಲೆಕ್ಷನ್~! ಅಂದಹಾಗೆ, ಮೊನ್ನೆಯಷ್ಟೆ ಕಾಜೋಲ್ ತಮ್ಮ ಪತಿ ದೇವರಾದ ಅಜಯ್ ದೇವಗನ್‌ಗೆ ಅಭ್ಯಂಜನ ಮಾಡಿಸಿ ದೇಹಾಕಾರ ಮುಟ್ಟಿ ಕೃತಾರ್ಥರಾದರಂತೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.