ADVERTISEMENT

ಮೋಸಗಾರ ರಾಮಾಚಾರಿ!

​ಪ್ರಜಾವಾಣಿ ವಾರ್ತೆ
Published 1 ಜೂನ್ 2018, 19:30 IST
Last Updated 1 ಜೂನ್ 2018, 19:30 IST
ಮೇಘನಾ
ಮೇಘನಾ   

‘ಮೋಸ ಎಂದರೆ ದೊಡ್ಡ ಪ್ರಮಾಣದಲ್ಲಿಯೇ ಮಾಡಬೇಕು ಎಂದೇನಿಲ್ಲ. ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ಒಂದಲ್ಲ ಒಂದು ಬಗೆಯಲ್ಲಿ ಮೋಸ ಮಾಡುತ್ತಲೇ ಇರುತ್ತಾರೆ. ಹಲವರು ಸಿಗ್ನಲ್‌ನಲ್ಲಿ ಕೆಂಪು ದೀಪ ಉರಿಯುತ್ತಿದ್ದಾಗಲೇ ದಾಟಿ ಹೋಗುತ್ತಾರೆ. ಪೊಲೀಸರೂ ಅದನ್ನು ನೋಡಿಯೂ ನೋಡದ ಹಾಗೆಯೇ ಉಳಿದುಬಿಡುತ್ತಾರೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಹಣ ಬರುವುದಿಲ್ಲ. ಇದೂ ಒಂದು ರೀತಿಯ ಮೋಸವೇ ತಾನೆ? ಇಂಥ ಮೋಸಗಳು ದಿನನಿತ್ಯ ನಡೆಯುತ್ತಲೇ ಇರುತ್ತವೆ’ ಹೀಗೆ ಒಂದೇ ಸಮನೆ ಮೋಸದ ಕುರಿತು ಮಾತನಾಡುತ್ತಿದ್ದರು ರಾಮಾಚಾರಿ. ಇದಕ್ಕೆ ಕಾರಣವೂ ಇತ್ತು. ಅವರು ಹೊಸ ಸಿನಿಮಾದ ಶೀರ್ಷಿಕೆಯಲ್ಲಿದ್ದ ‘ಮೋಸಗಾರ’ನನ್ನು ಸಮರ್ಥಿಸಿಕೊಳ್ಳುವ ಅನಿವಾರ್ಯತೆ ಅವರಿಗಿತ್ತು.

ಹೊಸ ಹುಡುಗ ರಾಮಾಚಾರಿ ತಮ್ಮದೇ ಹೆಸರಿನಲ್ಲಿ ‘ಮಿ.ಚೀಟರ್ ರಾಮಾಚಾರಿ’ ಎಂಬ ಸಿನಿಮಾವನ್ನು ನಿರ್ದೇಶಿಸುವುದರ ಜತೆಗೆ ನಾಯಕನಾಗಿಯೂ ನಟಿಸಿದ್ದಾರೆ. ರಾಯಚೂರು ಭಾಗದ ಒಂದಿಷ್ಟು ಸಿನಿ ವ್ಯಾಮೋಹಿಗಳು ಸೇರಿ ರೂಪಿಸಿರುವ ಈ ಚಿತ್ರವನ್ನು ಅದೇ ಭಾಗದಲ್ಲಿ 25 ದಿನಗಳ ಕಾಲ ಚಿತ್ರೀಕರಿಸಿದ್ದಾರೆ.

ದಿನನಿತ್ಯ ನಡೆಯುವ ಸಣ್ಣಪುಟ್ಟ ಮೋಸದ ಜತೆಗೆ ವ್ಯಭಿಚಾರ, ಡ್ರಗ್ಸ್‌ ಮಾಫಿಯಾ ಸಂಗತಿಗಳನ್ನೂ ಇಟ್ಟುಕೊಂಡು, ನೋಟು ಅಮಾನ್ಯ ಸಂದರ್ಭದಲ್ಲಿ ಏನೇನು ಮೋಸ ಆಯ್ತು ಎನ್ನುವುದನ್ನೆಲ್ಲ ಇಟ್ಟುಕೊಂಡು ಚಿತ್ರ ಕಟ್ಟಿದ್ದಾರೆ ರಾಮಾಚಾರಿ. ‘ನೋಡುಗನಿಗೆ ಪ್ರತಿಯೊಂದು ದೃಶ್ಯವೂ ಕನ್ನಡಿಯ ಹಾಗೆಯೇ ಕಾಣುತ್ತದೆ. ಚಿತ್ರಕ್ಕೆ ಒಂದು ಕ್ಲೈಮ್ಯಾಕ್ಸ್‌ ಇದೆ. ಆದರೆ ಅದು ನೋಡುಗ ತನ್ನ ಇಷ್ಟದ ಹಾಗೆ ಪೂರ್ತಿಗೊಳಿಸಿಕೊಳ್ಳಬಹುದು’ ಎಂಬ ವಿವರಣೆ ನಿರ್ದೇಶಕರದ್ದು.

ADVERTISEMENT

ಈ ಚಿತ್ರದ ತಾರಾಬಳಗದಲ್ಲಿ ಶ್ರೀಕರ್, ರಾಮಾಂಜನೇಯುಲು, ಶ್ರೀಧರ್, ಮೇಘನಾ, ರಾಶಿ ಮೇಘನಾ ಮುಂತಾದವರು ಇದ್ದಾರೆ. ಸಿನಿಮಾದಲ್ಲಿನ ಮೂರು ಹಾಡುಗಳಿಗೆ ಪರದ್ಯೋತ್ತನ್ ಸಂಗೀತ ನೀಡಿದ್ದಾರೆ. ಪ್ರವಿಣಾ ರವೀಂದ್ರ ಕುಲಕರ್ಣಿ ಈ ಚಿತ್ರಕ್ಕೆ ಹಣ ಹೂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.