‘ಮಾತು.. ಮಾತು.. ಮಾತು.. ನನ್ನ ಪ್ರೀತಿಯ ಹಾಬಿ ಮಾತು..’ ಎಂದು ನಕ್ಕರು ರಚಿತಾ ಗೌಡ. ಸೂರ್ಯಕಾಂತಿ ಧಾರಾವಾಹಿಯ ಕಾಂತಿ ಪಾತ್ರಧಾರಿ ರಚಿತಾ ಇಂಪಾದ ದನಿಯ ಒಡತಿ. ಪಿಯುಸಿ ಮುಗಿಸಿ ಕಾನೂನು ಪದವಿ ಕಲಿಯುವಾಸೆಯಿಂದ ಕಾಲೇಜು ಸೇರಿದ ರಚಿತಾ ಗೆಳತಿಯ ಸಂಪರ್ಕದಿಂದ ನಿರೂಪಕಿಯಾದರು.
ಮುಂತಾದ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದ ಅವರಿಗೆ ಆ ಮೂಲಕ ಧಾರಾವಾಹಿಗಳಲ್ಲಿ ನಟಿಸುವ ಅವಕಾಶಗಳು ಬಂದವು. ಅವುಗಳನ್ನು ನಿರಾಕರಿಸಲು ಮನಸ್ಸಾಗದೇ ಒಪ್ಪಿಕೊಂಡ ರಚಿತಾ ತುಂಬಾ ಚ್ಯೂಸಿ.
‘ಮೇಘ ಮಂದಾರ’ ಅವರು ನಟಿಸಿದ ಮೊದಲ ಧಾರಾವಾಹಿ. ‘ಬಂದೇ ಬರ್ತಾವ ಕಾಲ’, ‘ಸುಪ್ರಭಾತ’, ‘ಸಾಗುತ ದೂರಾ ದೂರಾ’, ‘ಮನೆಯೊಂದು ಮೂರು ಬಾಗಿಲು’ ಮುಂತಾದ ಧಾರಾವಾಹಿಗಳಲ್ಲಿ ಆಯ್ದ ಪಾತ್ರಗಳಲ್ಲಿ ಮಾತ್ರ ನಟಿಸುತ್ತಾ ಬಂದಿರುವ ರಚಿತಾಗೆ ನಟನೆಯ ಹಿನ್ನೆಲೆ ಇಲ್ಲ.ಅನಿರೀಕ್ಷಿತವಾಗಿ ಬಂದ ಅವಕಾಶಗಳಿಂದ ಕಲಿಯುತ್ತಾ ಹೋಗಿದ್ದಾಗಿ ಹೇಳುವ ಅವರಿಗೆ ಸಿನಿಮಾಗಳಲ್ಲಿ ನಟಿಸಬೇಕೆಂಬ ಹಂಬಲ ಇಲ್ಲ.
ಸದ್ಯಕ್ಕೆ ಸ್ಕೋಪ್ ಇದೆ ಎಂಬ ಕಾರಣಕ್ಕೆ ‘ಪಾರಿಜಾತ’ ಸಿನಿಮಾ ಒಪ್ಪಿಕೊಂಡಿದ್ದಾರೆ. ಜನಪ್ರಿಯ ಬ್ಯಾನರ್‌ಗಳಿಂದ ಬಂದ ಅವಕಾಶಗಳನ್ನು ಪಾತ್ರ ಇಷ್ಟವಾಗದ ಕಾರಣಕ್ಕೆ ನಿರಾಕರಿಸಿದ್ದಾರೆ. ಅಲ್ಲದೇ ಅವರಿಗೆ ಗ್ಲಾಮರ್ ಇಷ್ಟವಿಲ್ಲ ಹಾಗೂ ಕೆಟ್ಟ ಅನುಭವಗಳಾಗಬಹುದು ಎಂಬ ಆತಂಕ ಕೂಡ ಸಿನಿಮಾದಿಂದ ದೂರ ಉಳಿಯಲು ಕಾರಣವಾಗಿದೆ.
ಸಕಲೇಶಪುರದ ಈ ಸುಂದರಿ ‘ಸಾಗುತ ದೂರ ದೂರ’ ಧಾರಾವಾಹಿಯಲ್ಲಿ ಅಳುವ ಪಾತ್ರ ಮಾಡಿದ ನಂತರ ಅಂಥ ಪಾತ್ರಗಳಿಗೆ ಸೀಮಿತವಾಗುತ್ತಿರುವುದಾಗಿ ಹೇಳಿಕೊಳ್ಳುತ್ತಾರೆ. ‘ಜವಾಬ್ದಾರಿ ಇರುವ, ತ್ಯಾಗ ಮಾಡುವ ಮತ್ತು ಅಳುವ ಪಾತ್ರ ಇದ್ದರೆ ರಚಿತಾಗೆ ಕೊಡಿ ಎಂದು ರೇಗಿಸುತ್ತಾರೆ’ ಎನ್ನುವ ಅವರಿಗೆ ವಿಭಿನ್ನ ಪಾತ್ರಗಳನ್ನು ಮಾಡುವಾಸೆ ಇದೆ. ಅದರಲ್ಲೂ ದೇವಿಯ ಪಾತ್ರ ಮಾಡಬೇಕೆಂಬಾಸೆ ಕಾಡುತ್ತಿದೆ. ಸವಾಲು ಎದುರಿಸುವಂಥ ಹುಚ್ಚಿ ಪಾತ್ರಗಳನ್ನೂ ಇಷ್ಟಪಡುವ ಅವರು ‘ಅಳೋದನ್ನ ಎಂಜಾಯ್ ಮಾಡುತ್ತಿರುವ ಏಕೈಕ ನಟಿ ನಾನೇ ಇರಬೇಕು’ ಎನ್ನುತ್ತಾ ನಗುತ್ತಾರೆ.
ಸಹನಟರು ಮತ್ತು ನಿರ್ದೇಶಕರು ತಿದ್ದಿ ತೀಡಿದ ಪರಿಣಾಮ ಇಷ್ಟರಮಟ್ಟಿಗೆ ನಟನೆಯನ್ನು ರೂಢಿಸಿಕೊಂಡಿರುವುದಾಗಿ ಹೇಳುವ ರಚಿತಾ, ‘ಪಾತ್ರದ ರೀಡಿಂಗ್ ಕೊಟ್ಟ ತಕ್ಷಣ ಪಾತ್ರಕ್ಕೆ ಸಿದ್ಧವಾಗುತ್ತೇನೆ. ನನ್ನ ಮನಸ್ಸಿಗೆ ನಾಟುವ, ನನ್ನ ಬದುಕಿಗೆ ಕೊಂಚ ಹತ್ತಿರ ಎನಿಸುವ ಪಾತ್ರ ಇದ್ದರೆ ನಾನೇ ಆ ಪಾತ್ರವಾಗಿ ಬಿಡುತ್ತೇವೆ. ಅದು ಎಲ್ಲರಿಂದಲೂ ಸಾಧ್ಯವಿಲ್ಲ ಎಂದು ಕೆಲವರು ಹೇಳುತ್ತಾರೆ.
ಅದೇ ನನ್ನ ಪ್ಲಸ್ ಪಾಯಿಂಟ್’ ಎನ್ನುವ ರಚಿತಾ ಮನೆಯಲ್ಲಿ ತಮ್ಮ ವೃತ್ತಿಗೆ ಸಿಗುತ್ತಿರುವ ಬೆಂಬಲದಿಂದಲೂ ಖುಷಿಯಾಗಿದ್ದಾರೆ. ಮದುವೆ ನಂತರ ನಟನೆಯಲ್ಲಿ ಮುಂದುವರಿಯುವಾಸೆ ಇದ್ದರೂ ಪತಿಯ ಆಸೆಯನ್ನೂ ಪರಿಗಣಿಸುವುದಾಗಿ ಹೇಳುವ ಅವರು, ಎಡಿಟಿಂಗ್‌ನಲ್ಲಿ ಆಸಕ್ತಿ ಬೆಳೆಸಿಕೊಳ್ಳುತ್ತಿದ್ದಾರೆ. ‘ನಟನೆ ಬಿಟ್ಟರೂ, ಎಡಿಟಿಂಗ್ ಮುಂದುವರಿಸುವೆ. ಸದ್ಯಕ್ಕೆ ನಟನೆ, ಹವ್ಯಾಸವಾಗಿಯೂ, ವೃತ್ತಿಯಾಗಿಯೂ ಮುಂದುವರಿಯುತ್ತಿದೆ’ ಎನ್ನುತ್ತಾರೆ.
‘ನಾನು ತುಂಬಾ ಸಕಾರಾತ್ಮಕವಾಗಿ ಯೋಚಿಸುತ್ತೇನೆ’ ಎಂದು ನಗುವ ರಚಿತಾ ಬೇರೆಯವರು ಸಾಕಷ್ಟು ಕಾಡಿಬೇಡಿ ಪಡೆಯುವ ಅವಕಾಶಗಳು ತಮಗೆ ತಾನಾಗಿಯೇ ಒಲಿದು ಬರುತ್ತಿರುವುದರಿಂದ ಅದನ್ನು ಸದುಪಯೋಗಪಡಿಸಿಕೊಳ್ಳುತ್ತಿದ್ದೇನೆ ಎನ್ನುತ್ತಾರೆ. ಅವರ ಮಧುರ ದನಿಗೆ ಮೆಚ್ಚಿ ಡಬಿಂಗ್ ಮಾಡಲು ಕೂಡ ಕರೆಯಲಾಗಿದೆ. ಮೋಹಿನಿ ಆಟ್ಟಂ, ಫ್ರೀ ಸ್ಟೈಲ್, ವೆಸ್ಟರ್ನ್ ನೃತ್ಯಗಳನ್ನು ಮಾಡುವ ರಚಿತಾ- ಜನರು ತಮ್ಮನ್ನು ಪಾತ್ರಗಳ ಮೂಲಕ ಗುರುತಿಸುತ್ತಿರುವುದರ ಮುಂದೆ ಬೇರ್ಯಾವ ಸಂತೋಷವೂ ಇಲ್ಲ ಎನ್ನುತ್ತಾ ನಗೆ ಅರಳಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.