`ನರಸಿಂಹ ಸಿನಿಮಾ ಗೆಲ್ಲುವ ವಿಶ್ವಾಸವಿದೆ~.
`ಹೇಗೆ?~
`ಅಮ್ಮನ ಸೆಂಟಿಮೆಂಟ್ ಇರುವ ಯಾವ ಸಿನಿಮಾಗಳೂ ಫೇಲ್ ಆಗಿಲ್ಲ~.
ಹೌದು, ರವಿಚಂದ್ರನ್ ಪಂಚೆಯುಟ್ಟು `ಅಮ್ಮಯ್ಯ ಅಮ್ಮಯ್ಯ ಬಾರೆ~ ಎಂದು ಹಾಡಿದ ಯಾವ ಸಿನಿಮಾಗಳೂ ನೆಲಕಚ್ಚಿಲ್ಲ. ಆ ಆತ್ಮವಿಶ್ವಾಸವೇ ಯುಗಾದಿಯಂದು (ಮಾರ್ಚ್ 23) ತೆರೆ ಕಾಣುತ್ತಿರುವ `ನರಸಿಂಹ~ ಚಿತ್ರದ ಬಗ್ಗೆ ನಿರೀಕ್ಷೆಗಳನ್ನು ಮೂಡಿಸಿದೆ. ಇದು ಅವರೊಬ್ಬರ ನಿರೀಕ್ಷೆ ಮಾತ್ರವಲ್ಲ, ಗಾಂಧಿನಗರ ಕೂಡ `ಮಲ್ಲಿಕಾರ್ಜುನ~ ಬಗ್ಗೆ ನಿರೀಕ್ಷೆಗಳನ್ನು ಹೊಂದಿದೆ.
ಕಾರಣ ಇಷ್ಟೇ: ಇತ್ತೀಚಿನ ಚಿತ್ರಗಳ ಬಾಕ್ಸ್ ಆಫೀಸ್ ರಿಪೋರ್ಟ್ ರವಿಚಂದ್ರನ್‌ರ ಪಾಲಿಗೆ ಅಷ್ಟೇನೂ ಹಿತಕರವಾಗಿಲ್ಲ. ಕಾಮಕಸ್ತೂರಿ ನಮಿತಾ ಜೊತೆಗಿನ `ಹೂ~ ರಸಿಕರ ಕಿಚಾಯಿಸಿತಾದರೂ, ಆ ಚಿತ್ರದ್ದು ದೊಡ್ಡ ಗೆಲುವೇನಲ್ಲ. ನಂತರದ, `ಮಲ್ಲಿಕಾರ್ಜುನ~ ಹಾಗೂ `ನಾರಿಯ ಸೀರೆ ಕದ್ದ~ ಚಿತ್ರಗಳು ಕೇವಲ ಲೆಕ್ಕಕ್ಕಷ್ಟೇ ಬಂದು ಹೋದವು. `ಕಳ್ಳ ಮಳ್ಳ ಸುಳ್ಳ~ ಚಿತ್ರ ನಿರ್ಮಾಪಕರ ಬಂಡವಾಳವನ್ನು ವಾಪಸ್ ತಂದುಕೊಟ್ಟರೂ ಆ ಚಿತ್ರದಿಂದ ಸುದ್ದಿ ಮಾಡಿದ್ದು `ತುಪ್ಪ ಬೇಕಾ ತುಪ್ಪ~ ಎಂದು ಬರಿಗೈಯಲ್ಲೇ ಬಿಡುಬೀಸಾಗಿ ಕುಣಿದ ನಟಿ ರಾಗಿಣಿ. ಹಾಗಾಗಿ, ಸದ್ಯಕ್ಕೆ ದೊಡ್ಡ ಗೆಲುವೊಂದನ್ನು ನಿರೀಕ್ಷಿಸುತ್ತಿರುವ ರವಿ, `ನರಸಿಂಹ~ನ ಬಗ್ಗೆ ಆಶಾಭಾವ ಹೊಂದಿದ್ದಾರೆ.
`ನರಸಿಂಹ~ ಚಿತ್ರದಲ್ಲಿ ರವಿಚಂದ್ರನ್ ಅವರದ್ದು ಹತ್ತೂರ ಒಡೆಯನ ಪಾತ್ರ. ನಿರ್ದೇಶಕ ಮೋಹನ್ ಹೇಳುವಂತೆ, `ಗಂಜಿಯುಂಡು ನೆಲದ ಮೇಲೆ ಮಲಗುವ ಹತ್ತೂರು ಒಡೆಯನ ವಿಪರ್ಯಾಸದ ಕಥೆ~ ಚಿತ್ರದಲ್ಲಿದೆ. ಜಯಂತಿ, ರವಿಶಂಕರ್, ಸಾಧು ಕೋಕಿಲ ಚಿತ್ರದಲ್ಲಿದ್ದಾರೆ. ನಟಿ ಸಂಜನಾ ಕೂಡ ಕನಸುಗಾರನ ಜೊತೆ ಗೀತೆಯೊಂದರಲ್ಲಿ ಕುಣಿದಿದ್ದಾರೆ. ಹಂಸಲೇಖಾ ಅವರ ಸಂಗೀತ ಚಿತ್ರದ ಮತ್ತೊಂದು ವಿಶೇಷ. ಬಹಳ ದಿನಗಳ ನಂತರ ರವಿ-ಹಂಸ್ ಜೋಡಿ `ನರಸಿಂಹ~ ಚಿತ್ರದ ಮೂಲಕ ಒಗ್ಗೂಡಿದೆ.
`ಚಿತ್ರದ ಗೀತೆಗಳು ಸಂದರ್ಭಕ್ಕೆ ತಕ್ಕಂತಿವೆ. ಈ ಚಿತ್ರದಲ್ಲಿ ಪ್ರೇಕ್ಷಕರು ನನ್ನನ್ನು ಪ್ರಣಯೋನ್ಮಾದದ ಗೀತೆಗಳಲ್ಲಿ ನಿರೀಕ್ಷಿಸುವಂತಿಲ್ಲ~ ಎಂದು ರವಿಚಂದ್ರನ್ ನಿರೀಕ್ಷಣಾ ಜಾಮೀನಿನ ಹೇಳಿಕೆ ನೀಡಿದ್ದಾರಾದರೂ, ನಾಯಕಿ ನಿಕೇಶಾ ಪಟೇಲ್ ಅವರೊಂದಿಗಿನ ಪೋಸ್ಟರ್‌ಗಳನ್ನು ನೋಡಿದರೆ, ಚಿತ್ರದಲ್ಲಿ `ರವಿ ಛಾಪು~ ಇರುವ ಸುಳಿವು ಸಿಗುತ್ತದೆ.
ಕಳೆದ ಎರಡು ಮೂರು ವರ್ಷಗಳಿಂದ ರವಿಚಂದ್ರನ್ ಕೊಂಚ ಕಳೆಗುಂದಿದ್ದರಷ್ಟೇ. ಆದರೆ, 2012ರಲ್ಲಿ ಅವರು ಪೂರ್ಣ ಚಟುವಟಿಕೆಯಿಂದಿದ್ದಾರೆ.
`ನರಸಿಂಹ~ನ ನಂತರ ತಿಂಗಳ ಅಂತರದಲ್ಲಿ ತೆರೆಕಾಣಲು `ಕ್ರೇಜಿಲೋಕ~ ತುದಿಗಾಲಲ್ಲಿದೆ. ಕವಿತಾ ಲಂಕೇಶ್ ಈ ಚಿತ್ರದ ನಿರ್ದೇಶಕರು. ಕವಿತಾ ನಿರ್ದೇಶನ ಎಂದಮೇಲೆ `ಕ್ರೇಜಿಲೋಕ~ದ ಬಗ್ಗೆ ನಿರೀಕ್ಷೆಗಳನ್ನು ಇಟ್ಟುಕೊಳ್ಳಲು ಅಡ್ಡಿಯಿಲ್ಲ.
`ಕ್ರೇಜಿಲೋಕ~ದ ನಂತರ `ಪರಮಶಿವ~ನ ಸರದಿ. ಶಿವನ ಶೂಟಿಂಗ್ ಪ್ರಗತಿಯಲ್ಲಿದೆ.
`ದಶಮುಖ~ ರವಿಚಂದ್ರನ್ ಮುಖ್ಯ ಪಾತ್ರದಲ್ಲಿರುವ ಮತ್ತೊಂದು ಚಿತ್ರ. ರವಿ ಶ್ರೀವತ್ಸ ನಿರ್ದೇಶನದ ಈ ಚಿತ್ರದ ಮೂಲಕ, ಈಸ್ಟ್‌ಮನ್ ಕಲ್ಲರ್ ದಿನಗಳ ನಟಿ ಸರಿತಾ ಮತ್ತೆ ಕನ್ನಡ ಸಿನಿಮಾಕ್ಕಾಗಿ ಬಣ್ಣಹಚ್ಚಿಕೊಳ್ಳುತ್ತಿದ್ದಾರೆ. ಈ ನಡುವೆ, ಮಲಯಾಳಂನ `ಟ್ರಾಫಿಕ್~ ಚಿತ್ರದ ಕನ್ನಡದ ರೀಮೇಕ್ ಸೆಟ್ಟೇರುವ ಹಂತದಲ್ಲಿದೆ. ಈ ಚಿತ್ರದಲ್ಲಿ ರವಿಚಂದ್ರನ್‌ಗೆ ನಾಯಕಿಯಾಗಿ ಉಪೇಂದ್ರರ ಪತ್ನಿ ಪ್ರಿಯಾಂಕ ನಟಿಸುವ ಸಾಧ್ಯತೆಯಿದೆ. `ಮಲ್ಲ~ ಚಿತ್ರದಲ್ಲಿ ಕಚಗುಳಿಯಿಟ್ಟಿದ್ದ ಈ ಜೋಡಿಯನ್ನು ಪ್ರೇಕ್ಷಕರಿನ್ನೂ ಮರೆತಿಲ್ಲ.
ರವಿಚಂದ್ರನ್ ಬಗ್ಗೆ ಸದ್ಯಕ್ಕೆ ಮಾತನಾಡುವುದೆಂದರೆ, `ಮಂಜಿನಹನಿ~ ಚಿತ್ರದ ಪ್ರಸ್ತಾಪವಿಲ್ಲದೆ ಮಾತು ಪೂರ್ಣಗೊಳ್ಳುವುದಿಲ್ಲ. `ಶಾಂತಿ ಕ್ರಾಂತಿ~ ನಂತರ ಅವರು ಈ ಮಟ್ಟಿಗಿನ ಮಹತ್ವಾಕಾಂಕ್ಷೆಯಲ್ಲಿ ತೊಡಗಿಸಿಕೊಂಡ ಮತ್ತೊಂದು ಚಿತ್ರದ ಉದಾಹರಣೆಯಿಲ್ಲ.
ಸ್ವಾತಿಮುತ್ತು ಕಟ್ಟುವ ತೀವ್ರತೆಯಲ್ಲಿ `ಮಂಜಿನ ಹನಿ~ ಸಿದ್ಧಗೊಳ್ಳುತ್ತಿದೆ. ನೆನೆಗುದಿಗೆ ಬಿದ್ದಿರುವ `ಮಂಜಿನ ಹನಿ~ ಇನ್ನಾರು ತಿಂಗಳಲ್ಲಿ ಸಿದ್ಧಗೊಳ್ಳುತ್ತದಂತೆ. ಅಂದರೆ, 2012ರಲ್ಲೇ ಚಿತ್ರ ತೆರೆಕಾಣುತ್ತದೆ ಎಂದಾಯಿತು. ಅಲ್ಲಿಗೆ, 2012ರಲ್ಲಿ ರವಿಚಂದ್ರನ್ ನಟನೆಯ ಐದು ಚಿತ್ರಗಳಾದರೂ ತೆರೆಕಾಣುವ ಸಾಧ್ಯತೆಯಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.