ADVERTISEMENT

ರಾಕ್‌ಲೈನ್ ಇನ್ನೊಂದು ನಡೆ: ಹೊಸ ಮಲ್ಟಿಪ್ಲೆಕ್ಸ್‌ನಲ್ಲಿ ಪರಮಾತ್ಮ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2011, 19:30 IST
Last Updated 6 ಅಕ್ಟೋಬರ್ 2011, 19:30 IST

ಬುದ್ಧಿವಂತ ನಿರ್ಮಾಪಕ, ವ್ಯವಹಾರ ಚತುರ ಎಂಬ ಗುಣವಿಶೇಷಣಗಳಿಗೆ ಪಕ್ಕಾಗಿರುವ ರಾಕ್‌ಲೈನ್ ವೆಂಕಟೇಶ್ ನಾಲ್ಕು ಪರದೆಗಳ ಮಲ್ಟಿಪ್ಲೆಕ್ಸ್ ಕಟ್ಟಿಸಿದ್ದಾರೆ. ನಾಲ್ಕೂ ತೆರೆಗಳ ಮೇಲೆ ಈ ವಾರ `ಪರಮಾತ್ಮ~ ಚಿತ್ರ ಪ್ರದರ್ಶನ. ಅದರೊಂದಿಗೆ `ರಾಕ್‌ಲೈನ್ ಸಿನಿಮಾಸ್~ ಪ್ರಾರಂಭ.

ಜಾಲಹಳ್ಳಿ ಕ್ರಾಸ್ ಬಳಿ ಒಂದು ಎಕರೆ ಜಾಗದಲ್ಲಿ ನಿರ್ಮಿತವಾಗಿರುವ `ರಾಕ್‌ಲೈನ್ ಮಾಲ್ ಹಾಗೂ ಸಿನಿಮಾಸ್~ ಕಟ್ಟಡದ್ದು ಮೂರು ವರ್ಷದ ಯೋಜನೆ. ಈಗ ಕಾಮಗಾರಿ ಮುಗಿದಿದ್ದು, ಇನ್ನು ಮೂರು ತಿಂಗಳಲ್ಲಿ ಮಾಲ್ ಕೂಡ ಶುರುವಾಗಲಿದೆ.

ನಾಲ್ಕು ಪರದೆಗಳ ಎದುರಿನ ಒಟ್ಟು ಸೀಟುಗಳ ಸಂಖ್ಯೆ 960. ಟಿಕೇಟ್ ದರವನ್ನು ಇನ್ನೂ ನಿಗದಿ ಪಡಿಸಿಲ್ಲ ಎಂದ ರಾಕ್‌ಲೈನ್, ಕನ್ನಡ ಚಿತ್ರಗಳಿಗೆ ಪರಭಾಷಾ ಚಿತ್ರಗಳಿಗಿಂತ ಕಡಿಮೆ ದರ ನಿಗದಿಪಡಿಸುವುದಾಗಿ ಭರವಸೆ ಕೊಟ್ಟರು.

ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಹಾಗೂ ಪುನೀತ್ ರಾಜ್‌ಕುಮಾರ್ ದಂಪತಿಗಳು ಟೇಪ್ ಕತ್ತರಿಸುವ ಮೂಲಕ `ರಾಕ್‌ಲೈನ್ ಸಿನಿಮಾಸ್~ ಉದ್ಘಾಟಿಸಿದ್ದು ವಿಶೇಷ. ನಿರ್ಮಾಪಕರ ದಂಡು ಹಾಗೂ ಚಿತ್ರೋದ್ಯಮದ ಅನೇಕರು ಈ ಸಂದರ್ಭಕ್ಕೆ ಸಾಕ್ಷಿಯಾಗಿದ್ದರು.

ಕಬ್ಬಿನ ಜಲ್ಲೆಯಲ್ಲಿ ಒಂದು ಹನಿ ರಸವನ್ನೂ ಬಿಡದೆ ಅರೆಯುವಂತೆ ಮಲ್ಟಿಪ್ಲೆಕ್ಸ್‌ಗಳು ವ್ಯಾಪಾರ ನಡೆಸುತ್ತಿವೆ. ಅದರಿಂದ ಚಿತ್ರೋದ್ಯಮಕ್ಕೂ ಒಳ್ಳೆಯದಾಗುತ್ತಿದೆ. ಹಾಗಾಗಿ ಈ ವ್ಯಾಪಾರಕ್ಕೆ ಕೈಹಾಕಿದೆ ಎಂದು ರಾಕ್‌ಲೈನ್ ತಮ್ಮ ಈ ಯೋಜನೆಯ ಉದ್ದೇಶವನ್ನು ಬಿಚ್ಚಿಟ್ಟರು. ಇಟಲಿ, ಸ್ಪೇನ್ ಮೊದಲಾದ ದೇಶಗಳಿಂದ ತರಿಸಿದ ಉಪಕರಣಗಳಿಂದ ಮಲ್ಟಿಪ್ಲೆಕ್ಸ್ ಸಜ್ಜುಗೊಳಿಸಿರುವುದರಿಂದ ಚಿತ್ರ ಹಾಗೂ ಧ್ವನಿಯ ಗುಣಮಟ್ಟ ಅತ್ಯುತ್ತಮವಾಗಿರುತ್ತದೆ ಎಂದೂ ರಾಕ್‌ಲೈನ್ ಹೇಳಿದರು.

ಆಸ್ಟ್ರೇಲಿಯಾದಲ್ಲಿ ಮಾರ್ಕೆಟಿಂಗ್ ವಿಷಯದಲ್ಲಿ ಕಲಿತು ಬಂದಿರುವ ಮಗ ಯತೀಶ್ ದೂರದೃಷ್ಟಿಯಿಂದ ಈ ಹೊಸ ಉದ್ಯಮಕ್ಕೆ ಕಾಲಿಟ್ಟ ಗುಟ್ಟನ್ನೂ ಅವರು ಹಂಚಿಕೊಂಡರು. ಇನ್ನೊಬ್ಬ ಮಗ ಅಭಿಲಾಷ್ ಅತಿಥಿ ಸತ್ಕಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.