ADVERTISEMENT

ರಾಜೇಂದ್ರಸಿಂಗ್ ದ್ವಿಪಾತ್ರ

ಗುಡಿಹಳ್ಳಿ ನಾಗರಾಜ
Published 22 ಸೆಪ್ಟೆಂಬರ್ 2011, 19:30 IST
Last Updated 22 ಸೆಪ್ಟೆಂಬರ್ 2011, 19:30 IST

ಕ್ಯಾಮೆರಾಮನ್ ರಾಜೇಂದ್ರ ಸಿಂಗ್ ಅನ್ನಿ, ನಿರ್ದೇಶಕ ರಾಜೇಂದ್ರ ಸಿಂಗ್ ಅನ್ನಿ- ಎರಡೂ ಒಬ್ಬರೇ. ಸಂಚಿಕೆ ನಿರ್ದೇಶಕ ಎನ್ನಿ, ಪ್ರಧಾನ ನಿರ್ದೇಶಕ ಎನ್ನಿ- ಅವೆರಡರಲ್ಲೂ ಒಬ್ಬರೇ ಸಿಂಗ್.

ಮೆಗಾ ಧಾರಾವಾಹಿಗಳಲ್ಲಿ ಸಾಮಾನ್ಯವಾಗಿ ಪ್ರಧಾನ ನಿರ್ದೇಶಕ ಹಾಗೂ ಸಂಚಿಕೆ ನಿರ್ದೇಶಕ ಎಂದು ಇಬ್ಬಿಬ್ಬರಿರುತ್ತಾರೆ. ಸಂಚಿಕೆ ನಿರ್ದೇಶಕರ ಹೆಸರು ಶೀರ್ಷಿಕೆಯಲ್ಲಿ ಕಾಣಿಸದಿರಬಹುದು. ಆದರೆ, ಬಹುಪಾಲು `ಮೆಗಾ~ಗಳಲ್ಲಿ ಸಂಚಿಕೆ ನಿರ್ದೇಶಕ ಇದ್ದೇ ಇರುತ್ತಾನೆ.

ರಾಜೇಂದ್ರಸಿಂಗ್ ಧಾರಾವಾಹಿಗಳಲ್ಲಿ ಮಾತ್ರ ಈ ಎರಡೂ ಒಬ್ಬರೇ. ಅಲ್ಲಿಗೆ ಒಂದರ್ಥದಲ್ಲಿ ನಾಲ್ಕು ಪಾತ್ರಗಳು. ಅತಿ ಹೆಚ್ಚು ಮೆಗಾ ಧಾರಾವಾಹಿ ನಿರ್ದೇಶಿಸಿದ ಹೆಸರೂ ಅವರಿಗೆ ಇದೆ.

`ಸ್ತ್ರೀ~, `ಬದುಕು~, `ಬೃಂದಾವನ~, `ಬಾಂಧವ್ಯ~- ಹೀಗೆ ಸಾಲು ಸಾಲು `ಮೆಗಾ~ಗಳನ್ನು ಅವರು ನಿರ್ದೇಶಿಸಿದ್ದಾರೆ. ಎಲ್ಲವಕ್ಕೂ ಅವರದೇ ಕ್ಯಾಮೆರಾದ ಕಣ್ಣು. ಇದೀಗ `ಮೂಕಾಂಬಿಕೆ~ಗೆ ಹೈದರಾಬಾದ್‌ನಲ್ಲಿ ಶೂಟಿಂಗ್ ನಡೆದಿದೆ. ಶೀಘ್ರದಲ್ಲೇ ಈಟಿವಿಯಲ್ಲಿ ಅದರ ಪ್ರಸಾರ ಆರಂಭವಾಗಲಿದೆ. ಅಂದಹಾಗೆ ಅದರ ಕ್ಯಾಮೆರಾಮನ್ ಸಹ ಅವರೇ.

ಕ್ಯಾಮೆರಾ ಹಾಗೂ ನಿರ್ದೇಶನ ಎರಡನ್ನೂ ಒಟ್ಟಿಗೆ ಹೇಗೆ ನಿಭಾಯಿಸ್ತೀರಿ?
ಬಹಳ ಖುಷಿಯಿಂದ ನಿರ್ವಹಿಸ್ತೇನೆ.

ಹೊರೆ ಆಗಲ್ವೆ?
ಇಲ್ಲ. ಇನ್ನೂ ಸುಲಭ ಆಗುತ್ತೆ.

ADVERTISEMENT

ಹೇಗೆ?
ನಿರ್ದೇಶಕನ ಮನಸ್ಸಲ್ಲಿ ಇರೋದನ್ನ ಕ್ಯಾಮೆರಾಮನ್ ಜಾರಿಗೊಳಿಸಬೇಕು. ಎರಡೂ ನಾನೇ ಆಗಿರೋದರಿಂದ ಸುಲಭ ಆಗುತ್ತೆ.

ಎರಡು ಭಿನ್ನ ಸೃಜನಶೀಲ ಕ್ರಿಯೆಗಳು ಎರಕಗೊಳ್ಳವುದು ಹೇಗೆ?
ಎರಡಕ್ಕೂ ಬೇಕಾಗಿರುವುದು ಒಂದೇ ರೀತಿಯ ಕ್ರಿಯೇಟಿವಿಟಿ. ಅಧ್ಯಯನ, ಅನುಭವ, ಜಗತ್ತಿನ ನಾನಾ ಭಾಷೆಯ ಸಿನಿಮಾ, ಕಿರುತೆರೆ ಶೋಗಳ ವೀಕ್ಷಣೆಯಿಂದ ನನ್ನೊಳಗೊಬ್ಬ ನಿರ್ದೇಶಕ ರೂಪುಗೊಳ್ತಾನೆ.
 
ತೆರೆಯ ಹಿಂದೆ ಕ್ರಿಯಾಶೀಲನಾಗಲು ಬಾಲ್ಯದಿಂದಲೇ ಕನಸು ಕಾಣುತ್ತಿದ್ದೆ. ಸಿನಿಮಾಟೊಗ್ರಫಿ  ಮಾಡಿಕೊಂಡು ಕ್ಯಾಮೆರಾಮನ್‌ಗೆ ಬೇಕಾದ ಸಿದ್ಧತೆ ಮಾಡಿಕೊಂಡೆ.

ಕ್ಯಾಮೆರಾಮನ್, ನಿರ್ದೇಶಕ ದ್ವಿಪಾತ್ರ ನಿರ್ವಹಿಸುವವರು ಅಪವಾದವೆಂಬಂತೆ ಕೆಲ ಉದಾಹರಣೆ ಇರಬಹುದು. ಆದರೆ ನಿರಂತರವಾಗಿ ಆ ಕೆಲಸ ಮಾಡುತ್ತಿರುವವರು ಕನ್ನಡ ಕಿರುತೆರೆಯ ಮಟ್ಟಿಗೆ ನೀವೇ.

ಹೌದು. ರೈಟ್ ಪ್ರಮ್ ದಿ ಡೇ ಒನ್ ನಾನು ಕಿರುತೆರೆಯಲ್ಲಿ ಕ್ರಿಯಾಶೀಲನಾಗಿದ್ದೇನೆ. 1987-88ರಲ್ಲಿ `ಬಾಲ ಏಸು~ ಟೆಲಿಫಿಲಂ ಮಾಡಿದೆ. ಅಲ್ಲಿಂದ ಸತತವಾಗಿ ಕ್ಯಾಮೆರಾ, ನಿರ್ದೇಶನ ಎರಡನ್ನೂ ಮಾಡ್ತಾ ಇದ್ದೇನೆ.

ಅಶೋಕ ಕಶ್ಯಪ್, ಅಶೋಕ ನಾಯ್ಡು, ನಾಗರಾಜ ಆದವಾನಿ ಮುಂತಾದವರು ಕ್ಯಾಮೆರಾ, ನಿರ್ದೇಶನ ಎರಡನ್ನೂ ಮಾಡಿದ್ದಾರೆ. ಆದರೆ ಎರಡೂ ಒಟ್ಟೊಟ್ಟಿಗಿನ ನಿರಂತರತೆಯಲ್ಲಿ ನನ್ನದು ದಕ್ಷಿಣ ಭಾರತದಲ್ಲೇ ದಾಖಲೆ ಅಂತ ಹೇಳ್ತಾರೆ.

ಈ ವಿಷಯದಲ್ಲಿ ನಿಮಗೆ ನೀವೇ ಸಾಟಿ. ನಿಮ್ಮಳಗಿನ ನಿರ್ದೇಶಕ ಮತ್ತು ಕ್ಯಾಮೆರಾಮನ್ ಜತೆ ತಾಕಲಾಟ ಬರುವುದಿಲ್ಲವೆ?
ನಾನು ಮೊದಲೇ ಹೇಳಿದ ಹಾಗೆ ಹೆಚ್ಚಾಗಿ ಅನುಕೂಲವೇ ಆಗಿದೆ. ಇಬ್ಬರಿಗೂ ಒಳ್ಳೆಯ ತಿಳಿವಳಿಕೆ ಇದೆ. ಅಷ್ಟಕ್ಕೂ ನಿರ್ದೇಶಕ ಏನನ್ನೇ ಆಗಲಿ, ಕ್ಯಾಮೆರಾ ಕಣ್ಣಿನಿಂದ ತೋರಿಸಬೇಕು. ಎರಡೂ ನಾನೇ ಆಗಿರುವುದರಿಂದ ಒಳ್ಳೆಯದೇ ಆಗಿದೆ.

ಕ್ಯಾಮೆರಾಮನ್ ಚೆನ್ನಾಗಿ ದೃಶ್ಯೀಕರಿಸಬಹುದು ಅನಿಸಿದ್ದನ್ನು ಕೆಲವು ಸಲ ಮಾಡಲಿಕ್ಕಾಗದೇ ಇರಬಹುದು. ಯಾಕೆಂದರೆ ಅವನ ಸೂತ್ರಧಾರ ನಿರ್ದೇಶಕ. ಸಹಜವಾಗಿ ನಿರ್ದೇಶಕನಿಗೆ ಕೆಲವು ಮಿತಿಗಳು ಇರುತ್ತವೆ. ಆಗ ಕ್ಯಾಮೆರಾಮನ್ ನೊಂದುಕೊಳ್ತಾನೆ. ಕೆಲವೊಮ್ಮೆ ನನಗೆ ಹಾಗಾಗಿದೆ.

ಟಿವಿ ಧಾರಾವಾಹಿಗಳ ಚಿತ್ರೀಕರಣ ಹೆಚ್ಚಾಗಿ ಮನೆಗಳಲ್ಲೇ ನಡೆಯುತ್ತದೆ. ಹಾಗಾಗಿ ನಿಮ್ಮ ದ್ವಿಪಾತ್ರ ಹಗುರ ಅನಿಸ್ತದೆಯಾ?
ಹಾಗೇನಿಲ್ಲ. ಮುಕ್ಕಾಲು ಬಾಗ ಚಿತ್ರೀಕರಣ ಬೆಂಗಳೂರಿನ ಶೂಟಿಂಗ್ ಮನೆಗಳಲ್ಲಿ ನಡೆಯುತ್ತೆ, ನಿಜ. 

ಆ ಕಾರಣಕ್ಕೆ ಹಗುರಂತ ಏನೂ ಇಲ್ಲ. ಎರಡೂ ಪಾತ್ರ ನಿರ್ವಹಿಸಲೇಬೇಕು. ಹೊರಾಂಗಣಕ್ಕೆ ಬೆಂಗಳೂರು ಸಮೀಪದ ಹಳ್ಳಿ, ಹಸಿರು, ಬಂಡೆಗಳ ಪರಿಸರಕ್ಕೆ ಹೋಗ್ತೇವೆ.

ಯಾಕೆ ದೂರ ಹೋಗೋಕಾಗಲ್ವೆ? ಸಮುದ್ರ ತೀರ ಅಥವಾ ಉತ್ತರ ಕರ್ನಾಟಕ...
ಕೆಲವು ದೃಶ್ಯಗಳಿಗೆ ವಿಶಾಲವಾದ ಬಯಲು ಬೇಕು ಅನಿಸುತ್ತೆ. ಉತ್ತರ ಕರ್ನಾಟಕದಲ್ಲಿ ಅದರಲ್ಲೂ ಹೈದರಾಬಾದ್ ಕರ್ನಾಟಕದಲ್ಲಿ ಅಂತಹ ವಿಸ್ತಾರ ಪ್ರದೇಶಗಳಿವೆ.

ಏಕಾಕಿತನ ತೋರಿಸಬೇಕಾದರೆ ಇಂತಹ ಕಡೆ ವ್ಯಕ್ತಿ ನಡೆದು ಬರುವ ದೃಶ್ಯ ಚಿತ್ರೀಕರಿಸುವುದು ಸೂಕ್ತ ಅಂತ ನನ್ನೊಳಗಿನ ಕ್ಯಾಮೆರಾಮನ್ ಹಾಗೂ ನಿರ್ದೇಶಕ ಇಬ್ಬರಿಗೂ ಒಟ್ಟಿಗೇ ಅನಿಸುತ್ತೆ. ಆದರೆ ಎಲ್ಲವನ್ನೂ ಬಜೆಟ್ ನಿರ್ಧಾರ ಮಾಡುತ್ತೆ!

ಒಳ್ಳೆಯ ಕ್ಯಾಮೆರಾಮನ್ ಆಗಿದ್ದುಕೊಂಡು ಇತರರ ನಿರ್ದೇಶನದ ಧಾರಾವಾಹಿಗಳಿಗೆ ಕೆಲಸ ಮಾಡಿದ್ದೀರಲ್ಲವೆ?
ಅವೂ ಮಾಡಿದ್ದೇನೆ. ಸೇತುರಾಮ್‌ರ `ಮಂಥನ~ ಸೇರಿದಂತೆ ಹಲವು ಧಾರಾವಾಹಿಗಳಿಗೆ ಬರೀ ಕ್ಯಾಮೆರಾಮನ್ ಆಗಿ ಕೆಲಸ ಮಾಡಿದ್ದೇನೆ. ಆದರೆ ದ್ವಿಪಾತ್ರವೇ ಹೆಚ್ಚು.

ಹಾಗಾದರೆ ನಿಮ್ಮದು ದಾಖಲೇನೆ ಸರಿ. ಹೀಗೆ ಹೆಚ್ಚಿನ ಹೊರೆಯಾದರೆ ಕಲಾವಿದರ ಮೇಲೆ ನಿಮಗೆ ನಿಯಂತ್ರಣ ಉಳಿಯುತ್ತದೆಯೇ?
ಅದೇನು ತೊಂದ್ರೆ ಇಲ್ಲ. ವೃತ್ತಿ ಕಲಾವಿದರಾದರೆ ತೊಂದರೆ ಇಲ್ಲವೇ ಇಲ್ಲ. ಸ್ವಲ್ಪ ಹೇಳಿದ ತಕ್ಷಣ ಎಲ್ಲ ಅರಿತುಕೊಳ್ತಾರೆ. ಭಾವನೆಗಳನ್ನು ಹೇಗೆ ನಿಭಾಯಿಸಬೇಕು ಎನ್ನುವ ಬೇಸಿಕ್ ವಿಷಯ ಅವರಿಗೆ ಗೊತ್ತಿರ‌್ತದೆ. ಹೊಸಬರಾದರೆ ಸ್ವಲ್ಪ ಕಷ್ಟ.

ಕ್ಯಾಮೆರಾ, ನಿರ್ದೇಶನ ಒಟ್ಟಿಗೇ ಮಾಡಿ. ಆದರೆ ಕೆಲಸ ಹಗುರ ಮಾಡಿಕೊಳ್ಳಲು ಸಂಚಿಕೆ ನಿರ್ದೇಶಕರ ಸಹಾಯ ಪಡೆಯಬಹುದಲ್ವೆ?
ಇಲ್ಲ. ಎಲ್ಲ ನಾನು ಮಾಡಿದಾಗಲೇ ಸಂತೋಷ.
 
 
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.