ADVERTISEMENT

`ರಾಧನ ಗಂಡ' ಮುಕ್ತ ಮುಕ್ತ...

​ಪ್ರಜಾವಾಣಿ ವಾರ್ತೆ
Published 13 ಜೂನ್ 2013, 19:59 IST
Last Updated 13 ಜೂನ್ 2013, 19:59 IST

ವಿವಾದಕ್ಕೂ ಈ ಚಿತ್ರಕ್ಕೂ ತುಂಬಾ ನಂಟು. ಶೀರ್ಷಿಕೆಯಿಂದ ಕಥೆಯವರೆಗೂ ಒಂದಿಲ್ಲೊಂದು ಸವಾಲನ್ನು ಎದುರಿಸುತ್ತಲೇ ಬಂದ `ರಾಧನ ಗಂಡ'ನಿಗೆ ಕೊನೆಗೂ ಬಿಡುಗಡೆಯ ಭಾಗ್ಯ ಸಿಕ್ಕಿದೆ. ಚಿತ್ರ ಈ ವಾರ ತೆರೆಕಾಣುತ್ತಿದೆ ಎಂಬ ನೆಮ್ಮದಿಯ ಛಾಯೆಯಷ್ಟೆ ಚಿತ್ರತಂಡದ ಮುಖದಲ್ಲಿದ್ದದ್ದು.

ನಿರ್ದೇಶಕ, ನಿರ್ಮಾಪಕರೆಲ್ಲರ ಮಾತುಗಳನ್ನೂ ಆಡಬೇಕಾದ ಸ್ಥಿತಿ ನಟ ಕೋಮಲ್‌ರದ್ದು. ಆದರೆ ಸ್ವಂತ ನಿರ್ಮಾಣದ `ನಂದೀಶ' ಚಿತ್ರದ ಸೋಲಿನೊಂದಿಗೆ ತಮ್ಮ ಗ್ರಾಫ್ ಮಾರುಕಟ್ಟೆಯಲ್ಲಿ ಕುಸಿದಿದೆ ಎಂಬ ಆತಂಕ ಅವರ ಮಾತಿನಲ್ಲಿತ್ತು.

ತಮ್ಮ ಚಿತ್ರಕ್ಕೆ ಪದೇಪದೇ ವಿವಾದಗಳು ಮೆಟ್ಟಿಕೊಂಡಿದ್ದು ಅವರಿಗೆ ಬೇಸರ ತಂದಿದೆ. `ರಾಧಿಕಾಳ ಗಂಡ' ಎಂಬ ಶೀರ್ಷಿಕೆ ನಟಿ ರಾಧಿಕಾರನ್ನು ಸೂಚಿಸುತ್ತದೆ ಎಂಬ ತಕರಾರು, ರಾಜಕೀಯ ಒತ್ತಡಗಳಿಗೆ ಮಣಿದು ಹೆಸರು ಬದಲಿಸುವಂತಾಯಿತು. ಅದರ ಪರಿಣಾಮವೇ ಇರಬೇಕು, ಈ ಚಿತ್ರದ ಅಡಿಶೀರ್ಷಿಕೆ `ನೀನು ತುಂಬಾ ಸ್ವೀಟಿ' ಎಂದು ಬದಲಾಗಿದೆ.

`ಸ್ವೀಟಿ' ರಾಧಿಕಾ ನಟಿಸುತ್ತಿರುವ ಹೊಸ ಚಿತ್ರ. ಇದೇನು ಹೀಗೆ ಎಂದು ಕೇಳಿದರೆ `ಅವರು ತಲೆಕೆಡಿಸಿಕೊಂಡಿದ್ದು ರಾಧಿಕಾ ಹೆಸರಿಗೆ ಮಾತ್ರ, ಸ್ವೀಟಿಗೆ ತಲೆಕೆಡಿಸಿಕೊಂಡಿಲ್ಲ' ಎಂದು ವ್ಯಂಗ್ಯದ ಬಾಣ ಬಿಟ್ಟರು ಕೋಮಲ್.

ಇದು ಮಲಯಾಳಂ ಚಿತ್ರದ ರೀಮೇಕ್ ಎಂಬ ವಾದವೂ ಚಿತ್ರತಂಡವನ್ನು ಕೋರ್ಟ್ ಕಟಕಟೆಯನ್ನೇರುವಂತೆ ಮಾಡಿತ್ತು. ಅಲ್ಲಿ ಜಯಿಸಿ ಬಂದ ಚಿತ್ರತಂಡಕ್ಕೆ ಸೆನ್ಸಾರ್ ಮಂಡಳಿಯಲ್ಲೂ ವಿಘ್ನ ಎದುರಾಗಿತ್ತು. ಪುಟ್ಟಪರ್ತಿ ಸಾಯಿಬಾಬಾರನ್ನು ಹೋಲುವ ಪಾತ್ರವೊಂದಕ್ಕೆ ಸೆನ್ಸಾರ್ ಮಂಡಳಿ ಅಸಮ್ಮತಿ ಸೂಚಿಸಿತ್ತು.

ಕೊನೆಗೆ ಗ್ರಾಫಿಕ್ ತಂತ್ರಜ್ಞಾನ ಬಳಸಿ ಆ ಪಾತ್ರದ ಕೂದಲನ್ನು ತೆಗೆದು ಬೇರೆ `ಲುಕ್' ನೀಡಬೇಕಾಯಿತು. `ನಮಗೆ ಆಗದವರಾರೋ ಚಿತ್ರಕ್ಕೆ ಮುಹೂರ್ತ ಇಟ್ಟುಕೊಟ್ಟಿರಬೇಕು' ಎಂದು ಚಟಾಕಿ ಹಾರಿಸಿದರು ಕೋಮಲ್.

ಕನ್ನಡ ತಕ್ಕಮಟ್ಟಿಗೆ ಬಲ್ಲ ನಿರ್ದೇಶಕ ಮುರುಗನ್, ತಮಿಳಿನಲ್ಲಿ ರಚಿಸಿದ ಸಂಭಾಷಣೆಗಳನ್ನು ಕನ್ನಡಕ್ಕೆ ತರ್ಜುಮೆ ಮಾಡಲಾಗಿದೆಯಂತೆ. ಚಿತ್ರದ ವಸ್ತು ಚೆನ್ನಾಗಿದೆ. ನಿರುದ್ಯೋಗಿಯೊಬ್ಬನ ಬದುಕು, ಪ್ರೀತಿ, ಮದುವೆಯ ಸುತ್ತ ಕಥೆ ಸಾಗುತ್ತದೆ ಎಂದು ಕೋಮಲ್ ವಿವರಣೆ ನೀಡಿದರು.

ಮಣಿಕಾಂತ್ ಕದ್ರಿ ಸಂಗೀತದ ಹಾಡುಗಳು ಜನರಿಗೆ ಇಷ್ಟವಾಗಿದೆ. ಹಾಗೆಯೇ ಸಿನಿಮಾವನ್ನೂ ಇಷ್ಟಪಡುತ್ತಾರೆ ಎಂಬ ವಿಶ್ವಾಸ ಅವರದು. ನಿರ್ಮಾಪಕ ರವಿಕುಮಾರ್ ಅವರ ಮುಂದಿನ ಚಿತ್ರಕ್ಕೂ ಕೋಮಲ್ ಅವರೇ ನಾಯಕರಂತೆ.ಕೋಮಲ್‌ಗೆ ಜೋಡಿಯಾಗಿರುವುದು ಮಲಯಾಳಿ ಬೆಡಗಿ ಪೂರ್ಣ. ಚಿತ್ರದ ಕೊನೆಯ ಪತ್ರಿಕಾಗೋಷ್ಠಿಗೆ ಅವರು ಗೈರುಹಾಜರಾಗಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.